ಒಣಮೀನು ಮಾರಾಟಕ್ಕೆ ಇನ್ನುಮುಂದೆ ಲೈಸೆನ್ಸ್ ಕಡ್ಡಾಯ?
ಮಂಗಳೂರು: ಮೀನು ಮಾರಾಟಗಾರರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನುಮುಂದೆ ಒಣ ಮೀನು ಮಾರಾಟ ಮಾಡಬೇಕಾದರೆ ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕಾಗುತ್ತದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಪ್ಯಾಕೆಟ್ ರೂಪದಲ್ಲಿ ಮೀನಿನ ಸಂಸ್ಕರಿತ ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಕಡ್ಡಾಯ ಮಾಡಲು ಚಿಂತನೆ ನಡೆಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಣಮೀನು ಪ್ಯಾಕೆಟ್ ಹಾಗೂ ಬಿಡಿಯಾಗಿ ಮಾರಾಟವಾಗುತ್ತಿದೆ. ಮೀನು ಸಂರಕ್ಷಣೆ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಮೀನು ಸಂಸ್ಕರಣ ಘಟಕಗಳ ಮೇಲೆ ನಿಗಾ ವಹಿಸಲಾರಂಭಿಸಿದೆ. ಇನ್ನುಮುಂದೆ ಪ್ಯಾಕ್ ಮಾಡಿ ಮಾರಬೇಕಿದ್ದರೆ ಪ್ರಾಧಿಕಾರದಡಿ ನೋಂದಾಯಿಸಿ, ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಿದೆ ಎಂದು ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ ಡಾ. ಪ್ರವೀಣ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಪ್ರವಾಸಿಗರು ಇನ್ನುಮುಂದೆ ಫ್ರಾನ್ಸ್‌ನಲ್ಲೂ ಯುಪಿಐ ಬಳಸಬಹುದು!
ಸುರಕ್ಷತ ಮತ್ತು ಗುಣಮಟ್ಟ ಪ್ರಾಧಿಕಾರ ಒಣ ಮೀನು ಮಾರಾಟಗಾರರಿಂದ ಮಾದರಿ(ಸ್ಯಾಂಪಲ್)ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಿದೆ. ಈ ವೇಳೆ ಒಣಮೀನುಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಅಂಶಗಳು ಕಂಡು ಬಂದರೆ ಮಾರಾಟಗಾರರು ಮತ್ತು ಉತ್ಪನ್ನಕಾರರ ಮೇಲೆ ದಂಡ ವಿಧಿಸುವ ಸಂಭವವಿದೆ.
ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಮಂಗಳೂರಿನಿಂದ ಒಣ ಮೀನು ಪೂರೈಕೆ ಆಗುತ್ತಿದೆ. ಕೆಲವು ಮೀನುಗಾರ ಕುಟುಂಬ ಗಳೂ ಒಣಮೀನು ಉದ್ಯಮ ನಡೆಸುತ್ತಿವೆ. ಈ ಉದ್ಯಮಗಳು ಮೀನು ಸಂಸ್ಕರಣೆಯಲ್ಲಿ ಎಲ್ಲಿಯೂ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ರಾಜಿ ಮಾಡಿಕೊಳ್ಳದಂತೆ ಪ್ರಾಧಿಕಾರ ಎಚ್ಚರ ವಹಿಸಲಾರಂಭಿಸಿದೆ. ಈ ಕುರಿತು ತಿಳುವಳಿಕೆಯನ್ನೂ ಮೂಡಿಸಲಾಗುತ್ತಿದೆ.
ಮೀನನ್ನು ಶುಚಿಗೊಳಿಸಲು ಬಳಸುವ ನೀರು, ಬಿಸಿಲಿಗೆ ಒಣಗಿಸುವ ಪ್ರಕ್ರಿಯೆ ಎಲ್ಲವೂ ಕ್ರಮಬದ್ಧವಾಗಿ ನಡೆಯಬೇಕು. ಜತೆಗೆ ಎಲ್ಲ ಬಗೆಯಲ್ಲೂ ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಈ ಸಂಸ್ಕರಿತ ಆಹಾರವನ್ನು ಸೇವಿಸಿದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಮುಂಜಾಗ್ರತೆ ವಹಿಸಲಾರಂಭಿಸಿದೆ.
ಸ್ವಚ್ಛತೆಯೊಂದಿಗೆ ಗುಣಮಟ್ಟ ಕಾಯ್ದುಕೊಳ್ಳಲು ಮೀನನ್ನು ಶುದ್ಧವಾದ ಉಪ್ಪು ನೀರಿನಲ್ಲಿ ಸ್ವಚ್ಛಗೊಳಿಸಿ, ಡ್ರೈಯರ್‌ಗಳ ಮೂಲಕ ಒಣಗಿಸುವ ವಿಧಾನಗಳ ಬಗ್ಗೆಯೂ ತರಬೇತಿ ಕಾರ್ಯಕ್ರಮವನ್ನು ಪ್ರಾಧಿಕಾರ ಆಯೋಜಿಸಿದೆ. ಆದರೆ ಮೀನು ಒಣಗಿಸುವ ಡ್ರೈಯರ್‌ಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಮೀನುಗಾರರು ಉತ್ಸಾಹ ತೋರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಇನ್ನೊಂದು ಸುತ್ತಿನ ತರಬೇತಿಗೆ ಪ್ರಾಧಿಕಾರ ಸಿದ್ಧವಾಗುತ್ತಿದೆ.