ಪ್ರಧಾನಿ ಮೋದಿ ಗರ್ಭಗುಡಿ ಪ್ರವೇಶಿಸೋದೆ ತಪ್ಪಾ?- ರಾಮನ ಹೆಸರಲ್ಲಿ ಪಂಥ ಸಮರ ಶುರುವಾಯ್ತಾ?

ಪ್ರಧಾನಿ ಮೋದಿ ಗರ್ಭಗುಡಿ ಪ್ರವೇಶಿಸೋದೆ ತಪ್ಪಾ?- ರಾಮನ ಹೆಸರಲ್ಲಿ ಪಂಥ ಸಮರ ಶುರುವಾಯ್ತಾ?

ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕೌಂಟ್​​ಡೌನ್​ ಶುರುವಾಗುತ್ತಲೇ ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಒಂದಷ್ಟು ತಿಕ್ಕಾಟ.. ಪರ-ವಿರೋಧ.. ಭಿನ್ನಾಭಿಪ್ರಾಯಗಳು ಕೂಡ ಭುಗಿಲೆದ್ದಿದೆ. ಅದ್ರಲ್ಲೂ ಕೆಲ ಧರ್ಮಗುರುಗಳು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಇರೋಕೆ ಚಿಂತನೆ ನಡೆಸಿದ್ದಾರೆ.  ಶಂಕರಾಚಾರ್ಯ ಮಠದ ನಾಲ್ವರು ಸ್ವಾಮೀಜಿಗಳು ಜನವರಿ 22ಕ್ಕೆ ಅಯೋಧ್ಯೆಗೆ ಹೋಗದೆ ಇರೋಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಶಂಕರಾಚಾರ್ಯರುಗಳು ಅಸಮಾಧಾನಗೊಳ್ಳೋಕೆ ಕಾರಣವೇನು? ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಧರ್ಮಗುರುಗಳು ಹೇಳ್ತಿರೋದೇನು? ಮಂದಿರ ಸಂಪೂರ್ಣವಾಗಿ ನಿರ್ಮಾಣಗೊಳ್ಳದೆ ಪ್ರಾಣ ಪ್ರತಿಷ್ಠಾಪನೆ ಮಾಡುವಂತಿಲ್ವಾ? ಫ್ರಧಾನಿ ಮೋದಿ ಗರ್ಭಗುಡಿ ಪ್ರವೇಶಿಸೋದೆ ತಪ್ಪಾ? ರಾಮನ ಹೆಸರಲ್ಲಿ ಪಂಥ ಸಮರ ಶುರುವಾಯ್ತಾ? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಮನಿಂದಾಗಿಯೇ ಬಿಜೆಪಿ ನಂ.1 ಆಯ್ತಾ? – ಅಡ್ವಾಣಿ-ಮೋದಿ ಯಾರಿಗೆ ಕ್ರೆಡಿಟ್?

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿರುವಾಗಲೇ ಬಿಜೆಪಿ ಈಗ ಒಂದು ವಿಚಾರದಲ್ಲಿ ಭಾರಿ ಹಿನ್ನಡೆಯಾಗ್ತಿದೆ. ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಇಂಥದ್ದೊಂದು ಬೆಳವಣಿಗೆಯಾಗಬಹುದು ಅಂತಾ ಕೇಸರಿ ಕಲಿಗಳು ಯಾರೂ ಅಂದುಕೊಂಡಿರಲಿಲ್ಲ. ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವಿಚಾರದಲ್ಲಿ ಸನಾತನ ಧರ್ಮದ ನಾಲ್ವರು ಗುರುಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ನಾಲ್ವರು ಶಂಕರಾಚಾರ್ಯರು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯೋ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಇರೋಕೆ ನಿರ್ಧರಿಸಿರುವಂತೆ ಕಾಣ್ತಿದೆ. ನಾಲ್ವರು ಶಂಕರಾಚಾರ್ಯರ ಈ ನಡೆ ವಿಪಕ್ಷಗಳಿಗೂ ಆಹಾರವಾಗ್ತಿದೆ. ಹಾಗಿದ್ರೆ ಆ ನಾಲ್ವರು ಶಂಕರಾಚಾರ್ಯರುಗಳು ಯಾರೆಲ್ಲಾ? ರಾಮನ ಪ್ರಾಣಪ್ರತಿಷ್ಠಾಪನೆಗೆ ಹೋಗದೆ ಇರೋಕೆ ಅವರು ತೀರ್ಮಾನಿಸಿರೋದ್ಯಾಕೆ ಅನ್ನೋದನ್ನ ಇಲ್ಲಿ ಒಂದೊಂದಾಗಿಯೇ ತಿಳಿಸ್ತೀನಿ.

NO.1- ಶಂಕರಾಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದ ಸರಸ್ವತಿ!

ಒಡಿಶಾದ ಗೋವರ್ಧನಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀ ನಿಶ್ಚಲಾನಂದ ಸರಸ್ವತಿ ಅವರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗೋದಿಲ್ಲ ಎಂದಿದ್ದಾರೆ. ಶ್ರೀ ನಿಶ್ಚಲಾನಂದ ಸರಸ್ವತಿ ಗೋವರ್ಧನಪುರಿ ಪೀಠದ 145ನೇ ಶಂಕರಾಚಾರ್ಯರಾಗಿದ್ದಾರೆ. 1992ರಲ್ಲಿ ಪೀಠಾಧಿಪತಿಯಾದ ಶ್ರೀ ನಿಶ್ಚಲಾನಂದ ಸರಸ್ವತಿ ಈಗ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ.

ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಅನ್ನೋದು ರಾಜಕೀಯ ಶೋ ಆಗಿಬಿಟ್ಟಿದೆ. ಪ್ರಧಾನಿ ಮೋದಿಯವರು ಗರ್ಭಗುಡಿ ಪ್ರವೇಶಿಸಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡ್ತಾರೆ. ಈ ವೇಳೆ ರಾಮನ ಮೂರ್ತಿಯನ್ನ ಟಚ್ ಮಾಡ್ತಾರೆ. ಪ್ರಾಣಪ್ರತಿಷ್ಠಾಪನೆ ಅನ್ನೋದು ರಾಜಕೀಯ ಬಣ್ಣ ಪಡೆದುಕೊಂಡಿದೆ. ನಿಜವಾಗಿಯೂ ಪ್ರಾಣ ಪ್ರತಿಷ್ಠಾಪನೆಯಾಗಬೇಕಾದ್ರೆ ಧರ್ಮಗ್ರಂಥದ ಮಾರ್ಗಸೂಚಿಗಳನ್ನ ಅನುಸರಿಸಬೇಕು. ಧರ್ಮಗ್ರಂಥದ ಮಾರ್ಗಸೂಚಿಂತೆಯೇ ಕಾರ್ಯಕ್ರಮ ನಡೆಯಬೇಕು. ಇಲ್ಲದೇ ಇದ್ರೆ ಶ್ರೀರಾಮನ ತೇಜಸ್ಸು ಕಡಿಮೆಯಾಗುತ್ತೆ. ರಾಕ್ಷಸ ಅಸ್ತಿತ್ವಗಳು ಪ್ರವೇಶಿಸಿ, ಹಾನಿಯುಂಟು ಮಾಡ್ತಾವೆ ಅಂತಾ ನಿಶ್ಚಲಾನಂದ ಸರಸ್ವತಿಯವರು ಹೇಳಿದ್ದಾರೆ. ಒಂದೇ ಮಾತಲ್ಲಿ ಹೇಳೋದಾದ್ರೆ ಪ್ರಧಾನಿ ಮೋದಿ ಪ್ರಾಣಪ್ರತಿಷ್ಠಾಪನೆ ಮಾಡ್ತಾ ಇದ್ದಾರೆ ಅನ್ನೋ ಕಾರಣಕ್ಕೆ ನಿಶ್ಚಲಾನಂದ ಸರಸ್ವತಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಅಂತಿದ್ದಾರೆ.

