ಅಪ್ಪನಿಗೂ ಸ್ಥಾನಮಾನ.. ಮಕ್ಕಳಿಗೂ ಅಧಿಕಾರ – ಬಿಜೆಪಿ ಪಾಲಿಗೆ BSY ಶಕ್ತಿನಾ.. ದೌರ್ಬಲ್ಯನಾ?

ಅಪ್ಪನಿಗೂ ಸ್ಥಾನಮಾನ.. ಮಕ್ಕಳಿಗೂ ಅಧಿಕಾರ – ಬಿಜೆಪಿ ಪಾಲಿಗೆ BSY ಶಕ್ತಿನಾ.. ದೌರ್ಬಲ್ಯನಾ?

ಹ್ಯಾಟ್ರಿಕ್ ಗೆಲುವಿನ ಗುರಿ ಬೆನ್ನತ್ತಿರೋ ಪ್ರಧಾನಿ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಿಂದ ರಾಜ್ಯಕ್ಕೆ ರೌಂಡ್ಸ್ ಹಾಕ್ತಿದ್ದಾರೆ. ವಿಪಕ್ಷಗಳ ವಿರುದ್ಧ ಬೆಂಕಿ ಉಗುಳುತ್ತಲೇ ಲೋಕಸಭಾ ಅಖಾಡದಲ್ಲಿ ಘೀಳಿಡ್ತಿದ್ದಾರೆ. ಕರ್ನಾಟಕದಲ್ಲಿ 28ಕ್ಕೆ 28ಕ್ಷೇತ್ರಗಳನ್ನೂ ಗೆಲ್ಲಬೇಕೆಂದು ಭರ್ಜರಿ ರಣತಂತ್ರ ರೂಪಿಸಿದ್ದಾರೆ. ಈಗಾಗ್ಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿಯೂ ಆಗಿದೆ. ಆದ್ರೆ ಟಿಕೆಟ್ ಘೋಷಣೆ ಬೆನ್ನಲ್ಲೇ ಬಹುತೇಕ ಜಿಲ್ಲೆಗಳಲ್ಲಿ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ವಂಚಿತರು ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಹೀಗೆ ಸಿಡಿದೆದ್ದಿರೋ ಅತೃಪ್ತರು ಬಿಜೆಪಿಯ ಪ್ರಶ್ನಾತೀತ ನಾಯಕ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧವೇ ಬುಸುಗುಡ್ತಿದ್ದಾರೆ. ಬಹಿರಂಗವಾಗೇ ಹೇಳಿಕೆಗಳನ್ನ ಕೊಡುತ್ತಾ ಕೆಂಡ ಕಾರುತ್ತಿದ್ದಾರೆ. ಬಿಎಸ್‌ವೈ ವಿರುದ್ಧ ಬಂಡಾಯ ಇದೇ ಮೊದಲೇನಲ್ಲ. ಹಿಂದಿನಿಂದ್ಲೂ ಬಿಎಸ್​ವೈ ಬಿಜೆಪಿಯ ಶಕ್ತಿ ಮತ್ತು ದೌರ್ಬಲ್ಯ ಎರಡು ಆಗಿದ್ದು, ಈಗ ಮತ್ತೊಮ್ಮೆ ಕೋಲಾಹಲ ಎದ್ದಿದೆ ಅಷ್ಟೇ.. ಅಷ್ಟಕ್ಕೂ ಯಡಿಯೂರಪ್ಪ ಬಿಜೆಪಿಗೆ ಪ್ಲಸ್, ಮೈನಸ್ ಎರಡೂ ಆಗಿದ್ದೇಗೆ..? ಹೈಕಮಾಂಡ್​ಗೂ ಕೂಡ ಬಿಸಿತುಪ್ಪವಾದ್ರಾ? ಅಸಮಾಧಾನಿತರ ಆರೋಪ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಳಪತಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಅತಿರೇಕದ ವರ್ತನೆ  – ಕೇರಳದಲ್ಲಿ ವಿಜಯ್ ಕಾರಿನ ಮೇಲೆ ದಾಳಿ!

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಅದಕ್ಕೆ ಕಾರಣ ಬಿ.ಎಸ್ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸಿದ್ದು ಅನ್ನೋದು ಜನರಿಗೂ ಗೊತ್ತಿದೆ. ಹೀಗಾಗಿ ಬಿಎಸ್​ವೈ ಇಲ್ಲದಿದ್ರೆ  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ಹೆಚ್ಚಿನ ಅಧಿಕಾರವನ್ನೇ ನೀಡಿದೆ. ಆದರೆ, ಈ ಬಾರಿ ಬಿಎಸ್‌ ಯಡಿಯೂರಪ್ಪ ಅವರ ಕಾರಣಕ್ಕೆ ಕರ್ನಾಟಕ ಬಿಜೆಪಿಯಲ್ಲಿ ಭಾರೀ ಅಸಮಾಧಾನ ಸೃಷ್ಟಿಯಾಗಿದೆ. ಯಡಿಯೂರಪ್ಪರನ್ನ ಬಿಟ್ರೆ ಮತಗಳು ಕೈತಪ್ಪುವ ಆತಂಕ ಒಂದು ಕಡೆ, ಮತ್ತೊಂದೆಡೆ ಮಣೆ ಹಾಕಿದ್ರೆ ಬಿಜೆಪಿಯ ಇತರೆ ನಾಯಕರ ಕೋಪ.

