ಸುಮಲತಾ ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಕಷ್ಟನಾ..? – ಆಪ್ತರೇ ಕೈ ಕೊಟ್ಟ ಮೇಲೆ ಮುಂದೇನು?
ಮಂಡ್ಯ ಲೋಕಸಭಾ ಅಖಾಡ ದಿನದಿನಕ್ಕೂ ರಂಗೇರುತ್ತಿದೆ. ಮಂಡ್ಯದ ಟಿಕೆಟ್ ಮೈತ್ರಿ ಅಭ್ಯರ್ಥಿಗೋ ಸುಮಲತಾಗೋ ಅಂತಾ ಇಡೀ ಇಂಡಿಯಾವೇ ಎದುರು ನೋಡ್ತಿದೆ. ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಬಿಜೆಪಿ ಬೆಂಬಲಿತ ಹಾಲಿ ಸಂಸದೆ ಸುಮಲತಾಗೆ ಟಿಕೆಟ್ ತಪ್ಪಿಸುತ್ತಾ ಎಂಬ ಚರ್ಚೆಯೂ ನಡೆಯುತ್ತಿದೆ. ಜೆಡಿಎಸ್ ನಾಯಕರು ನಮಗೇ ಟಿಕೆಟ್ ಅಂತಿದ್ರೆ ಬಿಜೆಪಿ ಲೀಡರ್ಸ್ ಸುಮಲತಾ ಅಂಬರೀಶ್ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಮೈತ್ರಿ ಪಕ್ಷಗಳಲ್ಲೇ ಟಿಕೆಟ್‌ಗಾಗಿ ಫೈಟ್ ನಡೀತಿದೆ. ಇದರ ನಡುವೆ ಸುಮಲತಾ ಅಂಬರೀಶ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಬಿಜೆಪಿ ಟಿಕೆಟ್ ತಮಗೇ ಸಿಗುತ್ತೆ ಎನ್ನುವಂತೆ ಸುಳಿವು ನೀಡಿದ್ದಾರೆ. ಹಾಗಾದ್ರೆ ಮಂಡ್ಯ ಟಿಕೆಟ್ ಜೆಡಿಎಸ್ ಗೆ ಸಿಗಲ್ವಾ? ಸುಮಲತಾಗೆ ಕೊಡ್ತಾರಾ..? ಸುಮಲತಾ ಈ ಸಲ ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಕಷ್ಟನಾ..? ಆಪ್ತರೇ ಕೈಕೊಟ್ಟರಾ..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಮಂಡ್ಯ ಕ್ಷೇತ್ರ ನಮಗೆ ಎಂದ ಹೆಚ್.ಡಿ ಕುಮಾರಸ್ವಾಮಿ – ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಬಿಗಿ ಪಟ್ಟು
ಬಿಜೆಪಿ ಜೆಡಿಎಸ್ ಮೈತ್ರಿ ಹೊರತಾಗಿಯೂ ಸುಮಲತಾ ಅಂಬರೀಶ್ ಮಂಡ್ಯದ ಟಿಕೆಟ್ ತಮಗೇ ಸಿಗುತ್ತೆ ಅನ್ನೋ ದೃಢ ವಿಶ್ವಾಸದಲ್ಲಿದ್ದಾರೆ. ಗುರುವಾರ ಮಾತನಾಡಿರುವ ಸುಮಲತಾ, ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಪಡೆದು ತಾಲೂಕು ಪ್ರವಾಸ ಮಾಡ್ತೇನೆ. ಐದು ವರ್ಷಗಳು ನಾನು ಸ್ವತಂತ್ರ ಸಂಸದೆಯಾಗಿ ಇದ್ದು, ಈಗ ಪಕ್ಷದಿಂದ ಬರುವ ಸೂಚನೆ ಮೇಲೆ ಕೆಲಸ ಮಾಡ್ತೇನೆ. ಈ ಬಾರಿ ಮಂಡ್ಯ ಎಲೆಕ್ಷನ್ ಸಾಧಾರಣವಾಗಿ ನಡೆಯಲ್ಲ ವಿಶೇಷವಾಗಿ ನಡೆಯುತ್ತೆ. ಲಾಸ್ಟ್ ಟೈಮ್ ಚಾಲೆಂಜಸ್ ಫೇಸ್ ಮಾಡಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ ನನ್ನ ಗೈಡ್ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎನ್ನುವ ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನ್ನೋದನ್ನ ಮತ್ತೊಮ್ಮೆ ಹೇಳಿದ್ದಾರೆ. ಆದ್ರೆ ಸುಮಲತಾಗೆ ಬಿಜೆಪಿ ಟಿಕೆಟ್ ಕೊಟ್ರೂ, ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಗೆಲುವು ಸುಲಭವಾಗಿಲ್ಲ. ಯಾಕಂದ್ರೆ ಸುಮಲತಾ ಬಣದಲ್ಲಿ ಗುರುತಿಸಿಕೊಂಡವರೇ ತಿರುಗಿ ಬಿದ್ದಿದ್ದಾರೆ.
