ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?

2008ರಲ್ಲಿ ಶುರುವಾದ ಐಪಿಎಲ್ ಟೂರ್ನಿ 2024ರ ವರೆಗೆ 17 ಆವೃತ್ತಿಗಳನ್ನ ಕಂಡಿದೆ. ಪ್ರಸ್ತುತ 10 ಟೀಮ್ಗಳ ನಡುವೆ ಪೈಪೋಟಿ ನಡೀತಾ ಇದ್ದು, ಈವರೆಗೆ ಟ್ರೋಫಿ ಗೆದ್ದಿರೋದು 6 ಟೀಮ್ಗಳು ಮಾತ್ರ. ಉಳಿದ 4 ತಂಡಗಳು ತಮ್ಮ ಚೊಚ್ಚಲ ಚಾಂಪಿಯನ್ಶಿಪ್ನ ನಿರೀಕ್ಷೆಯಲ್ಲಿದೆ. ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ. ಸದ್ಯಕ್ಕೆ 10 ಟೀಮ್ಗಳು ಮಾತ್ರ ರೇಸ್ನಲ್ಲಿವೆ.
ಚೊಚ್ಚಲ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ಚಾಂಪಿಯನ್!
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹೊಸ ಷರಾ ಬರೆದಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಆಗ ಶೇನ್ ವಾರ್ನ್ ತಂಡದ ನಾಯಕತ್ವ ವಹಿಸಿದ್ದರು.
2009ರಲ್ಲಿ ಡೆಕ್ಕನ್ ಚಾರ್ಜಸ್ ಗೆ ಐಪಿಎಲ್ ಕಿರೀಟ
ಇನ್ನು 2009ರ ವೇಳೆಗೆ ಐಪಿಎಲ್ ಕ್ರೇಜ್ ಹೆಚ್ಚಾಗ ತೊಡಗಿತ್ತು. ಫೈನಲ್ ಪಂದ್ಯವಂತೂ ಅತ್ಯಂತ ರಣ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್ ಚಾರ್ಜರ್ಸ್ ಪ್ರಶಸ್ತಿಗೆ ಮುತ್ತಿಕ್ಕಿತ್ತು.
5 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್!
ಇನ್ನು ಐಪಿಎಲ್ ಯಶಸ್ವೀ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 5 ಟ್ರೋಫಿಗಳನ್ನ ಗೆದ್ದುಕೊಂಡಿದೆ. ಇದರ ಕಂಪ್ಲೀಟ್ ಕ್ರೆಡಿಟ್ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮುಂಬೈಗೆ 5 ಬಾರಿ ಕಿರೀಟ ತೊಡಿಸಿದ ರೋಹಿತ್ ಶರ್ಮಾ!
ಪ್ರಸ್ತುತ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ಗೆ ಐದೈದು ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಚೆನ್ನೈನಂತೆಯೇ ಮುಂಬೈ ಇಂಡಿಯನ್ಸ್ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿದ್ದಾರೆ.
ಹಾಲಿ ಚಾಂಪಿಯನ್ ಕೆಕೆಆರ್ ಗೆ 3 ಬಾರಿ ಕಪ್!
ಮುಂಬೈ, ಚೆನ್ನೈ ಹೊರತುಪಡಿಸಿದ್ರೆ 3 ಸಲ ಕಪ್ ಗೆದ್ದಿರೋ ತಂಡ ಕೆಕೆಆರ್. ಹಾಲಿ ಚಾಂಪಿಯನ್ ಆಗಿರುವ ಕೊಲ್ಕತ್ತಾ ತಂಡ 2012 ಮತ್ತು 2014 ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. 2024 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ. ಆದ್ರೆ ಈ ವರ್ಷ ಕೆಕೆಆರ್ ಗೆ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿಕೊಂಡಿದ್ದಾರೆ.
ಹೈದ್ರಾಬಾದ್ ಮತ್ತು ಗುಜರಾತ್ ಒಂದೊಂದು ಸಲ ವಿನ್ನರ್ಸ್!
ಇನ್ನು 2016ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿದ್ದರು. ಹಾಗೇ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.
ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿ ನಾಲ್ಕು ತಂಡಗಳು!
ಪ್ರಸ್ತುತ ಇರುವ 10 ತಂಡಗಳ ಪೈಕಿ ನಾಲ್ಕು ಟೀಮ್ಗಳು ಚೊಚ್ಚಲ ಟ್ರೋಫಿ ನಿರೀಕ್ಷೆಯಲ್ಲಿವೆ. ಈವರೆಗೆ ಮೂರು ಬಾರಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಜೊತೆಗೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ.