ಕಿಶನ್ ಕ್ರಿಕೆಟ್ ಕರಿಯರ್ ಅಂತ್ಯ – WC, ZIM, SL ಸರಣಿಗೂ ಕೊಕ್
ತಂಡ ಸೇರಲು ಇಶಾನ್ ಶಪಥವೇನು?

ಕಿಶನ್ ಕ್ರಿಕೆಟ್ ಕರಿಯರ್ ಅಂತ್ಯ – WC, ZIM, SL ಸರಣಿಗೂ ಕೊಕ್ತಂಡ ಸೇರಲು ಇಶಾನ್ ಶಪಥವೇನು?

ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಅನೌನ್ಸ್ ಆದ್ಮೇಲೆ ಸಾಕಷ್ಟು ಅಭಿಮಾನಿಗಳು ಅಚ್ಚರಿಗೊಂಡಿದ್ರು. ಒಂದಷ್ಟು ಆಟಗಾರರಿಗೆ ಚಾನ್ಸ್ ಸಿಗದೇ ಇರೋದು ಅವ್ರ ಬೇಸರಕ್ಕೆ ಕಾರಣವಾಗಿತ್ತು. ಅದ್ರಲ್ಲಿ ಟೀಂ ಇಂಡಿಯಾದ ಸ್ಪೋಟಕ ಬ್ಯಾಟರ್ ಇಶಾನ್ ಕಿಶನ್ ಕೂಡ ಒಬ್ರು. ಟೀಂ ಇಂಡಿಯಾ ಪಾಲಿನ ಭರವಸೆ ಎನಿಸಿಕೊಂಡಿದ್ದ ಇಶಾನ್  ಕರಿಯರ್​ ಕಳೆದ 6 ತಿಂಗಳಿಂದ ನಿಂತ ನೀರಿನಂತಾಗಿದೆ. ಇತ್ತೀಚೆಗಷ್ಟೇ 25ನೇ ವಸಂತಕ್ಕೆ ಕಾಲಿಟ್ಟಿರುವ ಯಂಗ್ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಇನ್ಮುಂದೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳೋದೇ ಇಲ್ವಾ ಅನ್ನೋ ಅನುಮಾನ ಶುರುವಾಗಿದೆ. ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್ ಲಂಕಾ ಸರಣಿ ಮೂಲಕ ಕಮ್​ಬ್ಯಾಕ್ ಮಾಡಿದ್ದಾರೆ. ಬಟ್ ಕಿಶನ್ ಕಥೆ ಏನು? ಯಂಗ್ ಬ್ಯಾಟ್ಸ್​​ಮನ್ ಮಾಡಿರೋ ಶಪಥ ಎಂಥಾದ್ದು? ಕಿಶನ್ ಟೀಂ ಇಂಡಿಯಾಗೆ ವಾಪಸ್ ಆಗ್ಬೇಕು ಅಂದ್ರೆ ಇರೋ ದಾರಿ ಏನು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂಓದಿ: IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕು

ಇಶಾನ್ ಕಿಶನ್ ಟೀಂ ಇಂಡಿಯಾದ ಟ್ಯಾಲೆಂಟೆಟ್ ಪ್ಲೇಯರ್. ಸ್ಪೋಟಕ ಬ್ಯಾಟಿಂಗ್​ಗೂ ಸೈ.. ವಿಕೆಟ್ ಕೀಪಿಂಗ್​ಗೂ ಜೈ. ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ್ದ ಇಶಾನ್, ಟೀಮ್ ಇಂಡಿಯಾದ ಫ್ಯೂಚರ್ ಅಂತಾನೇ ಗುರುತಿಸಿಕೊಂಡವರು. ಆದ್ರೆ, ಸೌತ್ ಆಫ್ರಿಕಾ ಸರಣಿ ವೇಳೆ ತೆಗೆದುಕೊಂಡ ಒಂದೇ ಒಂದು ನಿರ್ಧಾರದಿಂದ ಈಗ ಕರಿಯರ್ ಹಳ್ಳ ಹಿಡಿದಿದೆ. ಒಂದು ವರ್ಷದಿಂದ ಕಿಶನ್ ಕ್ರಿಕೆಟರ್ ಭವಿಷ್ಯ ನಿಂತ ನೀರಾಗಿದೆ. ಇತ್ತೀಚೆಗಷ್ಟೇ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿದ್ದ ಇಶಾನ್ ತಮ್ಮ ಹುಟ್ಟುಹಬ್ಬದಂದೇ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡೋ ಶಪಥ ಮಾಡಿದ್ದಾರೆ. ಕಮ್​​ಬ್ಯಾಕ್​ಗಾಗಿ ಸವಾಲು ಸ್ವೀಕರಿಸುವ ಪ್ರತಿಜ್ಞೆಯನ್ನೂ ಸ್ವೀಕರಿಸಿದ್ದಾರೆ. ಜನ್ಮದಿನದಂದು ಶಿರಡಿಗೆ ಭೇಟಿ ಕೊಟ್ಟು, ಸಾಯಿ ಬಾಬಾ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ಇಶಾನ್ ಬಾಬಾರ ಪರಮ ಭಕ್ತರಾಗಿದ್ದು, ಇದೇ ಕಾರಣಕ್ಕೆ ಬಲಗೈ ಮೇಲೆ ಸಾಯಿ ಬಾಬಾರ ಫೋಟೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡ್ಲೇಬೇಕು ಅಂತಾ ಶಪಥ ಮಾಡಿರೋ ಇಶಾನ್ ಇದಕ್ಕೆ ಬೇಕಾದ ತಯಾರಿಯನ್ನೂ  ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಕಮ್​ಬ್ಯಾಕ್​ಗಾಗಿ ಎದುರು ನೋಡ್ತಿರುವ ಇಶಾನ್, ಐಪಿಎಲ್​ ಬಳಿಕ ಮೊದಲ ಬಾರಿ ನೆಟ್ಸ್​ನಲ್ಲಿ ಬೆವರು ಹರಿಸಿದ್ದಾರೆ. ಈಗಾಗಲೇ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ನೆಟ್ಸ್​ನಲ್ಲಿ ಬಿಗ್ ಶಾಟ್ಸ್​ ಆಡಿ ಗಮನ ಸೆಳೆದಿದ್ದಾರೆ. ವಿನೂತನ ಶಾಟ್ಸ್​ ಮೇಲೆ ಫೋಕಸ್ ಮಾಡಿರುವ ಇಶಾನ್, ಹೊಸ ರೂಪದಲ್ಲಿ ಟೀಮ್ ಇಂಡಿಯಾಗೆ ರೀ ಎಂಟ್ರಿ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಗ್ಗೆ ತಮ್ಮ ಮನದಾಳವನ್ನೂ ಬಿಚ್ಚಿಟ್ಟಿದ್ದಾರೆ. ಟೀಮ್ ಇಂಡಿಯಾ ಪರ ಆಡುವುದನ್ನ ನಾನು ಎದುರು ನೋಡುತ್ತಿದ್ದೇನೆ. ಟಿ20, ಏಕದಿನ ಹಾಗೂ ಟೆಸ್ಟ್​ನಲ್ಲಿ ಉತ್ತಮ ಆಟವಾಡಿದ್ದೇನೆ. ಹೀಗಾಗಿ ಮೂರೂ ಫಾರ್ಮೆಟ್​ನಲ್ಲಿ ಮತ್ತೆ ಆಡುವುದು ನನ್ನ ಗುರಿಯಾಗಿದೆ. ಸದ್ಯ ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ವಾಸ್ತವದಲ್ಲಿ ಬದುಕಲು ಬಯಸುತ್ತೇನೆ. 6 ತಿಂಗಳ ಹಿಂದೆ ಇದ್ದ ಕಿಶನ್‌ಗಿಂತಲೂ ವಿಭಿನ್ನ ಆಟಗಾರನಾಗಿ ತಯಾರಾಗುವತ್ತ ಮಾತ್ರವೇ ನನ್ನ ಗಮನವಿದೆ. ಹೊಸ ಹೊಡೆತಗಳನ್ನಾಡುವ ಕಡೆಗೆ ಅಭ್ಯಾಸ ಮಾಡುತ್ತೇನೆ. ಹಿಂದಿನದನ್ನು ಮರೆತು ಮುಂದಿನ ದಿನಗಳಿಗಾಗಿ ಶ್ರಮಿಸುತ್ತೇನೆ. ದೇಶಿ ಕ್ರಿಕೆಟ್‌ ಶುರುವಾಗುವುದರ ಕಡೆಗೆ ಎದುರು ನೋಡುತ್ತಿದ್ದೇನೆ. ಜಾರ್ಖಂಡ್‌ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.

ಜಾರ್ಖಂಡ್ ಪರ ಕಣಕ್ಕಿಳಿಯದೇ BCCI ಕೆಂಗಣ್ಣಿಗೆ ಗುರಿ!

ಅಸಲಿಗೆ ಇಶಾನ್​ರ ಇಂದಿನ ಸ್ಥಿತಿಗೆ ಅವ್ರೇ ಕಾರಣ. ರಣಜಿ ಆಡುವಂತೆ ಪದೇ ಪದೇ ಸೂಚಿಸಿದ್ದರೂ ಜಾರ್ಖಂಡ್​ ಪರ ಕಣಕ್ಕಿಳಿಯದೇ ನಿರ್ಲಕ್ಷಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ರು. ಇದೇ ಕಾರಣಕ್ಕೆ ಇಶಾನ್ ಕಿಶನ್​​ಗೆ ಟೀಮ್ ಇಂಡಿಯಾ ಬಾಗಿಲು ಇನ್ನೂ ತೆರೆದಿಲ್ಲ. ಕಳೆದ ವರ್ಷ ದಕ್ಷಿಣಾ ಆಫ್ರಿಕಾ ಸರಣಿ ವೇಳೆ ಮಾನಸಿಕ ಆಯಾಸ ಹೀಗಾಗಿ ಕುಟುಂಬದೊಂದಿಗೆ ಕಾಲ ಕಳೆಯಬೇಕು ಅಂತಾ ಭಾರತಕ್ಕೆ ವಾಪಸ್ ಆಗಿದ್ರು. ಆದರೆ ಇಶಾನ್, ದುಬೈನಲ್ಲಿ ಬರ್ತ್​ಡೇ ಪಾರ್ಟಿಗೆ ಹೋಗಿದ್ದರು. ನಂತರ, ಜನಪ್ರಿಯ ಕಾರ್ಯಕ್ರಮ ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಪಾಲ್ಗೊಂಡಿದ್ದರು. ನಂತರ ಬ್ಯಾಟಿಂಗ್ ಅಭ್ಯಾಸವನ್ನೂ ಮಾಡಿರಲಿಲ್ಲ. ಬಳಿಕ ಶಿಕ್ಷೆಯನ್ನೂ ನೀಡಲಾಯಿತು. ಇದರ ನಂತರ ಭಾರತದ ಹಿರಿಯರ ತಂಡಕ್ಕೆ ಹಿಂತಿರುಗಬೇಕೆಂದರೆ ರಣಜಿ ಆಡಬೇಕು ಎಂದು ಬಿಸಿಸಿಐ ಸೆಲೆಕ್ಷನ್ ಕಮಿಟಿ, ಕಾರ್ಯದರ್ಶಿ ಜಯ್​​ ಶಾ, ಅಂದಿನ ಹೆಡ್​ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದರು. ಆದರೆ, ಕಿಶನ್​ ಯಾರ ಮಾತನ್ನೂ ಕೇಳದೆ ರಣಜಿ ತಂಡದಲ್ಲಿ ನಿರ್ಲಕ್ಷಿಸಿದರು. ಆದರೂ ಮತ್ತೊಮ್ಮೆ ಅವಕಾಶ ಕೊಟ್ಟು ನೋಡಿದರೂ ಮತ್ತೆ ಮಾತು ಕೇಳಲಿಲ್ಲ. ಅಲ್ಲದೆ, ಐಪಿಎಲ್​ಗಾಗಿ ರಹಸ್ಯವಾಗಿ ಹಾರ್ದಿಕ್​ ಅವರೊಂದಿಗೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ನಂತರ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಕೈಬಿಡಲಾಯಿತು. ಇದೇ ಕಾರಣಕ್ಕೆ ಮ್ಯಾನೇಜ್‌ಮೆಂಟ್, ಬಿಸಿಸಿಐ ಹಾಗೂ ಸೆಲೆಕ್ಟರ್​​​ಗಳು ಇಶಾನ್​ನನ್ನ ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳಿಂದ ದೂರವಿಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ತಂಡದಲ್ಲಿ ರಿಷಭ್ ಪಂತ್‌ಗೆ ಇಶಾನ್​ ಸ್ಥಾನವನ್ನು ನೀಡಲಾಗಿದೆ. ಪ್ರಸ್ತುತ ವಿಕೆಟ್ ಕೀಪಿಂಗ್ ಸ್ಲಾಟ್​​ಗಾಗಿ ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್​ಗಿಂತ ಇಶಾನ್​ ಹಿಂದೆ ಬಿದ್ದಿದ್ದಾರೆ.

