‘ಬಿಜೆಪಿ ಗೆದ್ದು ಬೀಗುವುದು ಖಚಿತ ‘- ಗುಜರಾತ್ ರಾಜ್ಯ ಸರ್ಕಾರದ ಆಡಳಿತವನ್ನು ಮೆಚ್ಚಿ ಜನ ವೋಟ್ ಹಾಕಿದ್ರಾ?

‘ಬಿಜೆಪಿ ಗೆದ್ದು ಬೀಗುವುದು ಖಚಿತ ‘- ಗುಜರಾತ್  ರಾಜ್ಯ ಸರ್ಕಾರದ ಆಡಳಿತವನ್ನು ಮೆಚ್ಚಿ ಜನ ವೋಟ್ ಹಾಕಿದ್ರಾ?

ಗುಜರಾತ್‌ : ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದು ಬೀಗುವುದು ಖಚಿತ. ಈಗಾಗಲೇ 27 ವರ್ಷಗಳಿಂದ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ಮತ್ತೆ ಗೆದ್ದರೆ ಇದು ಗುಜರಾತ್‌ ಮಾಡೆಲ್‌ಗೆ ಸಿಕ್ಕ ಜಯ ಎಂದು ಕೇಸರಿ ಬ್ರಿಗೇಡ್‌ ಹೇಳಿಕೊಳ್ಳಬಹುದು. ಆದರೆ ನಿಜಕ್ಕೂ ಈ ಗುಜರಾತ್‌ ಮಾಡೆಲ್‌ ಅಂದರೆ ಏನು? ಗುಜರಾತ್‌ ರಾಜ್ಯ ಸರ್ಕಾರದ ಆಡಳಿತವನ್ನು ಮೆಚ್ಚಿನ ಜನ ವೋಟ್‌ ಹಾಕಿದ್ರಾ? ಮೋದಿಯವರ ವ್ಯಕ್ತಿತ್ವ ಇಲ್ಲಿ ಎಷ್ಟು ಪ್ರಭಾವ ಬೀರಿದೆ?.  ಗುಜರಾತ್‌ನಲ್ಲಿ ವಿರೋಧ ಪಕ್ಷದಲ್ಲಿದ್ದು ರೂಢಿಯಾಗಿರುವ ಕಾಂಗ್ರೆಸ್‌ ನಿಜಕ್ಕೂ ಅಧಿಕಾರಕ್ಕೆ ಬರೋದಕ್ಕೆ ಪ್ರಯತ್ನ ನಡೆಸುತ್ತಿದೆಯೇ?.  ಆಮ್‌ ಆದ್ಮಿ ಪಕ್ಷ ಎಷ್ಟರಮಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಜನರ ನಡುವೆ ತಲುಪುವುದಕ್ಕೆ ಸಾಧ್ಯವಾಗಿದೆಯಾ ಅನ್ನೋದನ್ನೂ  ನೋಡಬೇಕಿದೆ.

ಗುಜರಾತ್‌ ಮಾಡೆಲ್‌ ಒಪ್ಪಿಕೊಂಡಿದ್ದಾರಾ ಜನ?

ಗುಜರಾತ್‌ ಮಾಡೆಲ್‌ ಎನ್ನುವುದನ್ನು ಬಿಜೆಪಿ ದೇಶಾದ್ಯಂತ ಪ್ರಚಾರ ಮಾಡುತ್ತಿದೆ. ಅಸಲಿಗೆ ಗುಜರಾತ್‌ ಮಾಡೆಲ್‌ ಎನ್ನುವುದು ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಬಿಗಿ ಆಡಳಿತಕ್ಕೆ ಪರ್ಯಾಯ ಪದದಂತೆ ಭಾಸವಾಗುತ್ತದೆ.  ಗುಜರಾತ್‌ ರಾಜ್ಯದಲ್ಲಿ ಎಲ್ಲೇ ಓಡಾಡಿದ್ರೂ ಉತ್ತಮ ರಸ್ತೆಗಳನ್ನು ನೋಡಬಹುದು. ಅತ್ಯುತ್ತಮ ಸೇತುವೆಗಳಿವೆ. ದೊಡ್ಡ ದೊಡ್ಡ ಪಾರ್ಕ್‌ಗಳು, ಎತ್ತರೆತ್ತರದ ಕಟ್ಟಡಗಳು, ವಸತಿ ಸಂಕೀರ್ಣಗಳು, ವಿದ್ಯುತ್‌ ವ್ಯವಸ್ಥೆ, ನೀರಾವರಿ ವ್ಯವಸ್ಥೆ ಹೀಗೆ ಅಭಿವೃದ್ಧಿಯ ನಾನಾ ಮಾದರಿಗಳನ್ನು ಗುಜರಾತ್‌ನಲ್ಲಿ ಗುರುತಿಸಬಹುದು. ಹಾಗಿದ್ದರೂ ಗುಜರಾತ್‌ನಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಟೀಕಿಸುವ ಸಾಮಾನ್ಯ ಜನ,  ಹದಗೆಟ್ಟಿರುವ ಚರಂಡಿ ವ್ಯವಸ್ಥೆ, ಎಲ್ಲೆಂದರಲ್ಲಿ ಬಿಸಾಕಿರುವ ಕಸದ ಕಡೆಗೆ ಬೆರಳು ತೋರಿಸುತ್ತಾರೆ. ಅಷ್ಟೇ ಅಲ್ಲದೆ, ಗುಜರಾತ್‌ನಲ್ಲಿ ಶಿಕ್ಷಣ ವ್ಯವಸ್ಥೆ, ಆಸ್ಪತ್ರೆಗಳ ಅವಸ್ಥೆಗಳನ್ನು ತೋರಿಸಿ, 27 ವರ್ಷ ಅಧಿಕಾರ ನಡೆಸಿರುವ ಬಿಜೆಪಿ ಮಾಡಿದ್ದೇನು ಎಂದು ಪ್ರಶ್ನಿಸುತ್ತಾರೆ.

ಆದ್ರೆ, ಈ ಗುಜರಾತ್‌ ಮಾಡೆಲ್‌ ಎನ್ನುವುದು ಕೇವಲ ಅಭಿವೃದ್ಧಿ ಮತ್ತು ಬಿಗಿ ಆಡಳಿತಕ್ಕೆ ಮಾತ್ರ ಸೀಮಿತವಲ್ಲ.. ಭಾರತದ ಉದ್ದಗಲಕ್ಕೆ ಬಹುತೇಕ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಜಾತಿ ರಾಜಕಾರಣವನ್ನು ನಾವು ಗಮನಿಸಬಹುದು.  ಸೋಲು ಗೆಲುವಿನಲ್ಲೂ ಜಾತಿ ದೊಡ್ಡ ಪಾತ್ರ ನಿಭಾಯಿಸುತ್ತದೆ. ಆದ್ರೆ ಗುಜರಾತ್‌ನಲ್ಲಿ ಜಾತಿ ರಾಜಕಾರಣ ಬೇರೆಯೇ ಸ್ವರೂಪ ತಾಳಿದೆ. ಅಲ್ಲಿ ಪಾಟಿದಾರ್‌ ಸಮುದಾಯ ಅತ್ಯಂತ ಪ್ರಬಲ ಸಮುದಾಯ.. 2017ರ ವಿಧಾನಸಭಾ ಚುನಾವಣೆಯಲ್ಲಿ ಪಾಟಿದಾರ್‌ ಸಮುದಾಯದ ದೊಡ್ಡ ವಿರೋಧವನ್ನು ಬಿಜೆಪಿ ಕಟ್ಟಿಕೊಂಡಿತ್ತು. ಹಾಗಿದ್ದರೂ ಸಿಂಪಲ್‌ ಮೆಜಾರಿಟಿ ಪಡೆದುಕೊಳ್ಳೋದಿಕ್ಕೆ ಯಾವುದೇ ಅಡಚಣೆ ಆಗಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ಜಾತಿಯನ್ನು ಮೀರಿ ನಿಲ್ಲುವ ಧರ್ಮ. ಗುಜರಾತ್‌ ಮಾಡೆಲ್‌ನಲ್ಲಿ ಹೀಗೆ ಜಾತಿ ರಾಜಕೀಯವನ್ನು ಹಿನ್ನೆಲೆಗೆ ಸರಿಸಿ, ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತದೆ. ಅಂದರೆ ಜಾತಿಯ ಕಾರಣಕ್ಕೆ ಬಿಜೆಪಿಯನ್ನು ವಿರೋಧಿಸುವ ವ್ಯಕ್ತಿ ಧರ್ಮದ ವಿಚಾರ ಅಥವಾ ನೇರವಾಗಿ ಹೇಳಬೇಕೆಂದರೆ ಹಿಂದುತ್ವದ ಅಜೆಂಡಾ ಮುನ್ನೆಲೆಗೆ ಬಂದಾಗ ಜಾತಿಯನ್ನೂ ಮರೆತುಬಿಡುತ್ತಾನೆ. ಬಿಜೆಪಿಯನ್ನು ವಿರೋಧಿಸುತ್ತಾನೆ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಲು ಹಿಂದುತ್ವ ಅಜೆಂಡಾ ಅಡ್ಡಿಮಾಡುತ್ತದೆ. ಆಗ ಆತ ಅನಿವಾರ್ಯವಾಗಿ ಒಂದೋ ಬಿಜೆಪಿಗೆ ಮತ ಹಾಕುತ್ತಾನೆ, ಇಲ್ಲವೇ ಮತದಾನದಿಂದ ದೂರ ಉಳಿಯುತ್ತಾನೆ. ಹೀಗೆ ಗುಜರಾತ್‌ ಮಾಡೆಲ್‌, ಮತದಾರರಲ್ಲಿ ಆಳವಾಗಿ ಬೇರೂರಿರುವುದು ಸ್ಪಷ್ಟ.

ಗುಜರಾತ್‌ನಲ್ಲಿ ರಾಜ್ಯ ಸರ್ಕಾರದ ಬಗ್ಗೆ ಜನ ಏನಂತಾರೆ?

ಗುಜರಾತ್‌ನಲ್ಲಿ ನಿರಂತರ ಆಡಳಿತದಲ್ಲಿರುವ ಬಿಜೆಪಿ, ಮೋದಿಯವರು ಸಿಎಂ ಆಗಿದ್ದ ಅವಧಿಯನ್ನು ಹೊರತುಪಡಿಸಿದ್ರೆ, ಪದೇ ಪದೆ ಮುಖ್ಯಮಂತ್ರಿಯನ್ನು ಬದಲಾಯಿಸಿದ ಇತಿಹಾಸ ಹೊಂದಿದೆ. ಈಗಿರುವ ಸಿಎಂ ಮೊದಲ ಬಾರಿಯ ಶಾಸಕ, ಹಿಂದೆ ಗುಜರಾತ್‌ನ ನಾರನ್‌ಪುರ ಕ್ಷೇತ್ರದ ಶಾಸಕರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹಿಂಬಾಲಕ.. ಇದೇ ನಾರನ್‌ಪುರ ಕ್ಷೇತ್ರ ಪುನರ್‌ವಿಂಗಡಣೆಯಾದ ನಂತರ ಹುಟ್ಟಿಕೊಂಡಿರುವ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದವರು ಆನಂದಿ ಬೆನ್‌ ಪಟೇಲ್‌ ಮತ್ತು ಆ ಕ್ಷೇತ್ರದ ಎರಡನೇ ಶಾಸಕ, ಹಾಲಿ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್‌.. ಆದ್ರೆ, ಗುಜರಾತ್‌ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆಯಾಗಿದ್ದು ಕಡಿಮೆ.. ಜನ ಕೂಡ ರಾಜ್ಯ ಸರ್ಕಾರದ ಬಗ್ಗೆ ಮಾತಾಡೋದೂ ಕಡಿಮೆ.. ಅವರದ್ದೇನಿದ್ರೂ ಮೋದಿ ಎಂಬ ಎರಡಕ್ಷರದ ಮಂತ್ರ ಮಾತ್ರ.. ಕೇವಲ ರಾಜ್ಯ ಸರ್ಕಾರದ ಸಾಧನೆ ಆಧರಿಸಿ ಜನ ಮತ ಹಾಕಿದ್ರೆ ಫಲಿತಾಂಶ ಬೇರೆಯಾಗುವ ಸಾಧ್ಯತೆ ಇತ್ತು.

ಅಭಿವೃದ್ಧಿ, ಸಾಧನೆಗಳೆಲ್ಲಾ ಹಿನ್ನೆಲೆಗೆ.. ಮೋದಿ ಮಾತ್ರ ಮುನ್ನೆಲೆಗೆ!

ಈ ಬಾರಿಯ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಆಗಿರುವುದು ಇಷ್ಟೇ. ಅಲ್ಲಿ ಅಭಿವೃದ್ಧಿ ಅಥವಾ ಸಾಧನೆಗಳು ಕೇವಲ ಮಾತಿಗಷ್ಟೇ ಸೀಮಿತವಾಗಿದ್ದವು. ಇದರರ್ಥ ಅಲ್ಲಿ ಅಭಿವೃದ್ಧಿ ಆಗಿಲ್ಲ ಅಂತಲ್ಲ.. ಆಗಿರುವ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಿಲ್ಲ ಅಂತ.  ಆದ್ರೆ ಇದೆಲ್ಲವನ್ನೂ ಮೀರಿಸಿ ಅಲ್ಲಿ ಚರ್ಚೆಯಾಗಿರುವುದು ಮೋದಿ ಬಗ್ಗೆ ಮಾತ್ರ. ಹತ್ತು ಜನರನ್ನು ಮಾತಾಡಿಸಿದ್ರೆ ಕನಿಷ್ಟ ಏಳು ಜನ, ಮೋದಿಯವರನ್ನು ಹೊಗಳುತ್ತಿದ್ದರು. ಅಂದರೆ ಅವರು ವಿಧಾನಸಭೆ ಚುನಾವಣೆಯಲ್ಲೂ ಮತ ಹಾಕಿರುವುದು ನೇರವಾಗಿ ಮೋದಿಯವರಿಗೆ ಮಾತ್ರ.. ಉಳಿದ ಬೇರಿನ್ಯಾರದೇ ಮುಖ ನೋಡಿ ಬಿಜೆಪಿ ಪರ ಮತಹಾಕಿದವರು ಕಡಿಮೆಯೇ. ಹೀಗಾಗಿ ಗುಜರಾತ್‌ನಲ್ಲಿ ರಿಸಲ್ಟ್‌ ಏನೇ ಆಗಿದ್ದರೂ  ಬಿಜೆಪಿಯ ಯಶಸ್ಸು ಮೋದಿಯವರ ಜನಪ್ರಿಯತೆಯನ್ನು ಅವಲಂಬಿಸಿದೆ. ಮೋದಿ ಹೆಸರಷ್ಟೇ ಎಲ್ಲಾ ಕಡೆಯಿಂದಲೂ ಗುಜರಾತ್‌ನಲ್ಲಿ ಕೇಳುತ್ತಿತ್ತು..

ವಿರೋಧ ಪಕ್ಷದಲ್ಲಿದ್ದು ಕಾಂಗ್ರೆಸ್‌ಗೆ ರೂಢಿ.. ಅಧಿಕಾರಕ್ಕೆ ಏರೋದಿಲ್ವಾ?

1990ರ ದಶಕದ ನಂತರ ಕಾಂಗ್ರೆಸ್‌ ಗುಜರಾತ್‌ನಲ್ಲಿ ಆಡಳಿತ ನಡೆಸಿಲ್ಲ. ವಿರೋಧ ಪಕ್ಷವನ್ನೇ ತನ್ನ ಖಾಯಂ ಜಾಗ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಅದ್ಯಾಕೋ ಆ ಸೀಟು ಬಿಟ್ಟುಕೊಡುವ ಮನಸ್ಸಿದ್ದಂತೆ ಕಾಣುತ್ತಿಲ್ಲ.. ಕಾಂಗ್ರೆಸ್‌ ನಾಯಕರಿಗೂ ವಿರೋಧ ಪಕ್ಷದಲ್ಲಿದ್ದು ರೂಢಿಯಾಗಿದೆ. ಇದು ಕಾಂಗ್ರೆಸ್‌ ಪರ ಒಲವು ಹೊಂದಿರುವ ಸಾಮಾನ್ಯ ಜನರವರೆಗೂ ತಲುಪಿದೆ. ಗೆಲ್ಲೋದೆನಿದ್ದರೂ ಬಿಜೆಪಿ ಅಂತಲೇ ಕಾಂಗ್ರೆಸ್‌ ಪರವಾಗಿ ಮಾತಾಡುವವರು ಕೂಡ ಮಾತು ಮುಗಿಸುವುದು ಶತಮಾನದ ಇತಿಹಾಸ ಇರುವ ಪಕ್ಷದ ಭವಿಷ್ಯವನ್ನು ನುಡಿಯುತ್ತದೆ. ಆಡಳಿತ ಕೈ ತಪ್ಪಿ 30 ವರ್ಷ ಕಳೆದ್ರೂ ಕಾಂಗ್ರೆಸ್‌ ಪರವಾಗಿ ಮತಹಾಕುವವರ ಸಂಖ್ಯೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 41 ಪರ್ಸೆಂಟ್‌ ಇತ್ತು. ಅಂದರೆ ಬಿಜೆಪಿ ವಿರೋಧಿಸುವ ಮತದಾರರ ಆಯ್ಕೆಯಾಗಿಯಷ್ಟೇ ಕಾಂಗ್ರೆಸ್‌ ಉಳಿದಿದೆ. ಕಾಂಗ್ರೆಸ್‌ಗೆ ಅಧಿಕಾರಕ್ಕೆ ಏರುವ ಯೋಚನೆಯಾಗಲಿ ಯೋಜನೆಯಾಗಲೀ ಇಲ್ಲ..

ಸದ್ದು ಮಾಡಿದ್ದ ಆಮ್‌ ಆದ್ಮಿ ಪಕ್ಷ ಅಧಿಕಾರದಿಂದ ಎಷ್ಟು ದೂರ?

ಆಮ್‌ ಆದ್ಮಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ದೊಡ್ಡ ಸದ್ದು ಮಾಡಿದೆ. ವಿಶೇಷವಾಗಿ ಸೂರತ್‌ ನಗರದಲ್ಲಿ ಬಿಜೆಪಿಯ ಭದ್ರ ಕೋಟೆಯಲ್ಲಿ ಒಂದಿಷ್ಟು ಬಿರುಕು ಮೂಡಿಸುವಲ್ಲಿ ಆಪ್‌ ಯಶಸ್ವಿಯಾಗುವ ಲಕ್ಷಣವೂ ಕಾಣ್ತಿದೆ. ಅದರಾಚೆಗೆ ಆಮ್‌ ಆದ್ಮಿ ಪಕ್ಷಕ್ಕೆ ಮತಗಳಿಕೆಯೇ ದೊಡ್ಡ ಸಾಧನೆಯಾಗಬಹುದು. ಬಿಜೆಪಿ ವಿರೋಧಿಸುವವರು ಕಾಂಗ್ರೆಸ್‌ಗೆ ಮಾತ್ರ ಮತಹಾಕಬೇಕು ಎಂಬ ವಾತಾವರಣದಲ್ಲಿ ಮೂರನೇ ಆಯ್ಕೆಯನ್ನು ಜನರ ಮುಂದೆ ತೆರೆದಿಟ್ಟಿದೆ ಆಪ್‌.. ಅಷ್ಟಕ್ಕೆ ಮಾತ್ರ ಈ ಬಾರಿಯ ಚುನಾವಣೆಯಲ್ಲಿ ಆಪ್‌ ಪಾತ್ರ ಸೀಮಿತವಾಗಬಹುದು.. ಉಳಿದಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಎಡೆಬಿಡದೆ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು. ಗುಜರಾತ್‌ ಮಾಡೆಲ್‌ ಬಗ್ಗೆ ಮತಾಡುವ ರಾಜ್ಯದಲ್ಲಿ ಮೋದಿ ಜೊತೆ ಬಿಂಬಿತವಾಗಿರುವ ಇನ್ನೋರ್ವ ಪ್ರಮುಖ ನಾಯಕರೆಂದರೆ ಯೋಗಿ ಆದಿತ್ಯನಾಥ್‌ ಮಾತ್ರ. ಮೋದಿ ಮತ್ತು ಯೋಗಿಯ ಫೋಟೋಗಳು ಜೊತೆಯಲ್ಲೇ ರಾರಾಜಿಸಿದ್ದವು. ಪ್ರಧಾನಿ ಮೋದಿಯವರಂತೂ ಪೂರ್ಣ ಪ್ರಮಾಣದ ಪರಿಶ್ರಮ ಹಾಕಿ, ಗೆಲುವಿಗೆ ಪ್ರಯತ್ನಿಸುತ್ತಿರುವಂತೆ ತೋರಿಸಿಕೊಂಡಿದ್ದರು. ವಾಸ್ತವವಾಗಿ ಗುಜರಾತ್‌ನ ಒಳಗೆ ಚುನಾವಣೆ ಆರಂಭಕ್ಕೂ ಮೊದಲೇ ಎದುರಾಳಿಗಳು ಸೋಲು ಒಪ್ಪಿಕೊಂಡಂತೆ ವರ್ತಿಸುತ್ತಿದ್ದವು.  ಪ್ರಧಾನಿ ಮೋದಿ ಮಾತ್ರ ಪೂರ್ಣ ಪರಿಶ್ರಮ ಹಾಕುವಂತೆ ನೋಡಿಕೊಂಡು ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಭರವಸೆಯನ್ನು ಜನರಲ್ಲಿ ಮೂಡಿಸಿದ್ರು. ಇದರಿಂದಾಗಿ ಆತೇ ಹೈ ಭಾಜಪಾ ಹೀ.. ಅಂತ ಸಾಮಾನ್ಯ ಜನರು ಹೇಳಿಕೊಳ್ಳುವಂತಾಗಿತ್ತು. ಈಗ ಎಕ್ಸಿಟ್‌ಪೋಲ್‌ನಲ್ಲೂ ಅದಕ್ಕೆ ಪೂರಕವಾದ ಫಲಿತಾಂಶ ಕಾಣುತ್ತಿದೆ. ಆದರೂ ಎಕ್ಸಾಟ್‌ ಪೋಲ್‌ ರಿಸಲ್ಟ್‌ ಏನಾಗುತ್ತದೆ ಎಂಬ ಕುತೂಹಲ ಇದ್ದೇ ಇದೆ.

suddiyaana