ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ? – ಒಡಿಶಾ ರಾಜ್ಯ ಕಾನೂನು ಆಯೋಗದಿಂದ ಶಿಫಾರಸು

ಪುರಿ ಜಗನ್ನಾಥ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ? – ಒಡಿಶಾ ರಾಜ್ಯ ಕಾನೂನು ಆಯೋಗದಿಂದ ಶಿಫಾರಸು

ಒಡಿಶಾದ ಪುರಿ ಜಗನ್ನಾಥ ದೇವಾಲಯ ವಿಶ್ವಪ್ರಸಿದ್ಧ ದೇವಾಲಯಗಳಲ್ಲೊಂದು. ಇದೀಗ ದೇವಾಲಯದ ಪಾವಿತ್ರ್ಯತೆ ಕಾಪಾಡಲು ಒಡಿಶಾ ಕಾನೂನು ಆಯೋಗ ಮುಂದಾಗಿದೆ. ಹೀಗಾಗಿ ಪುರಿ ಜಗನ್ನಾಥನ ಸನ್ನಿಧಿಗೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ:ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲೂ ಸೀಸದ ಅಂಶ ಪತ್ತೆ! – ಸರ್ಕಾರದಿಂದಲೇ ಟೆಸ್ಟ್‌ಗೆ ಆದೇಶ

ಒಡಿಶಾದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ಸದ್ಯದಲ್ಲೇ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿಗೊಳಿಸಲು ಒಡಿಶಾ ಸರ್ಕಾರ ಮುಂದಾಗಿದೆ.  ಭಕ್ತರಿಗೆ ನಿರ್ದಿಷ್ಟ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವಂತೆ ಒಡಿಶಾ ರಾಜ್ಯ ಕಾನೂನು ಆಯೋಗವು ಶಿಫಾರಸು ಮಾಡಿದೆ. ನ್ಯಾಯಮೂರ್ತಿ ಬಿಶ್ವನಾಥ್ ರಾತ್ ನೇತೃತ್ವದ ಕಾನೂನು ಆಯೋಗವು ಈ ಕುರಿತು ವರದಿಯನ್ನು ಸಿದ್ಧಪಡಿಸಿದ್ದು, ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಪೂರಕವಾದ ಉಡುಪುಗಳನ್ನು ಧರಿಸಿದವರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶ ನೀಡಬೇಕು ಎಂದು ಸಲಹೆ ನೀಡಿದೆ.

ಮಹಿಳೆಯರು ಜೀನ್ಸ್, ಟಿ-ಶರ್ಟ್ ಅಥವಾ ಶರ್ಟ್ ಧರಿಸಿ ದೇವಾಲಯಕ್ಕೆ ಬರುವುದನ್ನು ನಿಷೇಧಿಸಬೇಕೆಂದು ಆಯೋಗವು ಸರ್ಕಾರಕ್ಕೆ ತಿಳಿಸಿದೆ. ಈ ಹೊಸ ನಿಯಮವನ್ನು ಜಾರಿಗೆ ತರಲು ಶ್ರೀ ಜಗನ್ನಾಥ ದೇವಾಲಯ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕೂಡ ಪ್ರಸ್ತಾಪಿಸಲಾಗಿದೆ. ಆಯೋಗದ ಶಿಫಾರಸಿನ ಪ್ರಕಾರ, ಪುರುಷ ಭಕ್ತರು ಧೋತಿ-ಕುರ್ತಾ, ಪಂಚೆ ಅಥವಾ ಸಾಂಪ್ರದಾಯಿಕ ಪೈಜಾಮ-ಕುರ್ತಾವನ್ನು ಧರಿಸಬಹುದು. ಮಹಿಳೆಯರಿಗೆ ಸೀರೆ, ಬ್ಲೌಸ್ ಅಥವಾ ಸಲ್ವಾರ್-ಕಮೀಜ್ ಧರಿಸಲು ಸೂಚಿಸಲಾಗಿದೆ. 10 ವರ್ಷದೊಳಗಿನ ಬಾಲಕಿಯರು ಫ್ರಾಕ್ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ದೇವಾಲಯದ ಆಡಳಿತ ಮಂಡಳಿಯು ಈ ಹಿಂದೆಯೇ ಅರ್ಧ ಪ್ಯಾಂಟ್, ಹರಿದ ಜೀನ್ಸ್ ಮತ್ತು ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸದಂತೆ ಭಕ್ತರಲ್ಲಿ ಮನವಿ ಮಾಡಿತ್ತು. ಆದರೆ ಕಾಯ್ದೆಯಲ್ಲಿ ಸ್ಪಷ್ಟ ನಿಯಮಗಳಿಲ್ಲದ ಕಾರಣ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.

Sulekha