ರಫಾ ನಿರಾಶ್ರಿತರ ಮೇಲೆ ಮತ್ತೆ ದಾಳಿ ಮಾಡಿದ ಇಸ್ರೇಲ್ – 37 ಮಂದಿ ಸಾವು

ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಹಮಾಸ್ ಬಂಡುಕೋರರನ್ನು ನಿರ್ನಾಮ ಮಾಡುವುದಾಗಿ ಇಸ್ರೇಲ್ ಸೇನೆ ಪಣತೊಟ್ಟಿದೆ. ಇದೀಗ ಇಸ್ರೇಲ್ ಮತ್ತೊಮ್ಮೆ ರಫಾ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 37 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಸೇನೆ, ರಫಾ ಮೇಲೆ ಶನಿವಾರ ಕೂಡ ವೈಮಾನಿಕ ದಾಳಿ ನಡೆಸಿತ್ತು. 28 ಮಂದಿ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದರು. ಈ ದಾಳಿ ಬೆನ್ನಲ್ಲೇ ನಾಗರಿಕರನ್ನು ರಕ್ಷಿಸುವ ಸೂಕ್ತ ಯೋಜನೆಯಿಲ್ಲದೆ ರಫಾದ ಮೇಲೆ ದಾಳಿ ಮಾಡಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದರು. ಆದರೂ ಇಸ್ರೇಲ್, ರಫಾ ಮೇಲೆ ದಾಳಿ ನಡೆಸಿದೆ. ರಾತ್ರೋರಾತ್ರಿ ನಡೆದ ಭಾರೀ ಬಾಂಬ್ ದಾಳಿ ರಫಾದಲ್ಲಿ ವ್ಯಾಪಕ ಆತಂಕ ಸೃಷ್ಟಿಸಿದೆ. ದಾಳಿಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಜನರು ಗಾಯಗೊಂಡಿದ್ದಾರೆ.ದಾಳಿಯಿಂದಾಗಿ ಎರಡು ಮಸೀದಿಗಳು ಮತ್ತು ಸಾಕಷ್ಟು ಮನೆಗಳು ಧ್ವಂಸಗೊಂಡಿವೆ ಎಂದು ಸ್ಥಳೀಯರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸಾವಿನ ನಾಟಕವಾಡಿದ್ದ ಪೂನಂ ಕಾನೂನು ಸಂಕಷ್ಟ! – ನಟಿ ವಿರುದ್ದ100 ಕೋಟಿ ರೂ. ಮಾನನಷ್ಟ ಮೊಕದ್ದಮೆ!
ಗಾಜಾ ಪಟ್ಟಿಯ ದಕ್ಷಿಣದಲ್ಲಿ ಆರಂಭಿಸಲಾಗಿದ್ದ ಸರಣಿ ದಾಳಿಗಳು ಇದೀಗ ಮುಕ್ತಾಯಗೊಂಡಿವೆ ಎಂದು ಇಸ್ರೇಲ್ ಸೇನೆ ಸೋಮವಾರ (ಫೆ.12) ತಿಳಿಸಿದೆ.
ಇಸ್ರೇಲ್ ಸೇನೆಯು ಗಾಜಾ ನಗರಗಳ ಮೇಲೆ ಈ ಹಿಂದೆ ಆಕ್ರಮಣ ನಡೆಸುವುದಕ್ಕೂ ಮುನ್ನ, ಜನರು ಯಾವುದೇ ಯೋಜನೆಗಳಿಲ್ಲದೆ ಕೂಡಲೇ ಸ್ಥಳಾಂತರಗೊಳ್ಳಬೇಕು ಎಂದು ಆದೇಶಿಸಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಭಾನುವಾರ ಮಾತನಾಡಿದ್ದ ಬೈಡನ್, ರಫಾ ನಗರದದಲ್ಲಿ ಸುಮಾರು 10 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ನಾಗರಿಕರ ರಕ್ಷಣೆಯನ್ನು ಖಾತ್ರಿಪಡಿಸುವ ಸೂಕ್ತ ಯೋಜನೆಗಳಿಲ್ಲದೆ ಯಾವುದೇ ಕಾರಣಕ್ಕೂ ದಾಳಿ ನಡೆಸಬಾರದು ಎಂದು ಹೇಳಿದ್ದರು.