ಟೀಂ ಇಂಡಿಯಾ ಸೇರಲು ಇಶಾನ್ ಏನು ಮಾಡ್ಬೇಕು..?

ದೇಶಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದ ಇಶಾನ್ ಕಿಶನ್, ಕಳೆದ 6 ತಿಂಗಳಿಂದ ಟೀಮ್ ಇಂಡಿಯಾದಿಂದ ಕಂಪ್ಲೀಟ್ ದೂರ ಉಳಿದಿದ್ದಾರೆ. ಈ ಅವಧಿಯಲ್ಲಿ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ ಮತ್ತೆ ಟೀಂ ಇಂಡಿಯಾ ಸೇರೋ ಕಸರತ್ತು ಆರಂಭಿಸಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಇಶಾನ್ ಬಿಸಿಸಿಐ ಆಯ್ಕೆಗಾರರ ​​ಗಮನವನ್ನು ಸೆಳೆಯಲು ದೇಶೀಯ ಕ್ರಿಕೆಟ್‌ನ ಪೂರ್ಣ ಋತುವಿನಲ್ಲಿ ತೊಡಗಿಸಿಕೊಳ್ಳಬೇಕು. 2024-25ರ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಟಗಾರರ ಲಭ್ಯತೆ ಮತ್ತು ಭಾಗವಹಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಈ ಹಿಂದೆ ಬಿಸಿಸಿಐ ನಿರ್ದಿಷ್ಟಪಡಿಸಿತ್ತು. ರಿಯಾನ್ ಪರಾಗ್ ಐಪಿಎಲ್‌ ಜೊತೆಗೆ ವಿಜಯ್ ಹಜಾರೆಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ರಣಜಿ ಆಡದೆ ನಿರ್ಲಕ್ಷಿಸಿದ್ದರು. ಹಾಗಾಗಿ ಆತನನ್ನೂ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ನಂತರ ರಣಜಿಯಲ್ಲಿ ಮುಂಬೈ ಪರ ಕೊನೆಯ ಪಂದ್ಯಗಳಲ್ಲಿ ಕಣಕ್ಕಿಳಿದರು. ಆದರೂ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕಿತ್ತು ಹಾಕಲಾಯಿತು. ಇದೀಗ ಏಕದಿನ ಕ್ರಿಕೆಟ್​ಗೆ ಮರಳಿದ್ದಾರೆ. ಅಲ್ಲದೆ, ಕೇಂದ್ರ ಒಪ್ಪಂದದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. ಇದೇರೀತಿ ಇಶನ್, ಜಾರ್ಖಂಡ್ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಇದಕ್ಕಾಗಿಯೇ ಅಭ್ಯಾಸಕ್ಕೆ ದುಮುಕಿರುವ ಇಶಾನ್, ಜಾರ್ಖಂಡ್​ ಪರ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಗೆ ಮರಳುವ ಉತ್ಸಾಹದಲ್ಲಿದ್ದಾರೆ. ಆದ್ರೆ, ಕಿಶನ್ ಕಮ್​​ಬ್ಯಾಕ್ ನಿಜಕ್ಕೂ ಸುಲಭದ್ದಾಗಿಲ್ಲ.

6 ತಿಂಗಳ ಅವಧಿಯಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆ!

6 ತಿಂಗಳ ಹಿಂದಿನ ಟೀಮ್ ಇಂಡಿಯಾಗೂ, ಈಗಿನ ಟೀಮ್ ಇಂಡಿಯಾಗೂ ಭಾರೀ ಬದಲಾವಣೆಯಾಗಿದೆ. ಯುವ ಆಟಗಾರರ ಆಗಮನವಾಗಿದೆ. ಒಂದೊಂದು ಸ್ಲಾಟ್​ಗೂ ಮೂರ್ನಾಲ್ಕು ಆಟಗಾರರು ಇದ್ದಾರೆ. ಇಶಾನ್ ಆಡುವ ಓಪನಿಂಗ್ ಸ್ಲಾಟ್, ವಿಕೆಟ್ ಕೀಪಿಂಗ್ ಕೋಟಾ​ಗೂ ಸಾಲು ಸಾಲು ಆಟಗಾರರು ಕ್ಯೂ ನಿಂತಿದ್ದಾರೆ. ಹೀಗಾಗಿ ಇಶನ್ ಕಮ್​ಬ್ಯಾಕ್ ಮಾಡಬೇಕಾದ್ರೆ, ಎಲ್ಲರಿಗಿಂತ ನಾನು ಪ್ರತ್ಯೇಕ ಅನ್ನೋದನ್ನ ಆಟದ ವೈಖರಿಯಲ್ಲಿ ತೋರಿಸಬೇಕಿದೆ. ಆಯ್ಕೆಗಾರರನ್ನ ಇಂಪ್ರೆಸ್ ಮಾಡಬೇಕಿದೆ.. ಮುಂಬರುವ ದೇಶೀಯ ಋತುವಿನ ನಂತರವೇ ಇಶಾನ್ ಮರಳಲು ಸಾಧ್ಯವಾಗುವ ಸಾಧ್ಯತೆ ಹೆಚ್ಚಿದೆ. ಕೇವಲ ಐಪಿಎಲ್ ಆಡುವುದು ಅವರಿಗೆ ಮುಂದಿನ ಕೆರಿಯರ್‌ಗೆ ಕಷ್ಟವಾಗಬಹುದು. ಹೀಗಾಗಿ ಇಶಾನ್‌ ಟೀಮ್‌ ಇಂಡಿಯಾಗೆ ಮರಳಲು ಇರುವ ಏಕೈಕ ಮಾರ್ಗವೆಂದರೆ ಮುಂಬರುವ ದೇಶೀಯ ಕ್ರಿಕೆಟ್‌ನಲ್ಲಿ ಆಡಿ ಬಿಸಿಸಿಐ ಗಮನ ಸೆಳೆಯುವುದು. ಇದರಲ್ಲಿ ಇಶಾನ್‌ ಯಶಸ್ವಿಯಾದರೆ ಟೀಮ್‌ ಇಂಡಿಯಾಕ್ಕೆ ವಾಪಸ್ ಆಗ್ಬೋದು. ಇಲ್ಲದಿದ್ರೆ ಈಗಿರುವ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ಇತರೆ ಆಟಗಾರರ ಜೊತೆ ರೇಸ್​ಗೆ ಇಳಿಯಬೇಕಾಗುತ್ತೆ.

ಒಟ್ನಲ್ಲಿ ಅಂದು ಇಶಾನ್​ ಮಾಡಿದ ಒಂದೇ ಒಂದು ಯಡವಟ್ಟು, ಟೀಮ್ ಇಂಡಿಯಾದಿಂದ ದೂರ ಉಳಿಯುಂತೆ ಮಾಡಿದೆ. ಇದೀಗ ಅದೇ ಕಿಶನ್​ ಟೀಮ್ ಇಂಡಿಯಾ ಸೇರಲು ಶಪಥ ಮಾಡಿದ್ದಾರೆ. ಅದಕ್ಕಾಗಿ ಅಭ್ಯಾಸವನ್ನೂ ಆರಂಭಿಸಿದ್ದು, ಎಷ್ಟರ ಮಟ್ಟಿಗೆ ಸಕ್ಸಸ್ ಕಾಣ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *