ಬಲೂಚಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದ ಇರಾನ್! – ದಾಳಿ ಬೆನ್ನಲ್ಲೇ ಬೆದರಿಕೆ ಹಾಕಿದ ಪಾಕ್!

ಭಾರತದ ಬಳಿಕ ಇರಾನ್ ಪಾಪಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಹೊರಟಿದೆ. ಇರಾನ್ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿದ್ದು, ಮಂಗಳವಾರ ಬಲೂಚಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಹೌದು, ಸದಾ ನೆರೆ ರಾಷ್ಟ್ರಗಳ ಮೇಲೆ ಕೆಂಡಕಾರುತ್ತಿರುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಇರಾನ್ ಮುಂದಾಗಿದೆ. ಇರಾನ್ ಬಲೂಚಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿ ಮತ್ತು ಹಲವಾರು ಭಯೋತ್ಪಾದಕ ಗುಂಪುಗಳ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಿಂದಾಗಿ ಪಾಕಿಸ್ತಾನ ಬೆಚ್ಚಿಬಿದ್ದಿದೆ. ದಾಳಿ ಬೆನ್ನಲ್ಲೇ ಪಾಕಿಸ್ತಾನ, ಇರಾನ್ಗೆ ಬೆದರಿಕೆ ಹಾಕಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ, ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ವಾರ್ನಿಂಗ್ ಕೊಟ್ಟಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆದ್ದರೇ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ – ಯತೀಂದ್ರ ಹೊಸ ಬಾಂಬ್!
ಇರಾನ್ ದಾಳಿ ನಡೆಸಿರುವ ಬಗ್ಗೆ ಪಾಕಿಸ್ತಾನವೇ ದೃಢಪಡಿಸಿದೆ. ಇರಾನ್ನ ವೈಮಾನಿಕ ದಾಳಿಯಲ್ಲಿ ಇಬ್ಬರು ಮುಗ್ಧ ಮಕ್ಕಳು ಸಾವನ್ನಪ್ಪಿದ್ದರೆ, ಮೂವರು ಹುಡುಗಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಈ ಘಟನೆಯನ್ನು ಪಾಕಿಸ್ತಾನ ಖಂಡಿಸಿದೆ.
ಭಯೋತ್ಪಾದಕ ಸಂಘಟನೆ ಜೈಶ್ ಅಲ್-ಅದಲ್ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಇರಾನ್ ಹೇಳಿದೆ. ಇರಾನ್ನ ರೆವಲ್ಯೂಷನರಿ ಗಾರ್ಡ್ಗಳು ಇರಾಕ್ ಮತ್ತು ಸಿರಿಯಾದಲ್ಲಿ ಕ್ಷಿಪಣಿ ದಾಳಿ ನಡೆಸಿದ ಒಂದು ದಿನದ ನಂತರ ಇಲ್ಲಿ ದಾಳಿ ನಡೆಸಿದೆ.
ಈ ಭಯೋತ್ಪಾದಕ ಗುಂಪು ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ಇರಾನ್ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ದಾಳಿಯನ್ನು ಬಲವಾಗಿ ಖಂಡಿಸಿದೆ. ಇದು ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಯಾಗಿದ್ದು, ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಪಾಕ್ ಎಚ್ಚರಿಸಿದೆ.