ಕಾಶ್ಮೀರದಲ್ಲಿ ಐಎಸ್‌ಐ ಯ ವಿಧ್ವಂಸಕ ಕೃತ್ಯ ಬಯಲು – ಉಗ್ರ ಸಂದೇಶಗಳಿಗೆ ಬಾಲಕಿಯರ ಬಳಕೆ!
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಉಗ್ರರ ಉಪಟಳ ಹೆಚ್ಚಾಗುತ್ತಲೇ ಇದೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು, ಉಗ್ರ ಸಂಘಟನೆಗಳಿಗೆ ಕುಮ್ಮಕ್ಕು ನೀಡುವುದು, ಶಾಂತಿ ಕದಡುವುದು ಹೊಸ ವಿಚಾರವೇನೂ ಅಲ್ಲ. ಆದರೆ ಈಗ ಐಎಸ್‌ಐ ತನ್ನ ಉದ್ದೇಶ ಈಡೇರಿಕೆಗಾಗಿ ಕಣಿವೆಯ ಬಾಲಕಿಯರು, ಮಹಿಳೆಯರು ಹಾಗೂ ಬಾಲಾಪರಾಧಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ!
ಇದನ್ನೂ ಓದಿ: 100 ಭೂಕಂಪಗಳಾದ್ರೂ ಈ ಕಟ್ಟಡಕ್ಕೆ ಏನೂ ಆಗಿಲ್ಲ! – ʼಶೇಕ್ ಟೇಬಲ್ʼ ಬಿಲ್ಡಿಂಗ್ ವಿಶೇಷವೇನು?
ಈ ಬಗ್ಗೆ ಶ್ರೀನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ 15 ಕಾಪ್ಸ್ ಅಥವಾ ಚಿನಾರ್ ಕಾಪ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಸೇನಾ ವಿಭಾಗದ ಮುಖ್ಯಸ್ಥ ಲೆ|ಜ| ಅಮರ್‌ದೀಪ್ ಸಿಂಗ್ ಔಜ್ಲಾ ಅವರು ಮಾತನಾಡಿದ್ದಾರೆ. ಉಗ್ರ ಕೃತ್ಯಗಳನ್ನು ನಡೆಸಲು ಅನುಸರಿಸುವ ಸಾಂಪ್ರದಾಯಿಕ ಸಂವಹನ ವಿಧಾನಗಳಿಗೆ ಐಎಸ್‌ಐ ವಿದಾಯ ಹೇಳಿದೆ. ಸಂದೇಶ ರವಾನೆಗೆ ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣ ಬಳಕೆ ಗಣನೀಯವಾಗಿ ತಗ್ಗಿದೆ. ಅದರ ಬದಲಾಗಿ ಹೊಸ ದಾರಿ ಕಂಡುಕೊಂಡಿದೆ ಎಂದು ತನಿಖೆಯಿಂದ ಬಯಲಾಗಿದೆ ಎಂದು ಹೇಳಿದ್ದಾರೆ.
ಶಸ್ತ್ರಾಸ್ತ್ರಗಳ ಸಾಗಣೆ, ಮಾದಕವಸ್ತುಗಳ ಸಾಗಾಟ, ವಿಧ್ವಂಸಕ ಯೋಜನೆಗಳ ಕಾರ್ಯತಂತ್ರದಂಥ ಸಂದೇಶಗಳನ್ನು ಕಳುಹಿಸಲು ಮಹಿಳೆಯರು, ಹುಡುಗಿಯರು, ಬಾಲಾಪರಾಧಿಗಳನ್ನು ಬಳಕೆ ಮಾಡುವ ಆಘಾತಕಾರಿ ತಂತ್ರ ಅನುಸರಿಸುತ್ತಿದೆ. ಕೆಲವು ಪ್ರಕರಣಗಳನ್ನು ಛೇದಿಸಿ, ತನಿಖೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಐಎಸ್‌ಐ ಜತೆಗೆ ಪಾಕ್ ಮೂಲದ ಇತರ ಉಗ್ರ ಸಂಘಟನೆಗಳ ಮುಖ್ಯಸ್ಥರು ಕೂಡ ಇದೇ ತಂತ್ರದ ಮೊರೆ ಹೋಗುತ್ತಿದ್ದಾರೆ. ಈ ರೀತಿಯ ಅಪ್ರತ್ಯಕ್ಷ ಭಯೋತ್ಪಾದನೆಯು ಅತ್ಯಂತ ಗಂಭೀರ ಹಾಗೂ ಕಳವಳಕಾರಿ ವಿಚಾರ. ಈ ಜಾಲವನ್ನು ಪತ್ತೆ ಹಚ್ಚಿ, ಇಂಥ ಅಪಾಯಕಾರಿ ಬೆಳವಣಿಗೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭೂಸೇನೆ ಮತ್ತು ಇತರ ತನಿಖಾ ಸಂಸ್ಥೆಗಳು ಪ್ರಯತ್ನ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆ ತರಲು ಸೇನೆ ಬಹುವಾಗಿ ಶ್ರಮಿಸಿದೆ. ಇದನ್ನು ನಮ್ಮ ಗೆಲುವು ಎಂದು ಸಂಭ್ರಮಿಸಿ ಸುಮ್ಮನಿರಲು ಸಾಧ್ಯವಿಲ್ಲ. ಏಕೆಂದರೆ ನೆರೆಯ ದೇಶ ಅದನ್ನು ಹಾಳುಗೆಡವಲು ಕುಟಿಲೋಪಾಯಗಳನ್ನು ನಡೆಸುತ್ತಲೇ ಇರುತ್ತದೆ. ಪೀರ್ ಪಂಜಾಲ್‌ನ ದಕ್ಷಿಣ ಭಾಗದಲ್ಲಿ ಇತ್ತೀಚೆಗೆ ನಡೆದ ಒಳನುಸುಳುವಿಕೆ ಇದಕ್ಕೊಂದು ಉದಾಹರಣೆ. ಇಲ್ಲಿನ ನಾಗರಿಕರ ಸಹಕಾರದಿಂದಲೇ ಸೇನೆಗೆ ಕಣಿವೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.