ಇರಾನ್ ಅಧ್ಯಕ್ಷರ ಸಾವಿನ ಅಸಲಿಯತ್ತೇನು? – ಹೆಲಿಕಾಪ್ಟರ್ ಪತನವೋ.. ಷಡ್ಯಂತ್ರವೋ..?
ಇಸ್ರೇಲ್ Vs ಇರಾನ್.. ಕಾಡುವ ಪ್ರಶ್ನೆಗಳೇನು?

ಇರಾನ್ ಅಧ್ಯಕ್ಷರ ಸಾವಿನ ಅಸಲಿಯತ್ತೇನು? – ಹೆಲಿಕಾಪ್ಟರ್ ಪತನವೋ.. ಷಡ್ಯಂತ್ರವೋ..?ಇಸ್ರೇಲ್ Vs ಇರಾನ್.. ಕಾಡುವ ಪ್ರಶ್ನೆಗಳೇನು?

ರಷ್ಯಾ ಉಕ್ರೇನ್ ಯುದ್ಧ ನಿಂತಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಕನದಕ್ಕೆ ತೆರೆ ಬಿದ್ದಿಲ್ಲ. ಇದೀಗ ಇಸ್ರೇಲ್ & ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವ ಹೊತ್ತಲ್ಲೇ ಘನಘೋರ ದುರಂತವೊಂದು ಸಂಭವಿಸಿದೆ. ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಅಬ್ದೊಲ್ಲಾಹಿಯಾನ್ & ಇರಾನ್‌ನ ಅಧಿಕಾರಿಗಳು ಸಹ ಉಸಿರು ಚೆಲ್ಲಿದ್ದಾರೆ. ಆರಂಭದಲ್ಲಿ ಇಬ್ರಾಹಿಂ ರೈಸಿ ಅವರು ತೆರಳುತ್ತಿದ್ದ ಹೆಲಿಕಾಪ್ಟರ್ ದಟ್ಟವಾದ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿತ್ತು. ಬಳಿಕ ಪರಿಶೀಲನೆ ಬಳಿಕ ಹೆಲಿಕಾಪ್ಟರ್ ದುರಂತದಲ್ಲಿ ಇಬ್ರಾಹಿಂ ರೈಸಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಮಧ್ಯಪ್ರಾಚ್ಯ ಮತ್ತೊಮ್ಮೆ ಬೆಂಕಿಯ ಕೆಂಡವಾಗಿದೆ. ಅಷ್ಟಕ್ಕೂ ಇರಾನ್ ಅಧ್ಯಕ್ಷರ ನಿಧನದಿಂದ ಉಂಟಾಗಿರೋ ಉದ್ವಿಘ್ನ ಸ್ಥಿತಿ ಎಂಥಾದ್ದು..? ಘಟನೆ ಹೇಗಾಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಇರಾನ್‌ ಅಧ್ಯಕ್ಷ ಸಾವು ಪ್ರಕರಣ – ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ಇಸ್ರೇಲ್‌ ಸ್ಪಷ್ಟನೆ

ಇರಾನ್ ಅಧ್ಯಕ್ಷ ಸಾವು!  

ಇರಾನ್ ಹಾಗೂ ಅಜರ್ ಬೈಜಾನ್ ಗಡಿಯಲ್ಲಿ ಭಾನುವಾರ ಅಜರ್​ ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿದ್ದರು. ಈ ಸಮಾರಂಭಕ್ಕೆ ಇರಾನ್ ಅಧ್ಯಕ್ಷ ರೈಸಿ ಹಾಗೂ ವಿದೇಶಾಂಗ ಸಚಿವರು ಹೋಗಿದ್ದರು. ಅಲ್ಲಿಂದ ಇರಾನ್‌ನ ತಬ್ರೀಜ್‌ಗೆ ಆಗಮಿಸುವ ವೇಳೆ ರೈಸಿ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಮತ್ತು ಇತರ ಅಧಿಕಾರಿಗಳಿದ್ದ ಹೆಲಿಕಾಪ್ಟರ್ ಟೇಕಾಫ್ ಆದ ಸುಮಾರು 30 ನಿಮಿಷಗಳ ನಂತರ ರಾಡಾರ್ ಸಂಪರ್ಕ ಕಳೆದುಕೊಂಡಿತು. ಕೂಡಲೇ ಹೆಲಿಕಾಪ್ಟರ್‌ಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ನಡೆಸಲಾಗಿತ್ತು. ಆದರೆ ಕೊನೆಗೆ ಇರಾನ್ ಅಧ್ಯಕ್ಷರು ದುರಂತದಲ್ಲಿ ಸಾವನ್ನಪ್ಪಿರುವುದಾಗಿ ಅಲ್ಲಿನ ಸರ್ಕಾರ ಮಾಧ್ಯಮಗಳೇ ಖಚಿತ ಪಡಿಸಿವೆ. ಪ್ರತಿಕೂಲ ಹವಾಮಾನವು ಘಟನೆಗೆ ಕಾರಣ ಎಂದು ಇರಾನ್‌ ಸರ್ಕಾರ ಹೇಳಿದೆ. ಇರಾನ್‌ನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರು ಸಹ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯೊಂದಿಗೆ ಪ್ರಯಾಣಿಸುತ್ತಿದ್ದರು. ಬೆಂಗಾವಲು ಪಡೆಯಲ್ಲಿ ಮೂರು ಹೆಲಿಕಾಪ್ಟರ್‌ಗಳು ಪಯಣಿಸುತ್ತಿದ್ದವು. ಆ ಪೈಕಿ ಎರಡು ಹಿಂತಿರುಗಿದೆ ಎಂದು ತಿಳಿದು ಬಂದಿದೆ. ಇಸ್ರೇಲ್‌ ಜತೆ ಇರಾನ್‌ ವೈಷಮ್ಯ ತಾರಕಕ್ಕೆ ಏರಿರುವಾಗಲೇ ಈ ಬೆಳವಣಿಗೆ ನಡೆದಿದೆ.

