ಕೋಟಿ ವೀರರ IPL ಫ್ಲಾಪ್ ಶೋ – RCB ಪಾಲಿಗೂ ಇವರೇ VILLAINS
ಇಷ್ಟೊಂದು ಹಣ ಕೊಟ್ಟಿದ್ದು ದಂಡಕ್ಕಾ?

ಕೋಟಿ ವೀರರ IPL ಫ್ಲಾಪ್ ಶೋ – RCB ಪಾಲಿಗೂ ಇವರೇ VILLAINSಇಷ್ಟೊಂದು ಹಣ ಕೊಟ್ಟಿದ್ದು ದಂಡಕ್ಕಾ?

ಕಳೆದೆರಡು ತಿಂಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದ ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸೀಸನ್ 17 ಚಾಂಪಿಯನ್ ಯಾರಾಗ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ. ಇನ್ನು ಈ ಬಾರಿಯ ಆವೃತ್ತಿ ಹತ್ತಾರು ವಿಶೇಷತೆಗಳು, ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಹೈಯೆಸ್ಕ್ ಸ್ಕೋರ್, ಹೈಯೆಸ್ಟ್ ಸಿಕ್ಸ್ ಹೀಗೆ ಹಲವು ಸ್ಪೆಷಾಲಿಟಿಗಳೇ ತುಂಬಿದೆ. ಯಂಗ್ ಪ್ಲೇಯರ್ಸ್ ಅಂತೂ ಮೈದಾನದಲ್ಲಿ ಕಿಚ್ಚು ಹಚ್ಚಿದ್ದಾರೆ. ಆದ್ರೆ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದ್ದ, ಕೋಟಿ ಕೋಟಿ ಸಂಭಾವನೆ ಪಡೆದು ಟೀಂ ಸೇರಿದ್ದ ಸ್ಟಾರ್ ಆಟಗಾರರೇ ಕೈ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಸೀನಸ್​ನಲ್ಲಿ ತುಂಬಾ ಎಕ್ಸ್​ಪೆಕ್ಟೇಷನ್ ಇಟ್ಟುಕೊಂಡಿದ್ದ ಯಾವೆಲ್ಲಾ ಆಟಗಾರರು ಕಳಪೆ ಪ್ರದರ್ಶನ ನೀಡಿದ್ರು? ಅವ್ರ ಸಂಭಾವನೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಜಸ್ಥಾನಕ್ಕೆ ಹೀನಾಯ ಸೋಲು – 36 ರನ್‌ಗಳ ಜಯ, ಫೈನಲಿಗೆ ಹೈದರಾಬಾದ್‌