ಬಿಸಿತುಪ್ಪವಾದ ಬಿಎಸ್ ವೈ!  

ಬಿ.ಎಸ್ ಯಡಿಯೂರಪ್ಪರ ವರ್ಚಸ್ಸು ಬಿಜೆಪಿಗೆ ಮಗ್ಗುಲ ಮುಳ್ಳಾಗಿದೆ. ಬಿಜೆಪಿಯಲ್ಲಿ ಹಾಗೂ ಮತದಾರರಲ್ಲಿ, ಜೊತೆಗೆ ಲಿಂಗಾಯತ ಸಮುದಾಯದಲ್ಲಿ ಬಿಎಸ್​ವೈ ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾರೆ. ಇದೇ ಪ್ರಭಾವ ಪಕ್ಷದಲ್ಲಿ ಆಂತರಿಕ ಘರ್ಷಣೆಗೆ ಹಾಗೂ ಸ್ವಜನಪಕ್ಷಪಾತಕ್ಕೆ ಕಾರಣವಾಗಿದೆ. ಇವುಗಳು ಪಕ್ಷದಲ್ಲಿ ಬಿರುಕುಗಳನ್ನು ಮೂಡಿಸಿವೆ. ಯಡಿಯೂರಪ್ಪ ಅವರ ನಾಯಕತ್ವ, ವರ್ಚಸ್ಸು, ಜನರ ಜೊತೆಗಿನ ಸಂಪರ್ಕ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ವೃದ್ಧಿಗೆ ಸಹಾಯ ಮಾಡಿದೆ. ಆದರೆ, ಬಿಎಸ್‌ ಯಡಿಯೂರಪ್ಪ ಅವರ ಮೇಲಿನ ಅವಲಂಬನೆಯೇ ಪಕ್ಷದ ದೌರ್ಬಲ್ಯವಾಗಿಯೂ ಕಂಡುಬರುತ್ತಿದೆ. ಯಾಕಂದ್ರೆ ಲಿಂಗಾಯತ ಸಮುದಾಯವನ್ನು ಮೀರಿ ಬೇರೆ ಸಮುದಾಯದ ಬೆಂಬಲ ಪಡೆಯಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಬಿಜೆಪಿಗೆ ಒಕ್ಕಲಿಗರ ಬೆಂಬಲ ಸಿಗುತ್ತಿಲ್ಲ. ಇದೇ ಕಾರಣಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಬಿಜೆಪಿ ಕಂಡಿದೆ. ಈ ಹಿನ್ನೆಲೆ ಬಿಎಸ್‌ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ಗೆ ಕಡೆಗಣಿಸಲು ಆಗುತ್ತಿಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿರುವುದರ ಹಿಂದೆ ಬಿಎಸ್‌ವೈ ಅವರ ಕಠಿಣ ಪರಿಶ್ರಮ ಇದ್ದು, ಕಾರ್ಯಕರ್ತರು ಮತ್ತು ಮತದಾರರಲ್ಲಿ ಯಡಿಯೂರಪ್ಪ ಜನಪ್ರಿಯರಾಗಿದ್ದಾರೆ. ಆದರೆ, ಅವರ ನಾಯಕತ್ವ ವಿಧಾನ ಕೆಲವು ಟೀಕೆಗಳಿಗೂ ಕಾರಣವಾಗಿದೆ.

ಲೋಕಸಭಾ ಚುನಾವಣೆ ಟಿಕೆಟ್ ಅನೌನ್ಸ್ ಆದ ಬಳಿಕ ಸಾಕಷ್ಟು ಅತೃಪ್ತರು ಬಿಎಸ್​ವೈ ಕುಟುಂಬದ ಮೇಲೆ ಸಿಟ್ಟಾಗಿದ್ದಾರೆ. ಅದ್ರಲ್ಲೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಂತೂ ಯಡಿಯೂರಪ್ಪ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದ್ದಾರೆ. ಅಪ್ಪ, ಮಕ್ಕಳೆಲ್ಲಾ ಸೇರಿಕೊಂಡು ಮೋಸ ಮಾಡಿದ್ರು ಅಂತಾ ಕಿಡಿ ಕಾರಿದ್ದಾರೆ. ಯತ್ನಾಳ್ ಅಂತೂ ಬಿಎಸ್​ವೈ ಕುಟುಂಬಸ್ಥರನ್ನ ಕಂಡ್ರೆ ಕೆಂಡ ಕಾರ್ತಾರೆ. ಹೀಗೆ ಸಾಕಷ್ಟು ನಾಯಕರು ಬಿಎಸ್​ವೈ ವಿರುದ್ಧ ಸಿಟ್ಟಾಗಿದ್ರೂ ಬಹಿರಂಗವಾಗಿ ಹೇಳಿಕೊಳ್ಳೋಕೂ ಸಾಧ್ಯವಾಗ್ತಿಲ್ಲ. ಇತ್ತ ಹೈಕಮಾಂಡ್ ಕೂಡ ಸೈಲೆಂಟ್ ಆಗಿದೆ.

ಬಿಎಸ್‌ ವೈ ಕಡೆಗಣಿಸಿದ್ದಕ್ಕೆ ಸೋಲು!

ಕರ್ನಾಟಕದಲ್ಲಿ 2013 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಇದಕ್ಕೆ ಬಿಎಸ್‌ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಕಾರಣವಾಗಿತ್ತು ಎಂಬುದು ಸುಳ್ಳಲ್ಲ. 2008 ಮತ್ತು 2018ರ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಉತ್ತಮ ಸಾಧನೆಗೆ ಬಿಎಸ್‌ ಯಡಿಯೂರಪ್ಪ ಅವರ ನಾಯಕತ್ವ ಪ್ರಮುಖ ಕಾರಣ ಎಂಬುದು ರಾಜಕೀಯದಲ್ಲಿ ಗೊತ್ತಿರೋದೇ. ಆದ್ರೆ ಬಿಎಸ್‌ ಯಡಿಯೂರಪ್ಪ ಅವರ ಮೇಲೆ ಸ್ವಜನಪಕ್ಷಪಾತ ಹಾಗೂ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸುವ ಆರೋಪಗಳು ಕೇಳಿಬರುತ್ತಿವೆ. ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ನೀಡುತ್ತಿರುವ ಆದ್ಯತೆಗಳು ಕೂಡ ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 2008 ಮತ್ತು 2011 ರ ನಡುವೆ ಬಿಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸುತ್ತ ವಿವಾದ ಮತ್ತು ಭ್ರಷ್ಟಾಚಾರ ಆರೋಪಗಳೇ ಸುತ್ತುವರೆದಿದ್ದವು. ಅದಲ್ಲದೇ ಭೂ ಡಿನೋಟಿಫಿಕೇಶನ್ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳಿಂದ ಬಿಎಸ್‌ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಬಂಧನ ಕೂಡ ಆಗಿದ್ದರು. ಆಗ ಬಿಎಸ್‌ವೈ ಬದಲಿಗೆ ಡಿವಿ ಸದಾನಂದಗೌಡ ಮುಖ್ಯಮಂತ್ರಿ ಆದರು.

ಬಿಎಸ್​ವೈ ಜೈಲಿನಿಂದ ಬಂದ ಬಳಿಕ ಸಿಎಂ ಸ್ಥಾನವನ್ನು ನೀಡಲು ನಿರಾಕರಿಸಲಾಗಿತ್ತು. ಇದ್ರಿಂದ ಸಿಟ್ಟಾದ ಬಿಎಸ್​ವೈ 2012ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದ್ದರು. ಇದರಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿತ್ತು. ಅದಾದ ಬಳಿಕ 2014ರಲ್ಲಿ ಬಿಎಸ್‌ವೈ ಮತ್ತೆ ಬಿಜೆಪಿಗೆ ಬಂದು ನಾಯಕತ್ವ ವಹಿಸಿಕೊಂಡರು. 2018ರಲ್ಲಿಯೂ ಬಿಜೆಪಿ ದೊಡ್ಡ ಪಕ್ಷವಾಗಿ ಗೆಲುವು ಸಾಧಿಸಿತ್ತು. ಆಗ ಬಿಎಸ್‌ ಯಡಿಯೂರಪ್ಪ ಅವರ ನಾಯಕತ್ವ ಬಿಜೆಪಿ ವರಿಷ್ಠರಿಗೆ ಗೊತ್ತಾಗಿತ್ತು. ಆದರೆ, 2021ರಲ್ಲಿ ಬಿಎಸ್‌ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಕಾರಣಕ್ಕೆ 2023ರಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. ಆದ್ದರಿಂದ ಬಿಎಸ್‌ ಯಡಿಯೂರಪ್ಪ ಅವರ ಜೊತೆಗಿನ ಸಂಬಂಧ ಬಿಜೆಪಿ ವರಿಷ್ಠರಿಗೆ ಹಗ್ಗದ ಮೇಲಿನ ನಡೆಯಾಗಿದೆ. ಇದೀಗ ಮಕ್ಕಳಿಗೆ ಉತ್ತಮ ಸ್ಥಾನಮಾನಗಳು ಸಿಗ್ತಿರೋದು ಕೂಡ ಅತೃಪ್ತರ ಸಂಖ್ಯೆ ಹೆಚ್ಚಿಸಿದೆ.

Shwetha M