63 ವರ್ಷದ ಇಬ್ರಾಹಿಂ ರೈಸಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ಹೊಂದಿರುವ ನಾಯಕರಾಗಿದ್ದರು. ಇರಾನ್‌ನ 2021 ರ ಅಧ್ಯಕ್ಷೀಯ ಚುನಾವಣೆಯಲ್ಲಿ ರೈಸಿ ಗೆದ್ದಿದ್ದರು. ಸದ್ಯ ಹೆಲಿಕಾಪ್ಟರ್ ದುರಂತದಲ್ಲಿ ಒಟ್ಟಾರೆ 9 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇರಾನ್ ಅಧ್ಯಕ್ಷರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಮತ್ತೊಂದೆಡೆ ಈ ಅಪಘಾತದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ಜಗತ್ತಿನಾದ್ಯಂತ ದುರಂತದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಈ ದುರಂತ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವಂತೆ ಮಾಡಿದೆ. ಇಲ್ಲಿ ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ ನಿಯಂತ್ರಣ ಘಟಕದ ಸಂಪರ್ಕ ಕಡಿದುಕೊಂಡಿದ್ದು, ವೇಗವಾಗಿ ಭೂಮಿಗೆ ಅಪ್ಪಳಿಸಿದೆ ಎಂದು ಹೇಳಲಾಗಿದೆ. ಹಾಗೇ ಈ ದುರಂತಕ್ಕೆ ಹೆಲಿಕಾಪ್ಟರ್‌ನ ತಾಂತ್ರಿಕ ದೋಷ ಕಾರಣ ಎನ್ನಲಾಗಿದೆ. ಮತ್ತೊಂದು ಕಡೆ ಇರಾನ್ ದೇಶದಲ್ಲಿ ಈಗ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಒಟ್ನಲ್ಲಿ ಮಧ್ಯಪ್ರಾಚ್ಯದ ಪರಿಸ್ಥಿತಿ ಈಗ ಮತ್ತಷ್ಟು ಸೂಕ್ಷ್ಮವಾಗಿದ್ದು, ಈ ಘಟನೆ ಇಸ್ರೇಲ್ & ಇರಾನ್ ನಡುವೆ ಮತ್ತೊಮ್ಮೆ ಕಿಚ್ಚು ಹೊತ್ತಿಸುವ ಆತಂಕ ಮೂಡಿಸಿದೆ. ಯಾಕಂದ್ರೆ ಇತ್ತೀಚೆಗೆ ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದೀಗ ಸ್ವತಃ ಇರಾನ್ ಅಧ್ಯಕ್ಷರೇ ಈ ರೀತಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡುವಾಗ ಮೃತಪಟ್ಟಿದ್ದು ಸಂಚಲನ ಸೃಷ್ಟಿಸಿದೆ. ಈ ನಡುವೆ ಇಸ್ರೇಲ್ ವಿರುದ್ಧ ಇರಾನ್ ಮತ್ತೊಮ್ಮೆ ಸೇನಾ ಕಾರ್ಯಾಚರಣೆಗೆ ಮುಂದಾಗುವ ಭಯ ಕೂಡ ಆವರಿಸಿದೆ.

Shwetha M