ಕ್ರಿಕೆಟ್ ಅಂದ್ರೆ ಜೆಂಟಲ್ ಮೆನ್ ಗೇಮ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರನೇ. ಲಾಸ್ಟ್​ ಬಾಲ್​ವರೆಗೂ ಯಾರು ಗೆಲ್ತಾರೆ, ಸೋಲ್ತಾರೆ ಅನ್ನೋದನ್ನ ಡಿಸೈಡ್ ಮಾಡೋಕೆ ಆಗಲ್ಲ. ಐಪಿಎಲ್​ ಅಂತೂ ವಿಶ್ವದ ಅತ್ಯಂತ ಶ್ರೀಮಂತ ಲೀಗ್. ಇಲ್ಲೇನಿದ್ರೂ ಕೋಟಿಗಳ ಲೆಕ್ಕದಲ್ಲೇ ಬ್ಯುಸಿನೆಸ್. ಹೀಗಾಗಿ ಓಡೋ ಕುದುರೆಗೆ ಬಂಗಾರದ ಬೆಲೆ  ಅಂತಾರಲ್ಲ ಹಾಗೇ ಮೈದಾನದಲ್ಲಿ ಪರಾಕ್ರಮ ತೋರುವ ಆಟಗಾರನಿಗೆ ಚಿನ್ನಕ್ಕಿಂತ್ಲೂ ಜಾಸ್ತಿನೇ ಬೆಲೆ ಇದೆ. ಹೀಗಾಗಿ 2024ರ ಐಪಿಎಲ್ ಹರಾಜಿಗೂ ಮುನ್ನ ಒಂದಷ್ಟು ಸ್ಟಾರ್ ಆಟಗಾರರನ್ನ ಆಯಾ ಫ್ರಾಂಚೈಸಿಗಳು ಹೆಚ್ಚೆಚ್ಚು ಹಣ ಕೊಟ್ಟು ತಮ್ಮ ತಂಡದಲ್ಲೇ ಉಳಿಸಿಕೊಂಡಿದ್ರು. ಮತ್ತೊಂದಷ್ಟು ಪ್ಲೇಯರ್ಸ್​ನ ಕೋಟಿಗಳ ಲೆಕ್ಕದಲ್ಲಿ ಹಣ ಸುರಿದು ತಮ್ಮ ಟೀಮ್​ಗೆ ಸೇರಿಸಿಕೊಂಡಿದ್ರು. ಆದ್ರೆ ಈ ಸೀಸನ್​ನಲ್ಲಿ ಕೆಲ ಪ್ರತಿಭಾವಂತ ಕ್ರಿಕೆಟಿಗರೇ ಮುಗ್ಗರಿಸಿದ್ದಾರೆ. ತಂಡಕ್ಕಾಗಿ ಅಲ್ಲದಿದ್ರೂ ವೈಯಕ್ತಿಕವಾಗಿಯೂ ಅಟ್ಟರ್ ಫ್ಲಾಪ್ ಆಗಿದ್ದಾರೆ. ತಾವು ಸೋಲೋದ್ರ ಜೊತೆಗೆ ತಂಡವನ್ನೂ ಸೋಲಿಸಿದ್ದಾರೆ. ಹೀಗಾಗಿ ನೆಕ್ಸ್​ಟ್ ಸೀಸನ್​ಗೆ ಇಂಥಾ ಕೆಲ ಆಟಗಾರರಿಗೆ ಗುಡ್ ಬೈ ಹೇಳಲು ಪ್ರಾಂಚೈಸಿಗಳು ತೀರ್ಮಾನ ಮಾಡಿವೆ. ಈ ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

ಗ್ಲೆನ್ ಮ್ಯಾಕ್ಸ್‌ವೆಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ ಸೀಸನ್ 17ನಲ್ಲಿ ಯಾರಾದರೂ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ ಅಂದ್ರೆ ಅದು ಗ್ಲೆನ್ ಮ್ಯಾಕ್ಸ್‌ವೆಲ್. ಈ ಆಸ್ಟ್ರೇಲಿಯಾದ ಆಲ್ ರೌಂಡರ್ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ.  ಈ ಋತುವಿನಲ್ಲಿ ಅವರು ಒಂದೇ ಒಂದು ಅರ್ಧಶತಕವನ್ನು ಗಳಿಸಲಿಲ್ಲ. ಮ್ಯಾಕ್ಸಿಗೆ ಆರ್‌ಸಿಬಿ 14.25 ಕೋಟಿ ರೂಪಾಯಿ ಕೊಟ್ಟಿದೆ. ಆದ್ರೆ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನ ಆಡಿ ಅವರು ಕೇವಲ 52 ರನ್ ಗಳಿಸಿದ್ದಾರೆ. 28 ರನ್​ಗಳೇ ಹೈಯೆಸ್ಟ್ ಸ್ಕೋರ್. ಹಾಗೇ 10 ಪಂದ್ಯಗಳಿಂದ 6 ವಿಕೆಟ್ ಕಿತ್ತಿದ್ದಾರೆ.

ಅಲ್ಜಾರಿ ಜೋಸೆಫ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ವೆಸ್ಟ್ ಇಂಡೀಸ್ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು RCB ಟೀಂ ಬರೋಬ್ಬರಿ 11.50 ಕೋಟಿ ರೂಪಾಯಿಗೆ ತಂಡಕ್ಕೆ ಕರೆದುಕೊಂಡಿತ್ತು. ಬೌಲಿಂಗ್ ಅಸ್ತ್ರ ಆಗ್ತಾರೆ ಅನ್ಕೊಂಡಿದ್ರು. ಆದ್ರೆ ಜೋಸೆಫ್ ಬರೀ ಫ್ಲಾಪ್ ಶೋ ತೋರಿಸಿದ್ರು. ಮೂರು ಪಂದ್ಯಗಳನ್ನ ಆಡಿ ಒಂದೇ ಒಂದು ವಿಕೆಟ್ ಪಡೆದಿದ್ದಾರೆ. ಅವ್ರ ಎಕಾನಮಿ  11.89 ಆಗಿದೆ ಎಂಬುದು ಗಮನಾರ್ಹ.

ದೀಪಕ್ ಚಹರ್ – ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈನ ಬೌಲರ್ ದೀಪಕ್ ಚಹರ್ ಮೇಲೆ ತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಗಾಯದಿಂದಾಗಿ ಈ ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಅನೇಕ ಪಂದ್ಯಗಳಿಂದ ಹೊರಗುಳಿದಿದ್ರು. ಆಡಿದ ಮೊದಲಾರ್ಧದ ಪಂದ್ಯಗಳಲ್ಲೂ ಹೆಚ್ಚು ಪ್ರಭಾವ ಬೀರಲಿಲ್ಲ. ಆಡಿರುವ 8 ಪಂದ್ಯಗಳಲ್ಲಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದಾರೆ.  ಎಕಾನಮಿ 8.59 ಆಗಿದೆ. ಅಷ್ಟಕ್ಕೂ ಚಹರ್​ಗೆ ಸಿಎಸ್​ಕೆ 14 ಕೋಟಿ ರೂಪಾಯಿ ಸಂಭಾವನೆ ನೀಡ್ತಿದೆ.

ಡೇರಿಲ್ ಮಿಚೆಲ್ – ಚೆನ್ನೈ ಸೂಪರ್ ಕಿಂಗ್ಸ್

ಇನ್ನು ಡೇರಿಲ್ ಮಿಚೆಲ್ ಅವರನ್ನು ಸಿಎಸ್‌ಕೆ 14 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿತ್ತು. ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಮಿಚೆಲ್ ಫ್ಲಾಪ್ ಶೋ ತೋರಿಸಿದ್ದಾರೆ. ಚೆನ್ನೈ ಪರ 13 ಪಂದ್ಯಗಳನ್ನ ಆಡಿದ್ದು ಕೇವಲ 28.91 ಬ್ಯಾಟಿಂಗ್ ಸರಾಸರಿಯಲ್ಲಿ 318 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 2 ಅರ್ಧಶತಕಗಳಿವೆ ಅಷ್ಟೇ. ಇನ್ನು ಬೌಲಿಂಗ್​ನಲ್ಲಿ 13 ಪಂದ್ಯಗಳಿಂದ 1 ವಿಕೆಟ್ ಕಬಳಿಸಿದ್ದಾರೆ.

ಸಮೀರ್ ರಿಜ್ವಿ  – ಚೆನ್ನೈ ಸೂಪರ್ ಕಿಂಗ್ಸ್

ಸಮೀರ್ ರಿಜ್ವಿ ಅವರನ್ನು ಈ ಸಲ ಚೆನ್ನೈ ತಂಡ 8.4 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ಮೂಲಕ ರಿಜ್ವಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅನ್‌ಕ್ಯಾಪ್ಡ್ ಆಟಗಾರರಾಗಿದ್ರು. ಆದರೆ ಅವರ ಮೇಲೆ ಇಟ್ಟಿದ್ದ ಅಪಾರ ನಿರೀಕ್ಷೆಗಳನ್ನು ಹುಸಿಯಾಗಿಸಿದ್ರು. ಅವರು 8 ಇನ್ನಿಂಗ್ಸ್‌ಗಳಲ್ಲಿ 12.75 ಸರಾಸರಿ ಮತ್ತು 118.60 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 51 ರನ್ ಗಳಿಸಿದ್ದಾರೆ.

ಮಯಾಂಕ್ ಅಗರ್ವಾಲ್ – ಸನ್ ರೈಸರ್ಸ್ ಹೈದ್ರಾಬಾದ್

ಮಯಾಂಕ್ ಅಗರ್ವಾಲ್ ಎಸ್ಆರ್‌ಹೆಚ್‌‌ ತಂಡದಲ್ಲಿ ಫೇಲ್ಯೂರ್ ಆಗಿದ್ದಾರೆ. ಅವ್ರನ್ನ 8.25 ಕೋಟಿಗೆ ಹೈದರಾಬಾದ್ ಉಳಿಸಿಕೊಂಡಿದೆ. ಅಗರ್ವಾಲ್ ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ 16.00 ಬ್ಯಾಟಿಂಗ್ ಸರಾಸರಿ ಮತ್ತು 112.28 ಸ್ಟ್ರೈಕ್ ರೇಟ್‌ನಲ್ಲಿ 64 ರನ್ ಅಷ್ಟೇ ಗಳಿಸಿದ್ದಾರೆ.

ಶಿಮ್ರಾನ್ ಹೆಟ್ಮೆಯರ್ – ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್ 8.5 ಕೋಟಿ ರೂಪಾಯಿ ಕೊಟ್ಟು ಶಿಮ್ರಾನ್ ಹೆಟ್ಮೆಯರ್ ಅವ್ರನ್ನ ಉಳಿಸಿಕೊಂಡಿದೆ. ಒಂದು ಪಂದ್ಯದಲ್ಲಿ ಆರ್ ಆರ್ ಗೆ ಜಯ ತಂದುಕೊಟ್ಟ ಈ ಕ್ರಿಕೆಟಿಗ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ವಾಸ್ತವವಾಗಿ, ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಹಾಗಂತ ಸಿಕ್ಕ ಅವಕಾಶಗಳಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ. ಆಡಿದ 11 ಪಂದ್ಯಗಳಲ್ಲಿ 27.67 ಸರಾಸರಿಯಲ್ಲಿ 109 ರನ್ ಅಷ್ಟೇ ಗಳಿಸಿದರು.

ಎರ್ನಿಚ್‌ ನೋಕಿಯಾ – ಡೆಲ್ಲಿ ಕ್ಯಾಪಿಟಲ್ಸ್

ನೋಕಿಯಾ IPL 2024 ರಲ್ಲಿ ಕಂಪ್ಲೀಟ್ ವಿಫಲರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 6.50 ಕೋಟಿ ರೂ.ಗೆ ಉಳಿಸಿಕೊಂಡಿದೆ. ಆದರೆ ಈ ಸ್ಟಾರ್ ಬೌಲರ್ ಹೆಚ್ಚು ಪ್ರಭಾವಿತರಾಗಿಲ್ಲ. ಆರು ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದು, 13.36 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ರಿಲೇ ರೊಸೊವ್ – ಪಂಜಾಬ್ ಕಿಂಗ್ಸ್

ಭಾರಿ ನಿರೀಕ್ಷೆಯೊಂದಿಗೆ ರಿಲೆ ರೊಸೊವ್ ಅವರನ್ನು 8 ಕೋಟಿ ರೂಪಾಯಿಗೆ ಪಂಜಾಬ್ ಖರೀದಿಸಿತ್ತು.. ರೆಸೊವ್ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದು, 7 ಇನ್ನಿಂಗ್ಸ್‌ಗಳಲ್ಲಿ, ಅವರು 23.14 ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 162 ರನ್ ಗಳಿಸಿದ್ದಾರೆ.

ದೇವದತ್ ಪಡಿಕ್ಕಲ್ – ಲಕ್ನೋ ಸೂಪರ್‌ ಜೈಂಟ್ಸ್

ಪಡಿಕ್ಕಲ್ ಅವ್ರನ್ನ ಲಕ್ನೋ ತಂಡ 7.75 ಕೋಟಿ ರೂಪಾಯಿಗೆ ಖರೀದಿಸಿತು. ಕರ್ನಾಟಕದ ಪರ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಈ ಯುವಕನ ಮೇಲೆ ಭಾರೀ ನಿರೀಕ್ಷೆಗಳನ್ನು ಇರಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಯಶಸ್ವಿಯಾಗಲಿಲ್ಲ. 7 ಪಂದ್ಯಗಳಲ್ಲಿ ಕೇವಲ 38 ರನ್ ಅಷ್ಟೇ ಸಿಡಿಸಿದ್ರು.

ಒಂದ್ಕಡೆ ಯುವ ಆಟಗಾರರು ಅಬ್ಬರಿಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಇನ್ನೊಂದೆಡೆ ಅದೇ ರೀತಿ ಕೆಲ ಆಟಗಾರರು ಮಾತ್ರ ಕಳೆದ ಸೀಸನ್‌ಗಿಂತ ಕಳಪೆ ಪ್ರದರ್ಶನದಿಂದ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿಸಿದ್ದಾರೆ. ಹಾಗೇ ಇಶಾನ್ ಕಿಶನ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯರಂತಹ ಸ್ಟಾರ್ ಪ್ಲೇಯರ್ಸ್ ಕೂಡ ಈ ಸಲ ಕೈಕೊಟ್ಟಿದ್ದಾರೆ.

Shwetha M