ಸುಮಲತಾಗೆ ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಅಂದ್ರೆ ಅದು ಎಸ್. ಸಚ್ಚಿದಾನಂದ. ಇವ್ರು ಸುಮಲತಾಗೆ ಅತ್ಯಾಪ್ತರು. 2019ರಲ್ಲಿ ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಎದುರು ಹಾಕಿಕೊಂಡು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವಲ್ಲಿ ಸಚ್ಚಿದಾನಂದ ಪಾತ್ರ ಬಹಳ ಮುಖ್ಯವಾಗಿತ್ತು. ಒಂದು ರೀತಿ ಸುಮಲತಾ ಬಲಗೈ ಭಂಟನಂತಿದ್ದು, ಕುಟುಂಬ ಸದಸ್ಯನಂತೆಯೇ ಕೆಲಸ ಮಾಡಿದ್ರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷವನ್ನ ಬಲ ಪಡಿಸಲು ಬಿಜೆಪಿ ನಾಯಕರು 2022ರಲ್ಲಿ ಸಚ್ಚಿದಾನಂದ ಅವ್ರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದ್ರೆ ಕಾಂಗ್ರೆಸ್ನ ರಮೇಶ್ ಬಂಡಿಸಿದ್ದೇಗೌಡ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಎರಡನೇ ಸ್ಥಾನ ಪಡೆದಿದ್ದರು. ಸಚ್ಚಿದಾನಂದ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.
ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಚ್ಚಿದಾನಂದ ಸೋತಿದ್ದೇನೋ ನಿಜ. ಆದ್ರೆ ತಮ್ಮ ಸೋಲಿಗೆ ಸುಮಲತಾ ಕೂಡ ಪರೋಕ್ಷ ಕಾರಣ ಎಂಬ ಬೇಸರ ಸಚ್ಚಿದಾನಂದ ಅವ್ರಲ್ಲಿ ಇದ್ಯಂತೆ. ಯಾಕಂದ್ರೆ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಸರಿಯಾಗಿ ಬೆಂಬಲ ನೀಡದಿರುವುದು ಸೋಲಿಗೆ ಕಾರಣ ಎಂಬುದು ಸಚ್ಚಿದಾನಂದ ಮತ್ತು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಸುವಾಗ ಬಂದಿದ್ದು ಬಿಟ್ಟರೆ ಬಳಿಕ ಸುಮಲತಾ ಸರಿಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ. ಇದ್ರಿಂದಲೇ ಹಿನ್ನಡೆಯಾಯ್ತು ಎಂದು ಸಚ್ಚಿದಾನಂದ ಮತ್ತು ಅವ್ರ ಬೆಂಬಲಿಗರ ಆರೋಪವಿದೆ.
ಇದೀಗ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸುಮಲತಾ ಅಭ್ಯರ್ಥಿಯಾದರೆ ಆಪ್ತರ ಅಸಮಾಧಾನ ಹೆಚ್ಚಾಗಿ ಸುಮಲತಾಗೆ ಹಿನ್ನಡೆ ಆಗಬಹುದು ಎಂಬ ಲೆಕ್ಕಾಚಾರವಿದೆ. 2019ರಲ್ಲಿ ಇದ್ದಷ್ಟು ಜನಪ್ರಿಯತೆ ಈಗ ಸುಮಲತಾ ಅವರಿಗೆ ಇಲ್ಲ. ಬಿಜೆಪಿ ಮುಖಂಡರೇ ಅವರ ವಿರುದ್ಧ ನಿಂತರೆ ಚುನಾವಣಾ ಚಿತ್ರಣ ಬದಲಾಗಲಿದೆ. ಎಸ್. ಸಚ್ಚಿದಾನಂದ ನಟ ದರ್ಶನ್ ಆಪ್ತರು. ಮಂಡ್ಯದಲ್ಲಿ ದರ್ಶನ್ 25ನೇ ವರ್ಷದ ಸಿನಿ ಜರ್ನಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸಹ ಇದೇ ಸಚ್ಚಿದಾನಂದ. ಮಂಡ್ಯ ಚುನಾವಣೆ ಕುರಿತು ಕಳೆದ ವಾರ ಸುಮಲತಾ ನಡೆಸಿದ ಸಭೆಯಲ್ಲಿ ಎಸ್. ಸಚ್ಚಿದಾನಂದ ಪಾಲ್ಗೊಂಡಿದ್ದರು. ಆದರೆ ದರ್ಶನ್ ಆಹ್ವಾನದ ಮೇರೆಗೆ ಹೋದರು ಎಂಬುದು ಬಿಟ್ಟರೆ ಸ್ವಯಂ ಆಸಕ್ತಿಯಿಂದ ಹೋಗಿಲ್ಲ ಎಂಬುದು ಅವರ ಆಪ್ತ ವಲಯದ ಮಾತು. ಅಲ್ಲಿಗೆ ಅಸಮಾಧಾನ ಇನ್ನೂ ಶಮನವಾಗಿಲ್ಲ.
ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ 2023ರ ವಿಧಾನಸಭೆ ಚುನಾವಣೆಯಲ್ಲಿ ಛಿದ್ರಗೊಂಡಿದೆ. ಬಿಜೆಪಿಗೆ ಮಂಡ್ಯದಲ್ಲಿ ಹೇಳಿಕೊಳ್ಳುವಂತಹ ಪ್ರಭಾವವಿಲ್ಲ. ಹೀಗಾಗಿ ಕೊನೇ ಕ್ಷಣದಲ್ಲಿ ಮಂಡ್ಯ ಬಿಜೆಪಿ ಟಿಕೆಟ್ ಕೈತಪ್ಪಿದ್ರೆ ಪಕ್ಷೇತರವಾಗಿಯಾದ್ರೂ ಸ್ಪರ್ಧೆ ಮಾಡ್ಬೇಕು ಅಂತಾ ಕಾಯ್ತಿದ್ದ ಸುಮಲತಾ ಅಂಬರೀಶ್ಗೆ ಹೊಸ ತಲೆನೋವು ಶುರುವಾಗಿದೆ. ಅದು ಬಿಜೆಪಿ ನಾಯಕರ ಅಸಮಾಧಾನ. 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾಗೆ ಬಿಜೆಪಿ ಬೆಂಬಲಿಸಿತ್ತು. ಪಕ್ಷದ ಅಭ್ಯರ್ಥಿಯೇ ಕಣಕ್ಕಿಳಿದಿರಲಿಲ್ಲ. ಆದ್ರೀ ಈ ಸಲ ಜೆಡಿಎಸ್ ಜೊತೆ ಮೈತ್ರಿಕೊಂಡಿದೆ. ಹಾಗೇನಾದ್ರೂ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿದ್ರೆ ಅನಿವಾರ್ಯವಾಗಿ ಬೆಂಬಲ ನೀಡಲೇಬೇಕಾಗುತ್ತದೆ. ಆದ್ದರಿಂದ ಚಿಕ್ಕಪುಟ್ಟ ಅಸಮಾಧಾನಗಳು ಸಹ ಚುನಾವಣೆಯಲ್ಲಿ ಸೋಲನ್ನು ತರಬಹುದು. ಬಿಜೆಪಿ-ಜೆಡಿಎಸ್ ಮೈತ್ರಿ ಎಷ್ಟರ ಮಟ್ಟಿಗೆ ಮಂಡ್ಯದಲ್ಲಿ ಸುಮಲತಾಗೆ ಸಹಾಯಕವಾಗಲಿದೆ? ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ.