ಮೂವರು ಪ್ಲೇಯರ್ಸ್ ಗೆ IPL ಬಾಗಿಲು ಬಂದ್ ಆಗುತ್ತಾ? – ಸೀನಿಯರ್ಸ್‌ಗೆ ಅನ್‌ಸೋಲ್ಡ್ ಭಯ?
ಐಪಿಎಲ್ ಇತಿಹಾಸದಲ್ಲೇ 17ನೇ ಸೀಸನ್ ಕ್ರಿಕೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹಾಗೇ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿತ್ತು. ದಶಕದ ಕಾಲ ಕ್ಯಾಪ್ಟನ್ ಆಗಿದ್ದವ್ರು ಸಾಮಾನ್ಯ ಆಟಗಾರನಾಗಿ ಆಡಿದ್ರೆ, ಪಾಯಿಂಟ್ಸ್ ಟೇಬಲ್ನಲ್ಲಿ ಲಾಸ್ಟ್ ಪ್ಲೇಸ್ನಲ್ಲಿದ್ದ ತಂಡಗಳು ಪ್ಲೇಆಫ್ ತಲುಪಿ ಶಾಕ್ ಕೊಟ್ಟಿದ್ವು. ಹೀಗೆ ಅಭಿಮಾನಿಗಳನ್ನ ಮಸ್ತ್ ಎಂಟರ್ಟೈನ್ ಮಾಡಿದ್ದ ಐಪಿಎಲ್ ಇದೀಗ 18 ಆವೃತ್ತಿಗೆ ಭರ್ಜರಿಯಾಗೇ ರೆಡಿಯಾಗ್ತಿದೆ. ಈಗಾಗ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರೂಪರೇಷೆಗಳನ್ನ ಸಿದ್ಧಗೊಳಿಸ್ತಿದೆ. ಐಪಿಎಲ್ 2025 ಟೂರ್ನಿ ಸಲುವಾಗಿ ಮೆಗಾ ಆಕ್ಷನ್ ನಡೆಯಲಿದ್ದು, ಇದೇ ವರ್ಷ ಡಿಸೆಂಬರ್ನಲ್ಲಿ ದೊಡ್ಡ ಮಟ್ಟದಲ್ಲಿ ಹರಾಜು ಆಗಬೇಕಿದೆ. ಆದ್ರೆ ಆಕ್ಷನ್ನಲ್ಲಿ ಭಾರತದ ದಿಗ್ಗಜ ಆಟಗಾರರೇ ಬಿಕರಿ ಆಗಲ್ಲ ಅನ್ನೋ ಚರ್ಚೆ ನಡೀತಿದೆ. ಅಷ್ಟಕ್ಕೂ ಈ ಸಲ ಯಾವೆಲ್ಲಾ ಆಟಗಾರರ ಖರೀದಿ ಆಗದೆಯೇ ಉಳಿಯಬಹುದು ಮತ್ತು ಯಾಕೆ ಅನ್ನೋ ರೋಚಕ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿ.ಸೋಮಣ್ಣಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ – ಯಾವುದೇ ಕಾರಣ ನೀಡದೇ ಸಂಸದರ ಕಚೇರಿ ವಾಪಸ್ ಪಡೆದ ಸರ್ಕಾರ
18ನೇ ಆವೃತ್ತಿಯ ಮೆಗಾ ಆಕ್ಷನ್ಗೂ ಮುನ್ನ ಎಲ್ಲ ತಂಡಗಳಿಗೆ ಇಂತಿಷ್ಟೇ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ನಿಯಮ ಇರಲಿದೆ. ಆದ್ರೆ ಈವರೆಗೂ ಎಷ್ಟು ಜನರನ್ನ ರೀಟೇನ್ ಮತ್ತು ಆರ್ಟಿಎಂ ಮೂಲಕ ಉಳಿಸಿಕೊಳ್ಬೇಕು ಅನ್ನೋದು ಫೈನಲ್ ಆಗಿಲ್ಲ. ಈಗಿರೋ ಮಾಹಿತಿ ಪ್ರಕಾರ 3+1 ಸೂತ್ರವೇ ಫೈನಲ್ ಆಗಲಿದೆ. ಹಾಗೇನಾದ್ರೂ ಆಗಿದ್ದೇ ಆದ್ರೆ ಫ್ರಾಂಚೈಸಿಗಳಿಗೆ ತಮ್ಮ ತಂಡದ ಕೆಲ ಸ್ಟಾರ್ ಆಟಗಾರರನ್ನೇ ಹರಾಜಿಗೆ ಬಿಟ್ಟುಕೊಡಲೇ ಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಕೆಲ ಸೂಪರ್ ಸ್ಟಾರ್ ಆಟಗಾರರು ಬೇರೆ ಬೇರೆ ತಂಡ ಸೇರಿದ್ರೂ ಅಚ್ಚರಿ ಇಲ್ಲ. ಸೋ ಫ್ರಾಂಚೈಸಿಗಳಿಗೆ ಯಾರನ್ನು ಉಳಿಸಿಕೊಳ್ಳುವುದು ಮತ್ತು ಯಾರನ್ನು ಬಿಡುಗಡೆ ಮಾಡುವುದು ಎಂಬುದರ ಬಗ್ಗೆ ತಲೆ ಬಿಸಿ ಶುರುವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ತಂಡಗಳು ತಾವು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಬೇಕಿದೆ. ಆದ್ರೆ ಈ ಬಾರಿಯ ಹರಾಜಿನಲ್ಲಿ ಕೆಲ ಸ್ಟಾರ್ ಆಟಗಾರರು ಹರಾಜಾಗದೇ ಉಳಿಯುವ ಸಾಧ್ಯತೆ ಕೂಡ ಇದೆ. ಅದರಲ್ಲೂ ಭಾರತ ತಂಡದ ಹಿರಿಯ ಆಟಗಾರರು ಆಕ್ಷನ್ ಟೇಬಲ್ನಲ್ಲಿ ಕಡೆಗಣನೆಗೆ ಗುರಿಯಾಗುವ ಸಾಧ್ಯತೆ ಇದೆ. ಹೀಗೆ ಬೇಡಿಕೆ ಕಳೆದುಕೊಳ್ಳಬಲ್ಲ ಮೂವರು ಸ್ಟಾರ್ ಆಟಗಾರರ ಯಾರು ಅನ್ನೋದನ್ನೇ ಹೇಳ್ತೇನೆ. ಮೊದಲನೇ ಹೆಸರೇ ಮಯಾಂಕ್ ಅಗರ್ವಾಲ್!
ಕನ್ನಡಿಗ ಮಯಾಂಕ್ ಗೆ ಇಲ್ವಾ ಬೇಡಿಕೆ?
ಐಪಿಎಲ್ನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಬ್ಯಾಟ್ ಬೀಸಿರುವ ಕರ್ನಾಟಕದ ಅನುಭವಿ ಬ್ಯಾಟರ್ ಮಯಾಂಕ್ ಅಗರ್ವಾಲ್ ನಿಧಾನವಾಗಿ ತಮ್ಮ ಬೇಡಿಕೆ ಕಳೆದುಕೊಳ್ಳುತ್ತಿದ್ದಾರೆ. ಐಪಿಎಲ್ 2024 ಟೂರ್ನಿಯಲ್ಲೂ ಮಯಾಂಕ್ ಆಡಿದ್ದು ಕೆಲವೇ ಪಂದ್ಯಗಳನ್ನು ಮಾತ್ರ. ಸಿಕ್ಕ 4 ಅವಕಾಶಗಳಲ್ಲಿ ಮಯಾಂಕ್ ಕೇವಲ 64 ರನ್ ಮಾತ್ರವೇ ಗಳಿಸಿದ್ದರು. 112.28ರ ಸ್ಟ್ರೈಕ್ರೇಟ್ ಅವರದ್ದಾಗಿತ್ತು. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆಡುವ 11ರ ಬಳಗದಲ್ಲಿ ಮಯಾಂಕ್ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ತಂಡದ ಮೊದಲ ಆಯ್ಕೆಯ ಓಪನರ್ಸ್ ಆಗಿದ್ದಾರೆ. ಹೀಗಾಗಿ ಹರಾಜಿನಲ್ಲಿ ಮಯಾಂಕ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಜೊತೆಗೆ ಹರಾಜಿನಲ್ಲಿ ಮಾರಾಟವಾಗದೇ ಉಳಿದರೂ ಅಚ್ಚರಿಯಿಲ್ಲ. ಇದು ಮಯಾಂಕ್ ಕಥೆಯಾದ್ರೆ 2ನೇ ಹೆಸರೇ ಶಿಖ್ ಧವನ್.
ಗಾಯದಿಂದ ಬಳಲಿದ ಶಿಖರ್ ಧವನ್
ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಕಥೆಯೂ ಹೀಗೇ ಆಗಿದೆ. 2024ರ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸಿದ್ದ ಶಿಖರ್ ಧವನ್, ಗಾಯದ ಸಮಸ್ಯೆಯ ಕಾರಣ ಸಂಪೂರ್ಣ ಟೂರ್ನಿಯಲ್ಲಿ ಪಾಲ್ಗೊಳ್ಳಲಿಲ್ಲ. 39 ವರ್ಷದ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಅವರನ್ನು ಪಂಜಾಬ್ ಫ್ರಾಂಚೈಸಿ ಈ ಸಲ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಡಗೈ ಬ್ಯಾಟರ್ ಎನಿಸಿರುವ ಶಿಖರ್ ಧವನ್ಗೆ ಮುಂಬರುವ ಮೆಗಾ ಆಕ್ಷನ್ನಲ್ಲಿ ಬೇಡಿಕೆ ಸಿಗೋದು ಅನುಮಾನ. 6000ಕ್ಕೂ ಹೆಚ್ಚು ರನ್ ಗಳಿಸಿರುವ ಅನುಭವಿ ಆಟಗಾರನ ಖರೀದಿಗೆ ತಂಡಗಳು ಆಸಕ್ತಿ ವಹಿಸುತ್ತವೆಯೇ? ಅನ್ನೋದನ್ನ ಕಾದು ನೋಡ್ಬೇಕು. ಇನ್ನು ಮೂರನೇ ಆಟಗಾರ ಅಜಿಂಕ್ಯ ರಹಾನೆ.
ಆಟದಲ್ಲಿ ಅಜಿಂಕ್ಯ ರಹಾನೆ ಫೇಲ್!
2023ನೇ ಬಾರಿಯ ಮೆಗಾ ಆಕ್ಷನ್ನಲ್ಲೇ ಅಜಿಂಕ್ಯ ರಹಾನೆ ಹರಾಜಾಗದೆ ಉಳಿಯಬೇಕಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರಿಗೆ ಅವಕಾಶ ನೀಡಿತ್ತು. ಸಿಕ್ಕ ಅವಕಾಶ ಬಳಸಿಕೊಂಡು ಸಿಎಸ್ಕೆ ಯಶಸ್ಸಿಗೆ ಕಾರಣರಾಗಿದ್ದ ಅಜಿಂಕ್ಯ, ಐಪಿಎಲ್ 2024 ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದರೆ ಅಜಿಂಕ್ಯ ಅವರನ್ನು ಬೇರೆ ತಂಡಗಳು ಖರೀದಿ ಮಾಡುವುದು ಡೌಟ್.
ಹೀಗೆ 2025ರ ಐಪಿಎಲ್ಗೆ ಈಗಿನಿಂದಲೇ ಸಿದ್ಧತೆ ನಡೀತಿರುವಾಗ್ಲೇ ತಂಡದಿಂದ ಯಾರಿಗೆಲ್ಲಾ ಗೇಟ್ಪಾಸ್ ಕೊಡ್ಬೇಕು ಅಂತಾ ಫ್ರಾಂಚೈಸಿಗಳು ಲೆಕ್ಕ ಹಾಕಿಕೊಳ್ತಿವೆ. ಹಾಗೇ ಹರಾಜಿನಲ್ಲಿ ಹೊಸ ಸ್ಟಾರ್ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಲಿಷ್ಠ ತಂಡ ರಚನೆಗೆ ರಣನೀತಿ ರೂಪಿಸುತ್ತಿವೆ. ಬಿಸಿಸಿಐ ತೆಗೆದುಕೊಳ್ಳುವ ನಿಯಮಗಳ ಮೇಲೆ ಫ್ರಾಂಚೈಸಿಗಳ ಭವಿಷ್ಯವೂ ಅಡಗಿದೆ.