NO.2-ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಸ್ವಾಮೀಜಿ

ಉತ್ತರಾಖಂಡ್​​ನ ಜ್ಯೋತಿರ್​​ಮಠ ಕೂಡ ಆದಿ ಶಂಕರಾಚಾರ್ಯರ ಪೀಠಗಳಲ್ಲಿ ಒಂದಾಗಿದೆ. ಇಲ್ಲಿನ ಸ್ವಾಮಿ ಅವಿಮುಕ್ತೇಶ್ವರಾನಂದ್ 2006ರಲ್ಲಿ ಸ್ವಾಮಿ ಸ್ವರೂಪಾನಂದರಿಂದ ದೀಕ್ಷೆ ಪಡೆದುಕೊಳ್ತಾರೆ. ಆದ್ರೆ ಅವಿಮುಕ್ತೇಶ್ವರಾನಂದ್ ಶ್ರೀಗಳು ಕೂಡ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಇರೋಕೆ ತೀರ್ಮಾನಿಸಿದ್ದಾರೆ. ಅವರು ಹೇಳ್ತಿರೋ ಪ್ರಕಾರ ರಾಮಮಂದಿರದ ನಿರ್ಮಾಣ ಸನಾತನ ಧರ್ಮದ ಗೆಲುವು ಅಲ್ವಂತೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಿದ್ದನ್ನ ಸನಾತನ ಧರ್ಮದ ಗೆಲುವು ಅಂತಾ ಪರಿಗಣಿಸೋಕೆ ಅವಿಮುಕ್ತೇಶ್ವರಾನಂದ್ ಶ್ರೀಗಳು ತಯಾರಿಲ್ಲ. ಅಯೋಧ್ಯೆಯಲ್ಲಿ ಈ ಹಿಂದೆಯೇ ರಾಮಮಂದಿರ ನಿರ್ಮಾಣವಾಗಿತ್ತು. ಯಾವಾಗ ನಮ್ಮ ದೇಶದಲ್ಲಿ ಗೋಹತ್ಯೆ ಅಂತ್ಯವಾಗುತ್ತೋ ಆಗ ನಾನು ರಾಮಮಂದಿರಕ್ಕೆ ಭೇಟಿ ನೀಡ್ತೇನೆ ಎಂದಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡ್ತಿದ್ದಾರೆ ಅಂತಾ ಅವಿಮುಕ್ತೇಶ್ವರಾನಂದ್ ಶ್ರೀಗಳು ಅಯೋಧ್ಯೆ ಭೇಟಿ ನೀಡದೆ ಇರೋದಕ್ಕೆ ತೀರ್ಮಾನಿಸಿರೋದಲ್ಲ. ಶ್ರೀಗಳ ಪ್ರತಿಪಾದನೆಯೇ ಡಿಫರೆಂಟ್ ಆಗಿದೆ.

NO.3-ಶೃಂಗೇರಿಯ ಶಂಕರಾಚಾರ್ಯ ಭಾರತಿ ತೀರ್ಥ ಸ್ವಾಮೀಜಿ

ಶೃಂಗೇರಿಯ ಶಾರದಾ ಪೀಠ ಕೂಡ ಆದಿ ಶಂಕರಾಚಾರ್ಯರ ಮಠಗಳಲ್ಲಿ ಒಂದು. ಕೆಲ ಮಾಹಿತಿಗಳ ಪ್ರಕಾರ ಶಾರದಾ ಪೀಠದ ಭಾರತಿ ತೀರ್ಥ ಸ್ವಾಮೀಜಿಗಳು ಕೂಡ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿಲ್ಲ ಅಂತಾ ಹೇಳಲಾಗ್ತಿದೆ. ಆದ್ರೆ ಶಾರದಾ ಮಠದ ಕಡೆಯಿಂದ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಆದ್ರೂ ಜನವರಿ 22 ರಂದು ಭಾರತಿ ತೀರ್ಥ ಸ್ವಾಮೀಜಿಗಳು ಅಯೋಧ್ಯೆಗೆ ತೆರಳೋದು ಅನುಮಾನ ಎನ್ನಲಾಗ್ತಿದೆ.

