16ಕ್ಕೆ ಸ್ಟಾರ್ಟ್.. 30ಕ್ಕೆ IPL ಫೈನಲ್? – RCB Vs LSG ನಡುವೆ ಫಸ್ಟ್ ಫೈಟ್

ಭಾರತ ಮತ್ತು ಪಾಕ್ ನಡುವಿನ ಸಂಘರ್ಷದಿಂದಾಗಿ ಮೇ 8ರಂದು ನಡೆಯುತ್ತಿದ್ದ ಪಂಜಾಬ್ ಮತ್ತು ಡೆಲ್ಲಿ ನಡುವಿನ ಐಪಿಎಲ್ನ 57ನೇ ಪಂದ್ಯವನ್ನ ಅರ್ಧಕ್ಕೇ ನಿಲ್ಲಿಸಿದ್ರು. ಆ ನಂತ್ರ ಮೇ 9ರಿಂದ ನಡೆಯಬೇಕಿದ್ದ ಮ್ಯಾಚ್ಗಳನ್ನ ಒನ್ ವೀಕ್ ಪೋಸ್ಟ್ಪೋನ್ ಮಾಡಿದ್ರು. ಇದೀಗ ಭಾರತ ಮತ್ತು ಪಾಕ್ ನಡುವೆ ಕದನ ವಿರಾಮದ ಬಗ್ಗೆ ಸಭೆ ನಡೆಯುತ್ತಿರೋ ಹೊತ್ತಲ್ಲೇ ಐಪಿಎಲ್ ರೀ ಸ್ಟಾರ್ಟ್ ಸಿದ್ಧತೆಗಳು ನಡೀತಿವೆ. ಹಾಗೇ ಉಳಿದಿರೋ ಪಂದ್ಯಗಳನ್ನ ಯಾವಾಗ ಆಡಿಸ್ಬೇಕು, ಎಲ್ಲೆಲ್ಲಿ ನಡೆಸ್ಬೇಕು ಅನ್ನೋ ಬಗ್ಗೆ ಒಂದಷ್ಟು ಚರ್ಚೆಗಳು ನಡೆದಿವೆ.
ಇದನ್ನೂ ಓದಿ : 7 ವರ್ಷ ಡೇಟಿಂಗ್, ಲಂಡನ್ ನಲ್ಲಿ ಪ್ರಪೋಸ್! – ಆಶಿತಾ ಸೂದ್‌ಗೆ RCB ಪ್ಲೇಯರ್ ಮಯಾಂಕ್ ಬೌಲ್ಡ್!
ಸದ್ಯ ಬಿಸಿಸಿಯ ಮೂಲಗಳಿಂದ ಹೊರಬಿದ್ದಿರೋ ಮಾಹಿತಿ ಪ್ರಕಾರ ಮೇ 16 ರಿಂದ ಅಂದ್ರೆ ಇದೇ ಶುಕ್ರವಾರದಿಂದ ಟೂರ್ನಿಯನ್ನ ಮರು ಆರಂಭ ಮಾಡುವ ಸಾಧ್ಯತೆಗಳಿವೆ. ಅಲ್ದೇ ಉಳಿದ ಪಂದ್ಯಗಳನ್ನ ನಾಲ್ಕು ಮೈದಾನಗಳಲ್ಲಿ ಮಾತ್ರ ನಡೆಸುವಂಥ ಸಾಧ್ಯತೆ ಹೆಚ್ಚಾಗಿದೆ. ಯಾಕಂದ್ರೆ ಯುದ್ಧಭೀತಿಯ ಗಡಿ ಭಾಗದ ಹೊರತಾಗಿ ದಕ್ಷಿಣ ಭಾರತದಲ್ಲೇ ಟೂರ್ನಿಯ ಉಳಿದ ಪಂದ್ಯಗಳನ್ನ ಆಡಿಸೋಕೆ ಬಿಸಿಸಿಐ ಆಲೋಚನೆ ಮಾಡ್ತಿದೆ. ಹಾಗೇ ಈ ಹಿಂದೆ 2025ರ ಫೈನಲ್ ಪಂದ್ಯವನ್ನ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಸೋದಾಗಿ ತೀರ್ಮಾನ ಮಾಡ್ಲಾಗಿತ್ತು. ಬಟ್ ಈಗ ಫೈನಲ್ ಪಂದ್ಯವನ್ನ ಮೇ 25ರ ಬದಲು ಮೇ 30 ರಂದು ಆಯೋಜನೆ ಮಾಡೋ ಸಾಧ್ಯತೆ ಇದೆ. ಹಾಗೇ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಮ್ಯಾಚ್ ಆಡಿಸೋ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನು ಲೀಗ್ ಹಾಗೇ ಪ್ಲೇಆಫ್ ಮ್ಯಾಚಸ್ನ ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ನಡೆಸಬೇಕು. ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಹೋಂ ಗ್ರೌಂಡ್ನಲ್ಲಿ ಮ್ಯಾಚ್ ಗಳು ಇರೋದಿಲ್ಲ ಎಂದು ಮಾಹಿತಿ ನೀಡ್ಲಾಗಿದೆ. ಆದಷ್ಟು ಬೇಗ ಟೂರ್ನಿಯನ್ನ ಕಂಪ್ಲೀಟ್ ಮಾಡೋ ಉದ್ದೇಶದಿಂದ ಡಬಲ್ ಹೆಡರ್ ಪಂದ್ಯಗಳನ್ನ ಹೆಚ್ಚೆಚ್ಚು ಆಡಿಸೋಕೆ ಮುಂದಾಗಿದ್ದಾರೆ. ಅಂದ್ರೆ ಒಂದೇ ದಿನದಲ್ಲಿ ಎರಡೆರಡು ಪಂದ್ಯಗಳನ್ನ ಆಯೋಜಿಸಲು ಮುಂದಾಗಿದ್ದಾರೆ. ಹಾಗೇ ಎಲ್ಲಾ ಫ್ರಾಂಚೈಸಿಗಳಿಗೂ ಪ್ರಾಕ್ಟೀಸ್ ಆರಂಭ ಮಾಡಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದೆ. ಹೀಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ವೇಳಾಪಟ್ಟಿ ಮೂಲಕ ಮೇ 30 ರವರೆಗೆ ಟೂರ್ನಿಯನ್ನ ವಿಸ್ತರಿಸೋ ಪ್ಲ್ಯಾನ್ನಲ್ಲಿದೆ. ಇವತ್ತು ರಾತ್ರಿ ಅಥವಾ ಮಂಗಳವಾರ ಹೊಸ ಶೆಡ್ಯೂಲ್ ರಿಲೀಸ್ ಆಗಲಿದೆ.
ಯೆಸ್. ಐಪಿಎಲ್ ರೀ ಸ್ಟಾರ್ಟ್ ಆದ್ರೆ ಫಸ್ಟ್ ಮ್ಯಾಚ್ ನಲ್ಲೇ ಆರ್ಸಿಬಿ ಮತ್ತು ಲಕ್ನೋ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ನ 59ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಬೇಕಿತ್ತು. ಆದ್ರೆ ಅದೇ ದಿನವೇ ಐಪಿಎಲ್ನ 1 ವಾರ ಪೋಸ್ಟ್ಪೋನ್ ಮಾಡಲಾಗಿತ್ತು. ಹೀಗಾಗಿ ಈ ಪಂದ್ಯದ ಮೂಲಕವೇ ಟೂರ್ನಿಯನ್ನು ಮತ್ತೆ ಶುರು ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಆದ್ರೆ ಈ ಪಂದ್ಯವನ್ನು ಎಲ್ಲಿ ಆಯೋಜನೆ ಮಾಡಲಾಗುತ್ತೆ ಅನ್ನೋದು ಮಾತ್ರ ಕನ್ಫರ್ಮ್ ಆಗಿಲ್ಲ. ಈ ಹಿಂದಿನ ಶೆಡ್ಯೂಲ್ ಪ್ರಕಾರ, ಆರ್ಸಿಬಿ ಮತ್ತು ಎಲ್ಎಸ್ಜಿ ತಂಡಗಳ ನಡುವಿನ ಪಂದ್ಯ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಇದೀಗ ವೇಳಾಪಟ್ಟಿಯನ್ನು ಮರುನಿಗದಿ ಮಾಡುತ್ತಿರುವುದರಿಂದ ಉಭಯ ತಂಡಗಳು ತಟಸ್ಥ ಮೈದಾನದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೈದರಾಬಾದ್, ಚೆನ್ನೈ ಅಥವಾ ಬೆಂಗಳೂರಿನಲ್ಲಿ ಈ ಪಂದ್ಯವನ್ನ ಆಯೋಜಿಸಬಹುದು. ಬಟ್ ಇಲ್ಲಿ ಇನ್ನೊಂದು ಅನುಮಾನ ಕೂಡ ಎಲ್ರನ್ನೂ ಕಾಡ್ತಾ ಇದೆ. ಅದೇನಂದ್ರೆ ಪಂಜಾಬ್ ಮತ್ತು ಡೆಲ್ಲಿ ಮ್ಯಾಚ್ ಕಥೆ ಏನು ಅನ್ನೋದು.
