ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ ಸರ್ಕಾರವೋ..? ತಾಲಿಬಾನ್‌ ಸರ್ಕಾರವೋ..? – ಬಿಜೆಪಿ ಪ್ರಶ್ನೆ

ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ ಸರ್ಕಾರವೋ..? ತಾಲಿಬಾನ್‌ ಸರ್ಕಾರವೋ..? – ಬಿಜೆಪಿ ಪ್ರಶ್ನೆ

ಬೆಂಗಳೂರು: ಹುಬ್ಬಳ್ಳಿ ಗಲಭೆ ಆರೋಪಿಗಳ ಮೇಲಿನ ಪ್ರಕರಣ ಕೈಬಿಡಬೇಕು ಎಂದು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್‌ ಅವರು ಶಿಫಾರಸ್ಸು ಮಾಡಿದ್ದಾರೆ ಎನ್ನುವ ಮಾಧ್ಯಮದ ಸುದ್ದಿಯೊಂದನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಿಡಿಕಾರಿದೆ. ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ ಸರ್ಕಾರವೋ..? ತಾಲಿಬಾನ್‌ ಸರ್ಕಾರವೋ..? ಎಂದು ಪ್ರಶ್ನಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದೆ. ಪೊಲೀಸರ ಮೇಲೆ ಕಲ್ಲು ತೂರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಕೋಮುಗಲಭೆ ನಡೆಸಿದ ತನ್ನ ಜಿಹಾದಿ ಬ್ರದರ್ಸ್‌ಗಳನ್ನು ಬಿಡುಗಡೆ ಮಾಡುವಂತೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕರೆಂದು ತನ್ವೀರ್‌ ಸೇಠ್‌ ಸರ್ಟಿಫಿಕೇಟ್‌ ಕೊಟ್ಟಿದ್ದರು ಎಂದು ಕಿಡಿಕಾರಿದೆ.

ಇದನ್ನೂ ಓದಿ: ಮನೆಯಲ್ಲಿ ಕೂಡಿ ಹಾಕಿ ಇಡೀ ದಿನ ಸಾಮೂಹಿಕ ಅತ್ಯಾಚಾರ – ಐವರು ನೀಚರು ಅರೆಸ್ಟ್, ಓರ್ವ ಕಾಮುಕ ಪರಾರಿ

ಉಗ್ರಗಾಮಿಗಳ ಬಂಧನವಾಗುತ್ತಿದ್ದಂತೆ ಕ್ಲೀನ್‌ ಚಿಟ್‌ ಕೊಡಲು ಉತ್ಸುಕರಾಗಿರುವ ಗೃಹ ಸಚಿವ  ಪರಮೇಶ್ವರ್‌ ಅವರಿರುವಾಗ ದಂಗೆಕೋರರನ್ನು ಬಿಟ್ಟು ಕಳಿಸುವುದು ಕಾಂಗ್ರೆಸ್‌ಗೆ ತುಂಬಾ ಸಲೀಸು. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡಿದ ಪರಿಣಾಮವೇ ಇಂದು ಶಿವಮೊಗ್ಗ ಕೋಮುಗಲಭೆಯಿಂದ ಹೊತ್ತಿ ಉರಿಯುತ್ತಿದೆ. ಸಿದ್ದರಾಮಯ್ಯ  ಅವರ ಸರ್ಕಾರ ತುಷ್ಟೀಕರಣಕ್ಕಾಗಿ ಜಿಹಾದಿಗಳ ಮೇಲಿನ ಪ್ರಕರಣ ಕೈಬಿಡುತ್ತಿರುವುದರಿಂದ ಕರ್ನಾಟಕದಲ್ಲಿ ಇಂದು ಐಸಿಸ್‌ ಕ್ಯಾಂಪ್‌ಗಳು ಸಕ್ರಿಯವಾಗುತ್ತಿವೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಮತ್ತೊಂದು ಟ್ವೀಟ್‌ನಲ್ಲೂ ಬಿಜೆಪಿ ಶಿವಮೊಗ್ಗ ಗಲಭೆ ಪ್ರಕರಣದ ಸುದ್ದಿಯನ್ನು ಉಲ್ಲೇಖಿಸಿದೆ. “ರಾಜ್ಯಕ್ಕೆ ಬೆಂಕಿ ಹಾಕ್ತೀವಿ!, ಅವ್ರು ಸಾಯ್ಬೇಕು ಇಲ್ಲ ನಾವ್ ಸಾಯ್ಬೇಕು!!”  ಇಷ್ಟು ರಾಜಾರೋಷವಾಗಿ ಪೊಲೀಸರಿಗೇ ಧಮ್ಕಿ ಹಾಕುತ್ತಿರುವ ಈ ಗೃಹ ಸಚಿವರ ಲೆಕ್ಕದಲ್ಲಿನ ಅಮಾಯಕ, ಉಸ್ತುವಾರಿ ಸಚಿವರ ಲೆಕ್ಕದಲ್ಲಿನ ಮಾನಸಿಕ ಅಸ್ವಸ್ಥ, ಉಪಮುಖ್ಯಮಂತ್ರಿಗಳ ಬ್ರದರ್ ಮತ್ತವನ ಬಳಗವನ್ನು ಬಂಧಿಸದೆ, ಗೌರವಾತಿಥ್ಯ ಕೊಡುತ್ತಿರುವ ನಮ್ಮ ದುರ್ಬಲ ರಾಜ್ಯ ಸರ್ಕಾರಕ್ಕೂ ಭಯೋತ್ಪಾದಕರ ಕೈಗೊಂಬೆಯಂತೆ ವರ್ತಿಸುವ ಪಾಕಿಸ್ಥಾನ ಸರ್ಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲ! ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿಕಾರಿದೆ.

Shwetha M