ಇರಾನ್ ಸರ್ಕಾರದ ಮಹತ್ವದ ಹೆಜ್ಜೆ – ಹಾರ್ಮುಜ್ ಜಲಸಂಧಿ ಪುನಃ ತೆರೆಯುವುದ್ದಕ್ಕೆ ಒಪ್ಪಂದ

ಇರಾನ್ ಸರ್ಕಾರದ ಮಹತ್ವದ ಹೆಜ್ಜೆ – ಹಾರ್ಮುಜ್ ಜಲಸಂಧಿ  ಪುನಃ ತೆರೆಯುವುದ್ದಕ್ಕೆ ಒಪ್ಪಂದ

ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯುವ ಮೂಲಕ ಸಮರಕ್ಕೆ ಪೂರ್ಣವಿರಾಮ ಹಾಕಲು ಇರಾನ್ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಯುದ್ಧದ ಕಾರ್ಮೋಡಗಳ ನಡುವೆ ಶಾಂತಿಯ ಕಿರಣ ಮೂಡಿದೆ.

ಇರಾನ್‌ನ ಈ ಪ್ರಸ್ತಾವನೆಯ ಅತ್ಯಂತ ಪ್ರಮುಖ ಅಂಶವೆಂದರೆ ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದು. ವಿಶ್ವದ ತೈಲ ಪೂರೈಕೆಯ ಬಹುಪಾಲು ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಇರಾನ್‌ನ ಈ ನಿರ್ಧಾರವು ಜಾಗತಿಕ ತೈಲ ಬೆಲೆ ಇಳಿಕೆಗೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಪರಮಾಣು ಮಾತುಕತೆಗಳಿಗಿಂತ ಮೊದಲು ವ್ಯಾಪಾರ ಮಾರ್ಗವನ್ನು ಸುಗಮಗೊಳಿಸಲು ಇರಾನ್ ಬಯಸಿದೆ.ಕೇವಲ ರಸ್ತೆಯನ್ನು ತೆರೆಯುವುದಷ್ಟೇ ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡುವ ಅಥವಾ ದೀರ್ಘಾವಧಿಯ ಕದನ ವಿರಾಮವನ್ನು ಘೋಷಿಸುವ ಪ್ರಸ್ತಾವನೆಯನ್ನೂ ಇರಾನ್ ಮುಂದಿಟ್ಟಿದೆ. ದಿಗ್ಬಂಧನ ತೆರವುಗೊಂಡ ನಂತರವೇ ಪರಮಾಣು ಮಾತುಕತೆಗಳನ್ನು ಆರಂಭಿಸೋಣ ಎಂಬುದು ಇರಾನ್‌ನ ನಿಲುವಾಗಿದೆ.

ಇದನ್ನೂ ಓದಿ: ಕಲ್ಲಂಗಡಿ ತಿನ್ನೋ ಮುನ್ನ ಎಚ್ಚರ ಎಚ್ಚರ! – ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು

ಈ ಯೋಜನೆಯನ್ನು ಯಶಸ್ವಿಗೊಳಿಸಲು ಇರಾನ್ ಈಗಾಗಲೇ ಈಜಿಪ್ಟ್, ಟರ್ಕಿ ಮತ್ತು ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಈ ಕುರಿತು ಮಧ್ಯವರ್ತಿಗಳಿಗೆ ಮಾಹಿತಿ ನೀಡಿದ್ದಾರೆ. ಇರಾನ್‌ನ ಒಳಗೂ ಕೆಲವು ಭಿನ್ನಾಭಿಪ್ರಾಯಗಳಿದ್ದರೂ, ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನಗಳು ತೀವ್ರಗೊಂಡಿವೆ.

ಇರಾನ್‌ನ ಈ ಪ್ರಸ್ತಾವನೆಯು ಈಗಾಗಲೇ ಶ್ವೇತಭವನವನ್ನು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉನ್ನತ ಮಟ್ಟದ ಭದ್ರತಾ ತಂಡದೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಇರಾನ್‌ನ ಮೇಲೆ ಕಠಿಣ ನಿಲುವು ಹೊಂದಿದ್ದರೂ, ಟ್ರಂಪ್ ಅವರು ಮಾತುಕತೆಯ ಬಾಗಿಲನ್ನು ಮುಕ್ತವಾಗಿಟ್ಟಿರುವುದು ಒಪ್ಪಂದದ ಭರವಸೆಯನ್ನು ಹೆಚ್ಚಿಸಿದೆ.

Kishor KV