ಅರ್ಜುನನ ವಿಚಾರದಲ್ಲಷ್ಟೇ ಅಲ್ಲ.. ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಾಲು ಸಾಲು ನಿರ್ಲಕ್ಷ್ಯ – ಎಡವಟ್ಟಿನ ಬಳಿಕವೂ ಬೇಜವಾಬ್ದಾರಿ

ಅರ್ಜುನನ ವಿಚಾರದಲ್ಲಷ್ಟೇ ಅಲ್ಲ.. ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಾಲು ಸಾಲು ನಿರ್ಲಕ್ಷ್ಯ – ಎಡವಟ್ಟಿನ ಬಳಿಕವೂ ಬೇಜವಾಬ್ದಾರಿ

ಕಾಡಾನೆಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಕಾಡಂಚಿನ ಗ್ರಾಮಗಳ ಜನ ಇಂದಿಗೂ ವನ್ಯಜೀವಿಗಳ ಭಯದಲ್ಲೇ ಬದುಕು ದೂಡುತ್ತಿದ್ದಾರೆ. ಚಿರತೆ, ಹುಲಿ, ಕರಡಿ, ಕಾಡಾನೆಗಳ ದಾಳಿಯಿಂದ ಸಾಲು ಸಾಲು ಜೀವಗಳು ಹೋಗ್ತಿವೆ. ಅಭಿವೃದ್ಧಿಯ ಹೆಸರಲ್ಲಿ ಕಾಡು ನಾಶ ಮಾಡಿದಂತೆಲ್ಲಾ ಅಪಾಯವೂ ಹೆಚ್ಚುತ್ತಲೇ ಇದೆ. ಆದ್ರೆ ಈ ಸಂಘರ್ಷ ತಪ್ಪಿಸಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಸಾಲು ಸಾಲು ಎಡವಟ್ಟುಗಳನ್ನ ಮಾಡಿಕೊಳ್ತಿದ್ದಾರೆ. ಅವರ ನಿರ್ಲಕ್ಷ್ಯದಿಂದ  ಪ್ರಾಣಿಗಳೂ ಬಲಿಯಾಗುತ್ತಿವೆ. ಇತ್ತೀಚೆಗಷ್ಟೇ ನಮ್ಮ ಮನೆ ಮಗನಂತಿದ್ದ ಅರ್ಜುನನನ್ನೇ ಕಳೆದುಕೊಂಡಿದ್ದೇವೆ. 8 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅರ್ಜುನನನ್ನು ಕಾಡಾನೆ ಸೆರೆಗೆ ಕರೆದೊಯ್ದು ಅಧಿಕಾರಿಗಳೇ ಕೊಂದು ಬಿಟ್ಟಿದ್ದಾರೆ.

ಇದನ್ನೂ ಓದಿ : ಐದು ದಿನಗಳ ನಿರಂತರ ಪ್ರಯತ್ನ ಯಶಸ್ವಿ – ಮೂರು ಚಿರತೆ ಮರಿಗಳನ್ನು ಮತ್ತೆ ತಾಯಿ ಬಳಿ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಅರಣ್ಯ ಸಿಬ್ಬಂದಿ ಬೇಜವಾಬ್ದಾರಿ ಇದೇ ಮೊದಲೇನಲ್ಲ. ಹೆಜ್ಜೆ ಹೆಜ್ಜೆಗೂ ತಪ್ಪು ಮಾಡ್ತಿದ್ರೂ ಎಚ್ಚೆತ್ತುಕೊಳ್ತಿಲ್ಲ. ಜೀವಗಳು ಹೋಗ್ತಿದ್ರೂ ತಿದ್ದಿಕೊಳ್ತಿಲ್ಲ. ಡಿಸೆಂಬರ್ ನಾಲ್ಕರಂದು ಹಾಸನದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಸಾವನ್ನಪ್ಪಿದ್ದ. ಅರಿವಳಿಕೆ ತಜ್ಞರು ನೀಡಿದ್ದ ಚುಚ್ಚುಮದ್ದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಅಧಿಕಾರಿಗಳ ವರ್ತನೆ ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ  ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಇಡೀ ಕರುನಾಡಿನ ಜನರೇ ಆಗ್ರಹಿಸಿದ್ದರು. ಮಾವುತ ವಿನೋದ್ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಆತುರಾತುರವಾಗಿ ಅರ್ಜುನನ ಕಳೇಬರವನ್ನ ಮಣ್ಣು ಮಾಡಿದ್ರು. ಅರ್ಜುನನ ಸಾವಿಗೆ ಗುಂಡೇಟು ಒಂದು ಕಾರಣ ಇರಬಹುದಾ ಎಂಬ ಅನುಮಾನ ಇದ್ದರೂ ಕೂಡ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಇದೇ ಕಾರಣಕ್ಕೆ ಅರಣ್ಯಾಧಿಕಾರಿಗಳ ಮೇಲೆ ಅನುಮಾನ ಬಲ ಆಗ್ತಿದೆ. ಅಲ್ಲದೆ ಹಲವು ಪ್ರಶ್ನೆಗಳು ಇಂದಿಗೂ ಜನರನ್ನು ಕಾಡುತ್ತಿವೆ.

