ಪದೇ ಪದೇ ಆರೋಗ್ಯ ಸಮಸ್ಯೆ ಕಾಡ್ತಿದ್ಯಾ? – ಈ ಲಕ್ಷಣ ಕಂಡುಬಂದ್ರೆ ಎಚ್ಚೆತ್ತುಕೊಳ್ಳಿ!

ಇಂದಿನ ಜೀವನ ಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದ್ರೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ಏನು ಕಾರಣ ಅಂತಾ ಅನೇಕರಿಗೆ ತಿಳಿದಿರುವುದಿಲ್ಲ.. ನಮ್ಮ ದೇಹದಲ್ಲಿ ಏನಾದ್ರೂ ಕೊಂಚ ವ್ಯತ್ಯಾಸ ಆದ್ರೂ ಆರೋಗ್ಯ ಹಾಳಾಗುತ್ತೆ. ಇತ್ತೀಚೆಗೆ ಅನೇಕರು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದು ತಿಳಿಯುವುದು ಹೇಗೆ? ಇದ್ರ ಲಕ್ಷಣ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 18 ಸೀಸನ್.. 8,509 ರನ್ಸ್ – ಫ್ರಾಂಚೈಸಿಗಳ ವಿರುದ್ಧ ವಿರಾಟ್ ಕೊಹ್ಲಿ ವಿರಾಟ ರೂಪ!
ಚರ್ಮ ಬಿಳಿಚಿಕೊಳ್ಳುವುದು
ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ, ಚರ್ಮ ತನ್ನ ಬಣ್ಣವನ್ನ ಕಳ್ಕೊಂಡು ಬಿಳಿಚಿಕೊಳ್ಳಬಹುದು. ಇದು ಮುಖ, ತುಟಿ, ಉಗುರುಗಳು ಮತ್ತು ಕಣ್ಣಿನ ಒಳಭಾಗದಲ್ಲಿ ಸ್ಪಷ್ಟವಾಗಿ ಕಾಣುತ್ತೆ. ಕೆಲವೊಮ್ಮೆ, ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಹೆಚ್ಚಾಗಿ ಕಾಣಿಸಬಹುದು, ಇದು ರಕ್ತ ಪರಿಚಲನೆ ಕಡಿಮೆಯಾಗಿದೆ ಅಂತ ತೋರಿಸುತ್ತೆ.
ತಲೆನೋವು ಮತ್ತು ತಲೆಸುತ್ತು
ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗದಿದ್ದಾಗ, ಆಗಾಗ್ಗೆ ತಲೆನೋವು ಬರಬಹುದು. ಕೆಲವರಿಗೆ ತಲೆಸುತ್ತು ಅಥವಾ ಮೂರ್ಛೆ ಬರೋ ತರ ಅನಿಸಬಹುದು. ಇದು ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತೆ. ಗಮನ ಕೊಡೋದ್ರಲ್ಲಿ ತೊಂದ್ರೆ ಮತ್ತು ಕಿರಿಕಿರಿಯೂ ಆಗಬಹುದು.
ಸುಸ್ತು ಮತ್ತು ದೌರ್ಬಲ್ಯ
ಕಬ್ಬಿಣಾಂಶದ ಕೊರತೆಯಿಂದ ಆಗೋ ಸುಸ್ತು ನಿದ್ದೆ ಕೊರತೆ ಅಥವಾ ಹೆಚ್ಚು ಕೆಲಸದಿಂದ ಆಗೋ ಸುಸ್ತು ತರ ಇರಲ್ಲ. ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದೇ ಇರೋದ್ರಿಂದ, ಸ್ನಾಯುಗಳು ಮತ್ತು ಅಂಗಗಳು ಸರಿಯಾಗಿ ಕೆಲಸ ಮಾಡೋಕೆ ಆಗಲ್ಲ. ನೀವು ಯಾವಾಗ್ಲೂ ಸುಸ್ತಾಗಿ, ದೌರ್ಬಲ್ಯವಾಗಿ, ಸ್ವಲ್ಪ ಕೆಲಸ ಮಾಡಿದ್ರೂ ತುಂಬಾ ಸುಸ್ತಾಗ್ತಿದ್ರೆ ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ.
ಉಸಿರಾಟದ ತೊಂದರೆ
ಸಾಮಾನ್ಯ ಕೆಲಸ ಮಾಡುವಾಗ ಅಥವಾ ಮೆಟ್ಟಿಲು ಹತ್ತುವಾಗ ಉಸಿರು ಬಿಡೋದ್ರಲ್ಲಿ ತೊಂದ್ರೆ ಆದ್ರೆ, ಅದು ಕಬ್ಬಿಣದ ಕೊರತೆಯ ಲಕ್ಷಣ ಇರಬಹುದು. ದೇಹದಲ್ಲಿ ಆಮ್ಲಜನಕ ಕೊರತೆ ಇರೋದ್ರಿಂದ, ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತೆ, ಇದ್ರಿಂದ ಹೃದಯ ಬಡಿತದಲ್ಲಿ ತೊಂದ್ರೆ ಆಗಬಹುದು.
ಉಗುರು ಮತ್ತು ಕೂದಲಿನ ಸಮಸ್ಯೆ
ಕಬ್ಬಿಣಾಂಶವು ಉಗುರು ಮತ್ತು ಕೂದಲಿನ ಆರೋಗ್ಯಕ್ಕೆ ಮುಖ್ಯ. ಕಬ್ಬಿಣ ಕೊರತೆ ಇದ್ರೆ, ಉಗುರುಗಳು ತೆಳುವಾಗಿ, ದುರ್ಬಲವಾಗಿ, ಸುಲಭವಾಗಿ ಮುರಿಯುತ್ತವೆ. ಕೆಲವೊಮ್ಮೆ, ಉಗುರುಗಳು ಚಮಚದ ಆಕಾರ ಪಡೆಯಬಹುದು. ಹೆಚ್ಚು ಕೂದಲು ಉದುರುವುದು ಕೂಡ ಕಬ್ಬಿಣಾಂಶದ ಕೊರತೆಯ ಇನ್ನೊಂದು ಲಕ್ಷಣವಾಗಿದೆ.
ವಿಚಿತ್ರ ಆಹಾರ ಪದ್ಧತಿ
ಮಣ್ಣು, ಸುಣ್ಣ, ಕಾಗದ ತರ ತಿನ್ನದೇ ಇರೋ ವಸ್ತುಗಳನ್ನ ತಿನ್ನಬೇಕು ಅಂತ ಅನಿಸೋದು ಕೂಡ ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆಯನ್ನು ಸೂಚಿಸುತ್ತದೆ.. ಕೆಲವರಿಗೆ ಐಸ್ ತಿನ್ನಬೇಕು ಅಂತ ಅನಿಸುತ್ತೆ. ಈ ವಿಚಿತ್ರ ಆಹಾರ ಪದ್ಧತಿಗಳು ದೇಹದಲ್ಲಿ ಪೋಷಕಾಂಶಗಳ ಕೊರತೆ, ಅದ್ರಲ್ಲೂ ಕಬ್ಬಿಣದ ಕೊರತೆ ಇದೆ ಅಂತ ತೋರಿಸುತ್ತೆ.
ಗಮನ ಕೊಡಲು ಕಷ್ಟ
ಕಬ್ಬಿಣಾಂಶ ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಬಹಳ ಮುಖ್ಯ. ಕಬ್ಬಿಣಾಂಶದ ಕೊರತೆ ಇದ್ರೆ, ನೆನಪಿನ ಶಕ್ತಿ ಕಡಿಮೆಯಾಗುವುದು, ಗಮನ ಕೊಡಲು ಕಷ್ಟ, ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದ್ರೆ ಆಗಬಹುದು. ಇದು ಮಕ್ಕಳು ಮತ್ತು ಕೆಲಸ ಮಾಡುವವರ ಮೇಲೆ ಪರಿಣಾಮ ಬೀರುತ್ತೆ.