NO.4-ಶಂಕರಾಚಾರ್ಯ ಸದಾನಂದ ಸರಸ್ವತಿ ಸ್ವಾಮೀಜಿ

ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸದಾನಂದ ಸರಸ್ವತಿ ಕೂಡ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗೋದಿಲ್ಲ ಅನ್ನೋ ಸುದ್ದಿ ಕೂಡ ಹರಿದಾಡ್ತಿದೆ. ಆದ್ರೆ ಮಠದ ಕಡೆಯಿಂದ ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಒಟ್ಟು ಈ ನಾಲ್ವರು ಶಂಕರಾಚಾರ್ಯರು ಜನವರಿ 22ರಂದು ಅಯೋಧ್ಯೆಗೆ ಹೋಗ್ತಿಲ್ಲ ಅಂತಾ ಹೇಳಲಾಗ್ತಿದೆ.

ಆದಿ ಶಂಕರಾಚಾರ್ಯ ಮಠದ ಸ್ವಾಮೀಜಿಗಳು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಾಗ್ತಿಲ್ಲ ಅನ್ನೋ ಸುದ್ದಿ ರಾಜಕೀಯದಲ್ಲಂತೂ ಭಾರಿ ಹಲ್​ಚಲ್​ ಸೃಷ್ಟಿಸ್ತಾ ಇದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅಪೂರ್ಣವಾದ ದೇವಾಲಯದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಮಾಡ್ತಿರೋದಕ್ಕೆ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳು ಬಹಿಷ್ಕಾರ ಹಾಕ್ತಿದ್ದಾರೆ ಅಂತಾ ಮೋದಿ ಮತ್ತು ಬಿಜೆಪಿ ಮೇಲೆ ಮುಗಿಬಿದ್ದಿವೆ. ಶಂಕರಾಚಾರ್ಯರು ಸನಾತನ ಧರ್ಮದ ಪ್ರಮುಖ ಗುರುಗಳು. ಅಂಥಾ ಶಂಕರಾಚಾರ್ಯರುಗಳೇ ಜನವರಿ 22ರ ಕಾರ್ಯಕ್ರಮವನ್ನ ಬಹಿಷ್ಕರಿಸೋಕೆ ಕರೆ ಕೊಟ್ಟಿದ್ದಾರೆ ಅಂದ್ರೆ ಅದಕ್ಕೆ ಅದರದ್ದೇ ವ್ಯಾಲ್ಯೂ ಇದೆ ಅಂತಾ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆಗೆ ಅದರದ್ದೇ ಆದ ಕ್ರಮಗಳಿವೆ. ವಿಧಿವಿಧಾನಗಳಿವೆ. ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಅನ್ನೋದು ಧಾರ್ಮಿಕ ಕಾರ್ಯಕ್ರಮವೇ ಆಗಿದ್ದಲ್ಲಿ ನಾಲ್ಕು ಶಂಕರಾಚಾರ್ಯರ ಪೀಠಗಳ ಮಾರ್ಗದರ್ಶನದಲ್ಲೇ ನಡೆಯಬೇಕಲ್ವಾ? ಎಲ್ಲಾ ಶಂಕರಾಚಾರ್ಯರು ಕೂಡ ಅಪೂರ್ಣವಾದ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡೋದು ಸರಿಯಲ್ಲ ಅಂತಿದ್ದಾರೆ. ಇಲ್ಲಿ ಧಾರ್ಮಿಕ ಸಂಪ್ರದಾಯವನ್ನೇ ಉಲ್ಲಂಘಿಸಲಾಗ್ತಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನ ರಾಜಕೀಯ ಲಾಭಕ್ಕೋಸ್ಕರ ಮಾಡ್ತಿದ್ದಾರೆ ಅಂತಾ ಆಮ್​ ಆದ್ಮಿ ಪಕ್ಷ ಟೀಕಿಸಿದೆ.

Sulekha