ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ! – ಯುದ್ಧ ಘೋಷಿಸಿದ ಇಸ್ರೇಲ್

ಇಸ್ರೇಲ್: ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯ ಪ್ರದೇಶದಿಂದ ಭಯೋತ್ಪಾದಕರು ಶನಿವಾರ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಭಯೋತ್ಪಾದಕರು ಶನಿವಾರ ಮುಂಜಾನೆ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಮಾಸ್ ಭಯೋತ್ಪಾದಕರ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಹಮಾಸ್ ಹೊತ್ತುಕೊಂಡಿದೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿದೆ.
ಯುದ್ಧದ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಇಸ್ರೇಲ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಮಾಸ್ ಭಯೋತ್ಪಾದಕ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಲವ್ ಆದ ಆರೇ ದಿನಕ್ಕೆ ಮದುವೆ.. ಕೈ ಹಿಡಿದ ಗಂಡ ಒಂದೇ ತಿಂಗಳಲ್ಲಿ ಕೈಕೊಟ್ಟು ಪರಾರಿ!
ಇಸ್ರೇಲ್ ವಿದೇಶಾಂಗ ಸಚಿವಾಲಯ ದಾಳಿ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಒಂದು ಗಂಟೆಯ ಹಿಂದೆ ಹಮಾಸ್‌ನ ಉಗ್ರಗಾಮಿ ಸಂಘಟನೆ ದಾಳಿ ಮಾಡಿದೆ. ಅವರು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್ ಪ್ರದೇಶದೊಳಗೆ ನುಸುಳಿದ್ದಾರೆ. ಇಸ್ರೇಲಿ ರಕ್ಷಣಾ ಪಡೆ ನಾಗರಿಕರನ್ನು ರಕ್ಷಿಸಿ, ಹಮಾಸ್ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿದೆ ಎಂದು ಟ್ವೀಟ್ ಮಾಡಿದೆ.
ದಾಳಿಯ ನಂತರ ಇಸ್ರೇಲ್‌ನ ಅನೇಕ ಭಾಗಗಳಲ್ಲಿ ಸೈರನ್‌ಗಳು ಮೊಳಗಿವೆ. ಟೆಲ್ ಅವೀವ್‌ನಲ್ಲಿರುವ ರಕ್ಷಣಾ ಪಡೆಗಳ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮತ್ತು ರಕ್ಷಣಾ ಸಚಿವರು ಭದ್ರತೆಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಇದರೊಂದಿಗೆ, ಇಸ್ರೇಲ್ ಪ್ರಸ್ತುತ ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಆದೇಶಿಸಿದೆ.
ಇದಕ್ಕೂ ಮೊದಲು, ಇಸ್ರೇಲ್ ಆಕ್ರಮಣದ ವಿರುದ್ಧ “ಆಪರೇಷನ್ ಅಲ್-ಅಕ್ಸಾ ಫ್ಲಡ್” ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದಂತೆಯೇ ಇಸ್ರೇಲ್ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಲಾಯಿತು ಎಂದು ಹಮಾಸ್ ಹೇಳಿದೆ. ಇತ್ತೀಚೆಗಿನ ಪರಿಸ್ಥಿತಿ ನೋಡಿದರೆ ಇಸ್ರೇಲ್ ಸೇನೆ ಕೂಡ ಯುದ್ಧಕ್ಕೆ ಸಿದ್ಧ ಎಂದು ಹೇಳಿದೆ. ಸೇನೆಯು ತನ್ನ ಸೈನಿಕರಿಗೆ ‘ಯುದ್ಧಕ್ಕೆ ಸನ್ನದ್ಧತೆ’ ಎಚ್ಚರಿಕೆಯನ್ನು ನೀಡಿದೆ. ಇದರೊಂದಿಗೆ ಗಾಜಾದ ಶಿಕ್ಷಣ ಸಚಿವಾಲಯವು ಇಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ.
ಏನಿದು ವಿವಾದ?
ವಾಸ್ತವವಾಗಿ, ಈ ಪ್ರದೇಶದಲ್ಲಿ ಕನಿಷ್ಠ 100 ವರ್ಷಗಳಿಂದ ಈ ಸಂಘರ್ಷ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಸ್ಟ್ರಿಪ್ಮತ್ತು ಗೋಲನ್ ಹೈಟ್ಸ್‌ನಂತಹ ಪ್ರದೇಶಗಳಲ್ಲಿ ವಿವಾದವಿದೆ. ಪೂರ್ವ ಜೆರುಸಲೆಮ್ ಸೇರಿದಂತೆ ಈ ಪ್ರದೇಶಗಳನ್ನು ಪ್ಯಾಲೆಸ್ಟೈನ್ ಹಕ್ಕು ಸಾಧಿಸಿದೆ. ಅದೇ ಸಮಯದಲ್ಲಿ, ಇಸ್ರೇಲ್ ಜೆರುಸಲೆಮ್ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ದಿನವೂ ಉದ್ವಿಗ್ನ ವಾತವರಣವಿದೆ.