ಐಪಿಎಲ್ ಬಿಡ್ಡಿಂಗ್ – ಇತಿಹಾಸ ಬರೆದ ಸ್ಯಾಮ್ ಕರನ್, ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ಪಾಲು

ಈ ಬಾರಿಯ ಐಪಿಎಲ್ ಆವೃತ್ತಿಗೆ ಕೊಚ್ಚಿನ್ನಲ್ಲಿ ಬಿಡ್ಡಿಂಗ್ ನಡೆದಿದ್ದು, ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕರನ್ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ಸ್ಯಾಮ್ ಕರನ್ರನ್ನ ಬರೋಬ್ಬರಿ 18.50 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಇಲವೆನ್ ಖರೀದಿಸಿದೆ.
ಐಪಿಎಲ್ ಹರಾಜು ಇತಿಹಾಸದಲ್ಲಿ ಇದುವರೆಗೆ 16.25 ಕೋಟಿ ರೂಪಾಯಿ ಗರಿಷ್ಠ ಬಿಡ್ ಆಗಿತ್ತು. 2021ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೌತ್ ಆಫ್ರಿಕಾ ಆಲ್‌ರೌಂಡರ್ ಕ್ರಿಸ್ ಮೊರಿಸ್‌ಗೆ 16.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಇನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮರೂನ್ ಗ್ರೀನ್ರನ್ನ ಮುಂಬೈ ಇಂಡಿಯನ್ಸ್ 17.50 ಕೋಟಿ ರೂಪಾಯಿಗೆ ಖರೀದಿಸಿದೆ.
ಇನ್ನು ಇಂಗ್ಲೆಂಡ್ ನ ಸ್ಟಾರ್ ಆಟಗಾರ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಸ್ಟೋಕ್ಸ್ ಅವರನ್ನು ಸಿಎಸ್‌ಕೆ ಬರೋಬ್ಬರಿ 16.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
ಈ ನಡುವೆ, ಕನ್ನಡಿಗ ಮಯಾಂಕ್ ಅಗರ್‌ವಾಲ್ ಖರೀದಿಗೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮಯಾಂಕ್ ಖರೀದಿಗೆ ಮನಸ್ಸು ಮಾಡಿತ್ತು. ಆದರೆ ಮಯಾಂಕ್ ಬೆಲೆ ಏರಿಕೆಯಾಗುತ್ತಲೇ ಹೋದಾಗ ಆರ್‌ಸಿಬಿ ಬಿಡ್ಡಿಂಗ್‌ನಿಂದ ಹಿಂದೆ ಸರಿಯಿತು.
ಚೆನ್ನೈ ಸೂಪರ್ ಕಿಂಗ್ಸ್ ಪ್ರಬಲ ಪೈಪೋಟಿ ನಡುವೆ ಸನ್‌ರೈಸರ್ಸ್ ಹೈದರಾಬಾದ್ ತಂಡ 8.25 ಕೋಟಿ ರೂಪಾಯಿ ನೀಡಿ ಮಯಾಂಕ್ ಅಗರ್ವಾಲ್ರನ್ನ ಖರೀದಿ ಮಾಡಿತು. ಇಷ್ಟೇ ಅಲ್ಲ, 2 ಕೋಟಿ ಮೂಲಬೆಲೆ ಹೊಂದಿದ್ದ ನಿಕೋಲಸ್ ಪೂರನ್ ಖರೀದಿಗೆ ಪೈಪೋಟಿ ನಡೆದಿತ್ತು. ಲಕ್ನೋ ಸೂಪರ್ ಜೈಂಟ್ಸ್ ಕೊನೆಯವರೆಗೂ ಪಟ್ಟುಬಿಡದೆ ಬರೋಬ್ಬರಿ 16 ಕೋಟಿ ರೂಪಾಯಿಗೆ ನಿಕೋಲಸ್ ಪೂರನ್ರನ್ನ ಖರೀದಿ ಮಾಡಿದೆ.