ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ಮಾಡಿದ್ದು ಇರಾನ್! – ಸ್ಫೋಟಕ ಹೇಳಿಕೆ ನೀಡಿದ ಅಮೆರಿಕ!
ಸೌದಿ ಅರೇಬಿಯಾದಿಂದ ನವ ಮಂಗಳೂರು ಬಂದರಿಗೆ ಕಚ್ಚಾ ತೈಲ ಹೊತ್ತು ತರುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಅರಬ್ಬಿ ಸಮುದ್ರದ ಗುಜರಾತ್ ತೀರದಲ್ಲಿ ಶನಿವಾರ ಡ್ರೋನ್ ದಾಳಿ ನಡೆದಿತ್ತು. ಇದೀಗ ಈ ಡ್ರೋನ್ ದಾಳಿ ಕುರಿತು ಅಮೆರಿಕ ವಿದೇಶಾಂಗ ಇಲಾಖೆ ಸ್ಪೋಟಕ ಹೇಳಿಕೆಯೊಂದನ್ನು ನೀಡಿದೆ. ಈ ಡ್ರೋನ್ ದಾಳಿಯ ಹಿಂದೆ ಇರಾನ್ ಕೈವಾಡವಿತ್ತು ಎಂದು ಹೇಳಿದೆ.
ಇದನ್ನೂ ಓದಿ:ಮಧ್ಯಗಾಜಾದಲ್ಲಿ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ – 68 ಪ್ಯಾಲೆಸ್ಟೀನಿಯನ್ನರು ಸಾವು!
ಹೌದು, ಕಚ್ಚಾ ತೈಲ ಹೊತ್ತು ತರುತ್ತಿದ್ದ ವಾಣಿಜ್ಯ ಹಡಗೊಂದು ಶನಿವಾರ ಸೌದಿ ಅರೇಬಿಯಾದಿಂದ ನವ ಮಂಗಳೂರಿಗೆ ಬರುತ್ತಿತ್ತು. ಗುಜರಾತ್‌ನಿಂದ 200 ಕಿ.ಮೀ. ದೂರದ ಅಂತಾರಾಷ್ಟ್ರೀಯ ಸಮುದ್ರದ ವಲಯದಲ್ಲಿ ಲೈಬೀರಿಯಾದ ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ನಿಗೂಢ ದಾಳಿ ನಡೆದಿತ್ತು. ಈ ಹಡಗು ಸೌದಿಯಿಂದ ನವ ಬಂಗಳೂರು ಬಂದರಿಗೆ ತೈಲ ಹೊತ್ತು ತರುತ್ತಿತ್ತು. ಈ ವೇಳೆ ಹಡಗಿಗೆ ಬೆಂಕಿ ಹೊತ್ತಿಕೊಂಡರೂ ಅದನ್ನು ಕೆಲವೇ ಕ್ಷಣಗಳಲ್ಲಿ ಶಮನ ಮಾಡಲಾಗಿತ್ತು. ದಾಳಿ ಮಾಡಿದ್ಯಾರು ಎಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ಭಾನುವಾರ ಅಮೆರಿಕ ವಿದೇಶಾಂಗ ವಕ್ತಾರರು ಹೇಳಿಕೆ ನೀಡಿದ್ದಾರೆ. ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ಡ್ರೋನ್ ಹಾರಿ ಬಂದಿದ್ದು ಇರಾನ್‌ನಿಂದ’ ಎಂದು ಹೇಳಿದ್ದಾರೆ.
ತನಿಖೆ ಶುರು, ಮುಂಬೈನತ್ತ ಹಡಗು!
ಈ ನಡುವೆ ಭಾರತೀಯ ನೌಕಾಪಡೆ ಅಧಿಕಾರಿಗಳು ಹೇಳಿಕೆ ನೀಡಿದ್ದು, ‘ದಾಳಿ ಬಗ್ಗೆ ತನಿಖೆ ನಡೆದಿದೆ. ಐಎನ್‌ಎಸ್ ಮರ್ಮುಗೋವಾ ಯುದ್ಧನೌಕೆಯನ್ನು ಸ್ಥಳಕ್ಕೆ ಕಳಿಸಿ ತನಿಖೆ ಕೈಗೊಳ್ಳಲಾಗಿದೆ. ದಾಳಿಗೊಳಗಾದ ಹಡಗನ್ನು ರಿಪೇರಿ ಮಾಡಲಾಗಿದ್ದು, ಈಗ ಸಂಚಾರ ಪುನಾರಂಭಿಸಿದೆ. ಐಎನ್‌ಎಸ್ ವಿಕ್ರಂ ಹಡಗನ್ನು ಕಣ್ಗಾವಲಿಗೆ ನಿಯೋಜಿಸಲಾಗಿದ್ದು, ಪ್ಲುಟೋ ಹಡಗು ಮುಂಬೈನತ್ತ ಧಾವಿಸುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.