ಅರ್ಜುನ ಆನೆ ಸಾವಿನ ಬಗ್ಗೆ ಮಾವುತ ವಿನೋದ್ ಅವ್ರೇ ಅನುಮಾನ ವ್ಯಕ್ತಪಡಿಸಿದರೂ ಅರಣ್ಯ ಇಲಾಖೆ ಸ್ಪಂದಿಸಲಿಲ್ಲ ಏಕೆ?. ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಿ ಕೈತೊಳೆದುಕೊಂಡಿದ್ದೇಕೆ? ಅರ್ಜುನ ಆನೆಯ ವಿಸ್ತೃತ ಮರಣೋತ್ತರ ಪರೀಕ್ಷೆ ಮಾಡಿಲ್ಲ ಏಕೆ? ಹಾಗೇ ಆನೆ ಮೃತದೇಹಕ್ಕೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಕೂಡ ಏಕೆ ಮಾಡಲಿಲ್ಲ..? ಕನಿಷ್ಠ ಅರ್ಜನನ ಮೃತದೇಹದ ಮತ್ತೊಂದು ಭಾಗ ನೋಡದೇ ಮಣ್ಣು ಮುಚ್ಚಿದ್ದೇಕೆ?. ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಂತೆಯೇ ಮೃತದೇಹವನ್ನು ಗುಂಡಿಗಿಳಿಸಿದ್ದೇಕೆ?. ಅರ್ಜುನನ ಬಲ ಭಾಗವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಯ್ತಾ? ಹೀಗೆ ಹಲವು ಅನುಮಾನಗಳ ನಡುವೆಯೂ ಅರಣ್ಯಾಧಿಕಾರಿಗಳು ಅರ್ಜುನನ ದಂತ ತೆಗೆದು ದೇಹದ ಒಂದು ಭಾಗದ ಬಾಹ್ಯ ಪರೀಕ್ಷೆ ಮಾತ್ರ ನಡೆಸಿದ್ರು. ಕೊನೆಗೆ ಇದೇ ಮರಣೋತ್ತರ ಪರೀಕ್ಷೆ ಎಂದರು. ಆದರೆ ಕನಿಷ್ಠ ಜನರ ಅನುಮಾನ ದೂರಮಾಡಲಾದರೂ ಸೂಕ್ತ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸಲಿಲ್ಲ. ದಸರಾ ಆನೆ, ಅಂಬಾರಿ ಆನೆ ಎನ್ನೋ ನೆಪ ಹೇಳಿ ಹತ್ತಾರು ಅನುಮಾನಗಳನ್ನ ಉಳಿಸಿಯೇ ಅಂತ್ಯಕ್ರಿಯೆ ಮಾಡಿ ಮುಗಿಸಿಬಿಟ್ಟರು. ಅಸಲಿಗೆ ಕಾನೂನು ನಿಯಮಗಳೂ ಕೂಡ ಇಲ್ಲಿ ಪಾಲನೆ ಆಗಲಿಲ್ಲ. ಯಾಕಂದ್ರೆ ಪ್ರಾಣಿ ಸಾವಿನ ಬಗ್ಗೆ ಅನುಮಾನವಿದ್ದಾಗ ಮರಣೋತ್ತರ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯಲ್ಲಿ ಗುಂಡೇಟಿನ ಸತ್ಯ ಸಂಪೂರ್ಣವಾಗಿ ತಿಳಿಯುವುದಿಲ್ಲ. ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳಿಗೆ ಮೆಟಲ್ ಡಿಟೆಕ್ಟರ್ ಟೆಸ್ಟ್ ಮಾಡುತ್ತಾರೆ. ಮರಣೋತ್ತರ ಪರೀಕ್ಷೆಗೂ ಮುನ್ನ ಮೆಟಲ್ ಡಿಟೆಕ್ಟರ್ ಟೆಸ್ಟ್ ನಡೆಸಬೇಕು. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯೇ ಇದೆ. ಅರ್ಜುನ ಆನೆ ಸಾವಿನ ವಿಚಾರದಲ್ಲಿ ಇದ್ಯಾವುದು ಕೂಡ ಪಾಲನೆ ಮಾಡಿಲ್ಲ. ಹಾಗಂತ ಅರ್ಜುನನ ವಿಚಾರದಲ್ಲಿ ಮಾತ್ರ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿಲ್ಲ. ಸಾಲು ಸಾಲು ಎಡವಟ್ಟುಗಳು, ಸರಣಿ ಸಾವುಗಳೇ ಸಾಕ್ಷಿಯಾಗಿವೆ.

Shantha Kumari