IPLನಲ್ಲಿ ಅರ್ಧಕ್ಕೆ ಕೈ ಕೊಟ್ರೆ ಹುಷಾರ್ – ವಿದೇಶಿಗರಿಗೆ ಪಾಠ ಕಲಿಸುತ್ತಾ BCCI?
ಫ್ರಾಂಚೈಸಿಗಳಿಗೆ ಕಾಡ್ತಿರೋ ಟೆನ್ಷನ್ ಏನು?
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ರೀಟೈನ್ ಆಟಗಾರರ ಸಂಖ್ಯೆ ಇನ್ನೇನು ಫೈನಲ್ ಆಗಲಿದೆ. ಇಷ್ಟು ದಿನ ಎಷ್ಟು ಆಟಗಾರರು, ಯಾರು ಇನ್, ಯಾರೆಲ್ಲಾ ಔಟ್ ಆಗ್ತಾರೆ ಎಂಬ ಬಗ್ಗೆ ಕೇವಲ ಚರ್ಚೆ ಮಾತ್ರ ನಡೀತಾ ಇತ್ತು. ಇನ್ನೇನು ಕೆಲವೇ ಹೊತ್ತಲ್ಲಿ ಐಪಿಎಲ್ ತಂಡಗಳು ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ. ಬಿಸಿಸಿಐ ಅಧಿಕಾರಿಗಳು ಐಪಿಎಲ್ ತಂಡಗಳ ಮಾಲೀಕರ ಜೊತೆ ಸಭೆ ನಡೆಸಿ, ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ. ಇದ್ರ ಮಧ್ಯೆ ಐಪಿಎಲ್ ಪ್ರಾಂಚೈಸಿಗಳ ನಿರ್ಧಾರವನ್ನು ಬಿಸಿಸಿಐ ತಳ್ಳಿ ಹಾಕಿದೆ ಅನ್ನೋ ವಿಚಾರವೂ ಹೊರಬಿದ್ದಿದೆ. 8 ಆಟಗಾರರನ್ನು ರಿಟೈನ್ ಮಾಡಿಕೊಳ್ಳೋ ಐಪಿಎಲ್ ಪ್ರಾಂಚೈಸಿಗಳ ಬೇಡಿಕೆಗೆ ಬಿಸಿಸಿಐ ಬಿಲ್‌ಕುಲ್ ಒಪ್ತಿಲ್ಲ.
ಇದನ್ನೂ ಓದಿ: ರೋಹಿತ್ & ರಾಹುಲ್ ಟ್ರೇಡ್ ಆಗಲ್ವಾ? – IPLನಲ್ಲಿ ಪಂತ್ & ಸ್ಕೈಗೆ ಸವಾಲೇನು?
ರೀಟೈನ್ ಟೆನ್ಷನ್
ಮೆಗಾ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು? ಅನ್ನೋದರ ಬಗ್ಗೆ ಐಪಿಎಲ್ ತಂಡಗಳು ತಮ್ಮ ಅಭಿಪ್ರಾಯ ಮುಂದಿಟ್ಟಿವೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಒಂದು ತಂಡಕ್ಕೆ 5-6 ಮಂದಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿಲುವು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯೋ ಸಭೆಯಲ್ಲಿ ಕೈಗೊಳ್ಳಲಾಗುವುದು. ಐಪಿಎಲ್ ಮೆಗಾ ಹರಾಜಿನ ಮೊದಲು 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಹೆಚ್ಚಿನ ಐಪಿಎಲ್ ತಂಡಗಳ ಮಾಲೀಕರು ಬಿಸಿಸಿಐಗೆ ಪ್ರಸ್ತಾಪಿಸಿದ್ದರು. ಆದರೆ, ಐಪಿಎಲ್ ತಂಡಗಳ ಪ್ರಸ್ತಾಪಕ್ಕೆ ಬಿಸಿಸಿಐ ಡೋಂಟ್ ಕೇರ್ ಅಂತಿದೆ. ಜೊತೆಗೆ ತನ್ನ ನಿಲುವಿಗೆ ಅಂಟಿಕೊಂಡಿದೆ. ಯಾವುದೇ ಕಾರಣಕ್ಕೂ ಒಳ್ಳೆಯ ಆಟಗಾರರು ಅವಕಾಶ ಕಳೆದುಕೊಳ್ಳಬಾರದು. ಹಾಗಾಗಿ ಕೇವಲ 5-6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅನುಮತಿ ನೀಡಲು ಬಿಸಿಸಿಐ ಮುಂದಾಗಿದೆ. ಬಿಸಿಸಿಐ ತನ್ನ ಗಟ್ಟಿ ನಿಲುವಿನ ಮೂಲಕ ಎಲ್ಲಾ ತಂಡಗಳಿಗೂ ಶಾಕ್ ಕೊಟ್ಟಿದೆ. ಸೀಸನ್ ಕೊನೆ ಕ್ಷಣದಲ್ಲಿ ತಂಡ ಬಿಟ್ಟು ಹೋಗುವ ವಿದೇಶಿ ಆಟಗಾರರಿಗೆ ಸೂಚನೆ ನೀಡಿ ಎಂದು ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಬಿಸಿಸಿಐ ವಿದೇಶಿ ಆಟಗಾರರಿಗೆ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲಿದೆ. ಮತ್ತೊಂದೆಡೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಕೂಡಾ ಕೆಲವೊಂದು ವಿಚಾರಗಳನ್ನ ಬಿಸಿಸಿಐ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಈ ಬಾರಿ ವಿದೇಶಿ, ಭಾರತೀಯ ಹಾಗೂ ಅನ್ಕ್ಯಾಪ್ಡ್ ಎಂಬಂತೆ ಆಟಗಾರರ ಪ್ರಯಾಣವನ್ನು ನಿಗದಿ ಮಾಡುವುದನ್ನು ಕೈ ಬಿಡಬೇಕೆಂದು ಎಸ್ಆರ್ಹೆಚ್ ಫ್ರಾಂಚೈಸಿ ಆಗ್ರಹಿಸಿದೆ. ಇನ್ನು ರಿಟೈನ್ಗೂ ಮುನ್ನ ಆಟಗಾರರೊಂದಿಗೆ ಫ್ರಾಂಚೈಸಿಗಳು ಚರ್ಚಿಸಲು ಮುಕ್ತ ಅವಕಾಶ ನೀಡಬೇಕೆಂದು ಸನ್ರೈಸರ್ಸ್ ಹೈದರಾಬಾದ್ ಮಾಲೀಕರು ಒತ್ತಾಯಿಸಿದ್ದಾರೆ.
ಒಟ್ಟಾರೆ ಹರಾಜು ಪ್ರಕ್ರಿಯೆಯಲ್ಲಿ ಆಟಗಾರರ ಜೊತೆ ಚರ್ಚೆಗೆ ಅವಕಾಶ ಸಿಕ್ಕಿದ್ರೆ ಕೆಲ ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದರೂ ಅವರನ್ನು ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹೀಗಾಗಿಯೇ ಎಸ್ಆರ್ಹೆಚ್ ಫ್ರಾಂಚೈಸಿಯು ಈ ವಿಶೇಷ ಬೇಡಿಕೆಯನ್ನು ಬಿಸಿಸಿಐ ಮುಂದಿಟ್ಟಿದೆ.