ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು – ಗೆಲುವಿನ ಓಟ ಮುಂದುವರಿಸಿ ