ನಟಿ ಲೀಲಾವತಿ ಅವರ ಕುಟುಂಬ ಇಂದಿಗೂ ಇದ್ಯಾ? – ಲೀನಾ ಸಿಕ್ವೇರಾ ಲೀಲಾವತಿ ಆಗಿದ್ದು ಹೇಗೆ?

ನಟಿ ಲೀಲಾವತಿ ಅವರ ಕುಟುಂಬ ಇಂದಿಗೂ ಇದ್ಯಾ? – ಲೀನಾ ಸಿಕ್ವೇರಾ ಲೀಲಾವತಿ ಆಗಿದ್ದು ಹೇಗೆ?

ಅತ್ಯಂತ ಸಹಜ ಅಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದಿದ್ದ, ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಲೀಲಾವತಿ ಇನ್ನು ನೆನಪು ಮಾತ್ರ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಮ್ಮ ಬದುಕಿನ ಪಾತ್ರ ಮುಗಿಸಿ ‘ದೇವರ ಗುಡಿ’ ಸೇರಿದ್ದಾರೆ. ಆದ್ರೆ ಲೀಲಾವತಿ ಅವರ ಕೆಲವೊಂದು ಮಾಹಿತಿ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಲೀಲಾವತಿ ಅವರ ಕುಟುಂಬ ಇಂದಿಗೂ ಇದ್ಯಾ? ಲೀನಾ ಸಿಕ್ವೇರಾ ಆಗಿದ್ದವರು ಲೀಲಾವತಿ ಆಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ನಟರಿಗಿಂತಲೂ ಹೆಚ್ಚು ಸಂಭಾವನೆ.. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – ಲೀಲಾವತಿ ಬದುಕಿನ ಏಳುಬೀಳಿನ ಸತ್ಯ

ಲೀಲಾವತಿ ಅವರದ್ದು ಏಳುಬೀಳಿನ ಜೀವನ. ಇವರದ್ದು ಸಿನಿಮಾಗಳಲ್ಲಿ ತೋರಿಸಿದಕ್ಕಿಂತ ಹೆಚ್ಚು ಕಷ್ಟದ ಬದುಕು.  1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾವೂರು ಗ್ರಾಮದ ಮುರ ಎಂಬಲ್ಲಿ ಲೀಲಾವತಿ ಜನಿಸಿದ್ರು. ಅವರು ಆರು ವರ್ಷದ ಮಗುವಾಗಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡರು. ಲೀಲಾವತಿಯವರ ಮೂಲ ಹೆಸರು ಲೀನಾ ಸಿಕ್ವೇರಾ ಅಂತಾ ಹೇಳಲಾಗುತ್ತಿದೆ. ಅವರ ಸಹೋದರಿ ಅಂಜಲಿನಾ ಸಿಕ್ವೇರಾ. ಬಾಲ್ಯದಲ್ಲೇ  ಹೆತ್ತವರನ್ನು ಕಳೆದುಕೊಂಡಿದ್ದರಿಂದ ಲೀನಾ ದೊಡ್ಡಪ್ಪನ ಮಗಳು ಲೂಸಿ ಸಿಕ್ವೇರಾ ಆಶ್ರಯದಲ್ಲಿ ಬೆಳೆದಳು. ಬಾಲ್ಯದಲ್ಲೇ ಬಹಳಷ್ಟು ಚುರುಕು ಹಾಗೂ ಉತ್ತಮ ನೃತ್ಯ ಪಟುವಾಗಿದ್ದ ಸಹೋದರಿಯರು ಜೀವನೋ ಪಾಯಕ್ಕಾಗಿ ನೃತ್ಯ ತರಬೇತಿ ನೀಡುತ್ತಿದ್ದರಂತೆ. ಲೀನಾ ಯಾನೆ ಲೀಲಾವತಿಗೆ ಎಲ್ಲು, ಲಿಲ್ಲಿ ಎಂಬ ಉಪನಾಮವೂ ಇದೆ ಎಂಬುದು ಅವರ ಜತೆಗೆ ಬಾಲ್ಯ ಕಳೆದ ನಾವೂರಿನ ಅಣ್ಣಿ ಮೂಲ್ಯ ಮತ್ತು ಕರ್ಮಿನಾ ಡಿ’ಸಿಲ್ವಾ ಹೇಳುತ್ತಾರೆ.

ಮುರದಲ್ಲಿಯೇ ನಾಲ್ಕನೇ ತರಗತಿವರೆಗಿದ್ದ ಸರಕಾರಿ ಶಾಲೆಯಲ್ಲೇ ಅವರ ಬಾಲ್ಯದ ವಿದ್ಯಾಭ್ಯಾಸ ಪೂರ್ಣಗೊಂಡಿತ್ತು. ಆರಂಭದಲ್ಲಿ ಬೆಳ್ತಂಗಡಿ ಚರ್ಚ್‌ಗೆ ತೆರಳುತ್ತಿದ್ದ ಅವರು 1955ರಲ್ಲಿ ಇಂದ ಬೆಟ್ಟು ಚರ್ಚ್‌ ನಿರ್ಮಾಣವಾದ ಬಳಿಕ ಅಲ್ಲಿಗೇ ಹೋಗುತ್ತಿದ್ದರು. ಬಾಲ್ಯದಿಂದಲೇ ಬಹಳಷ್ಟು ಚುರುಕುತನ ಹೊಂದಿದ್ದರಂತೆ ಲೀಲಾವತಿ. ಇವರ ಸಹೋದರಿ ಅಂಜಲಿನಾ ಸಿಕ್ವೆರಾ ವೃತ್ತಿಯಲ್ಲಿ ಶಿಕ್ಷಕಿ. ಅವರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಇವರ ದೊಡ್ಡಪ್ಪನ ಮಗಳು ಲೂಸಿ ಸಿಕ್ವೇರಾ ವೇಣೂರಿನ ನಿಟ್ಟಡೆ ಗ್ರಾಮದ ಬೆರ್ಕಳದಲ್ಲಿ ವಾಸವಾಗಿದ್ದಾರೆ.

ಲೀಲಾವತಿ ಅವರು ಊರಿಂದ ದೂರವಾದ ಬಳಿಕ ಲೂಸಿ ಯವರು ಮುರದಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿ ವೇಣೂರಿಗೆ ತೆರಳಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಪುತ್ರ ವಿನೋದ್‌ ರಾಜ್‌ ಜತೆಗೆ ಲೀಲಾವತಿ ನಾವೂರಿಗೆ ಬಂದು ಮನೆ ತೆರಿಗೆ ಕಟ್ಟಿ, ಸ್ಥಳೀಯರ ಜೊತೆ ಸಮಯ ಕಳೆದಿದ್ದರಂತೆ. ಇವರ ಕುಟುಂಬದ ಸದಸ್ಯರು ಬೆಳ್ತಂಗಡಿ ಚರ್ಚ್‌ಗೆ ಹೋಗುತ್ತಿದ್ದರು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ನಟಿ ಲೀಲಾವತಿ ಅವರು ತನ್ನ ಧರ್ಮದ ಬಗ್ಗೆ ಇರಬಹುದು, ಮದುವೆ ಕುರಿತ ಮಾಹಿತಿ ಇಂದಿನವರೆಗೂ ಯಾರಲ್ಲಿಯೂ ಹಂಚಿಕೊಳ್ಳದೆ ಮುಚ್ಚಿಟ್ಟಿದ್ದಾರೆ. ಆದ್ರೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಾನು ಬೆಳ್ತಂಗಡಿಯವಳು ಎಂದು ಮಾತ್ರ ಹೇಳಿದ್ದರು. ಇದೀಗ ಲೀಲಾವತಿ ಸಾವಿನ ಬಳಿಕ ಹುಟ್ಟೂರು, ಬಾಲ್ಯದ ವಿಚಾರಗಳು ಹೊರಬರುತ್ತಿವೆ. ಏನೇ ಆಗಲಿ, ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡು, ತನ್ನ ಪ್ರತಿಭೆಯಿಂದಲೇ ಕನ್ನಡ ಚಿತ್ರರಂಗದ ಆಸ್ತಿಯಾದವರು ಲೀಲಾವತಿಯವರು.

Shwetha M