ಬಿಜೆಪಿಗೆ ಬಿಸಿತುಪ್ಪವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರ – ಕಾರ್ಯಕರ್ತರ ಬೆಂಬಲ ಶೋಭಾಗೋ..? ಸಿಟಿ ರವಿಗೋ..?

ಬಿಜೆಪಿಗೆ ಬಿಸಿತುಪ್ಪವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರ – ಕಾರ್ಯಕರ್ತರ ಬೆಂಬಲ ಶೋಭಾಗೋ..? ಸಿಟಿ ರವಿಗೋ..?

ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು, ಈಗಾಗಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನ ಫೈನಲ್ ಮಾಡ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಈಸಿಯಾಗಿ ಅಭ್ಯರ್ಥಿ ಆಯ್ಕೆಯಾದ್ರೆ ಇನ್ನೂ ಕೆಲವೆಡೆ ಕಗ್ಗಂಟಾಗ್ತಿದೆ. ಇದೀಗ ಬಿಜೆಪಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರವೂ ಕೂಡ ಬಿಸಿತುಪ್ಪವಾಗಿದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ನಾನೇ ಅಭ್ಯರ್ಥಿ ಅಂತಿದ್ದಾರೆ. ಆದ್ರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕ ಸಿ.ಟಿ ರವಿ ಸದ್ದಿಲ್ಲದೆ ಬಲ ಹೆಚ್ಚಿಸಿಕೊಳ್ತಿದ್ದಾರೆ. ಈ ಮೂಲಕ ಬಿಜೆಪಿ ನಾಯಕರಲ್ಲೇ ಭಿನ್ನಮತ ಸ್ಫೋಟವಾಗುತ್ತಾ? ಎಂಬ ಪ್ರಶ್ನೆ ಮೂಡಿದೆ..  ಹಾಗಾದ್ರೆ ಬಿಜೆಪಿ ಟಿಕೆಟ್ ಯಾರಿಗೆ..? ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಗೆ ಬಿಡೋದು ಪಕ್ಷಕ್ಕೆ ಹೊಡೆತ ಕೊಡುತ್ತಾ..? ಕಾರ್ಯಕರ್ತರ ಬೆಂಬಲ ಶೋಭಾಗೋ..? ಸಿಟಿ ರವಿಗೋ..? ಈ ಬಗೆಗಿನ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 14 ಹಾಲಿ ಸಂಸದರಿಗೆ ಬಿಜೆಪಿ ಕೊಕ್ – ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ಫಿಕ್ಸ್ 

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹಲವರು ಹೆಸರು ಕೇಳಿ ಬರ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಐದರಿಂದ ಆರು ಕ್ಷೇತ್ರಗಳಲ್ಲಿ ನನ್ನ ಹೆಸರು ಕೇಳಿ ಬರ್ತಿದೆ. ಆದರೆ ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ. ಇಲ್ಲಿನ ಜನ ನನ್ನನ್ನು ಗೆಲ್ಲಿಸಿದ್ದರು. ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ ನನ್ನ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ತಮ್ಮ ವಿರೋಧಿ ಪಡೆಗೆ ಟಾಂಗ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರೊ ಪ್ರಬಲ ನಾಯಕ ಅಂದ್ರೆ ಅದು ಸಿ.ಟಿ ರವಿ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಾಯಕ. ಪ್ರಭಾವಿ ಹಿಂದೂ ಮುಖಂಡ ಅಂತಾನೇ ಕರೆಸಿಕೊಳ್ಳುವ ಸಿ.ಟಿ ರವಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಹೀಗಾಗಿ ಮತ್ತೆ ಚುನಾವಣಾ ರಾಜಕೀಯಕ್ಕೆ ಬರಲು ಹವಣಿಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಮತ್ತಷ್ಟು ನಾಯಕರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಮೈತ್ರಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಹುತೇಕ ಬಿಜೆಪಿ ಪಾಲಾಗೋದ್ರಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸಿ.ಟಿ ರವಿ ಗೆಲುವು ಸಾಧಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಮೌನವಾಗಿಗೆಯೇ ಒಪ್ಪಿಗೆ ನೀಡಿದಂತಿರುವ ರವಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರ ಜೊತೆ ಬೆರೆಯುತ್ತಿದ್ದಾರೆ. ಈ ಮೂಲಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಆಕಾಂಕ್ಷಿ ಎನ್ನುವುದನ್ನು ಬಿಂಬಿಸುತ್ತಿದ್ದಾರೆ. ಇವರ ಜೊತೆಗೆ ಡಿ.ಎನ್. ಜೀವರಾಜ್ ಕೂಡ ಲೋಕಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಿರುವಾಗ ಟಿಕೆಟ್‌ ಆಕಾಂಕ್ಷಿಗಳಿಗೆ ಟಾಂಗ್ ಕೊಡುವಂತೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ. ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಸದ್ಯ ಶೋಭಾ ಕರಂದ್ಲಾಜೆ ನಾನೇ ಅಭ್ಯರ್ಥಿ ಅಂತಾ ಹೇಳಿಕೊಳ್ತಿದ್ರೂ ಕ್ಷೇತ್ರದಲ್ಲಿ ವಿರೋಧಿ ಅಲೆಯೂ ಇದೆ. ಎರಡನೇ ಬಾರಿ ಸಂಸದೆ, ಮೊದಲ ಬಾರಿ ಕೇಂದ್ರ ಸಚಿವೆಯಾಗಿದ್ದರೂ ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಿಧಾನಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳೋಕೆ ಒದ್ದಾಡ್ತಿರೋ ಬಿಜೆಪಿ ಲೋಕಸಭೆಗೆ ಪ್ರಬಲ ಅಭ್ಯರ್ಥಿಗಳನ್ನೇ ಆಯ್ಕೆ ಮಾಡ್ತಿದೆ. ಹೀಗಾಗಿ ಮತ್ತೆ ಶೋಭಾ ಕರಂದ್ಲಾಜೆಗೆ ಜೈ ಅಂತಾರೋ ಅಥವಾ ಹೊಸ ಅಭ್ಯರ್ಥಿಗೆ ಮಣೆ ಹಾಕ್ತಾರೋ ಕಾದು ನೋಡ್ಭೇಕು.

Sulekha