ಮೇ 8ರಂದು ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ವರ್ಸಸ್ ಡೆಲ್ಲಿ ಪಂದ್ಯವನ್ನು ಪಾಕಿಸ್ತಾನದ ದಾಳಿಯಿಂದಾಗಿ ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಹಾಗಂತ ಉಭಯ ತಂಡಗಳಿಗೆ ಒಂದೊಂದು ಅಂಕವನ್ನೂ ನೀಡಲಾಗಿಲ್ಲ. ಪ್ರಸ್ತುತ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ 11 ಪಂದ್ಯಗಳನ್ನು ಆಡಲಾಗಿದೆ ಎಂದು ಮಾತ್ರ ತೋರಿಸ್ತಾ ಇದೆ. ಅಂದರೆ ಉಭಯ ತಂಡಗಳ ಕೊನೆಯ ಪಂದ್ಯವನ್ನು ಇಲ್ಲಿ ಕೌಂಟ್ ಮಾಡಿಲ್ಲ. ಅಂಕಗಳನ್ನೂ ನೀಡಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಹಾಗೇನಾದ್ರೂ ಪಂದ್ಯ ಮತ್ತೆ ನಡೆದ್ರೆ ತಟಸ್ಥ ಸ್ಥಳದಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣದಿಂದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮರು ಪಂದ್ಯವಾಡಲು ಒಪ್ಪಲಿದೆಯಾ ಅಥವಾ ರದ್ದತಿಯೊಂದಿಗೆ ತಲಾ ಒಂದು ಅಂಕಗಳನ್ನು ಹಂಚಿಕೊಳ್ಳಲಿದೆಯಾ ಎಂಬ ಪ್ರಶ್ನೆಯೂ ಮೂಡಿದೆ. ಪ್ಲೇಆಫ್ ಮೇಲೆ ಕಣ್ಣಿಟ್ಟಿರುವ ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಕಣಕ್ಕಿಳಿದು 2 ಅಂಕಗಳನ್ನು ಪಡೆಯಲು ರೆಡಿಯಾದ್ರೆ ಮ್ಯಾಚ್ ಮತ್ತೆ ನಡೆಯಲಿದೆ. ಇಲ್ದೇ ಇದ್ರೆ ಇಬ್ಬರಿಗೂ ಒಂದೊಂದು ಅಂಕ ನೀಡಬಹುದು. ಇದನ್ನ ಆಯಾ ಫ್ರಾಂಚೈಸಿಗಳ ಮಾಲೀಕರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತೆ. ಅಕಸ್ಮಾತ್ ಇದಕ್ಕೆ ಒಪ್ಪದೆ ಮತ್ತೆ ಮ್ಯಾಚ್ ಆಡ್ತೀವಿ ಅಂದ್ರೆ ಒಟ್ಟು 17 ಪಂದ್ಯಗಳನ್ನ ಆಡಿಸಬೇಕಾಗುತ್ತೆ. ಅದರಂತೆ 13 ಲೀಗ್ ಪಂದ್ಯಗಳನ್ನು ಹಾಗೂ 4 ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇದಕ್ಕಾಗಿ ಮತ್ತೆ ವೇಳಾಪಟ್ಟಿ ಸಿದ್ದ ಮಾಡಲಾಗುತ್ತೆ.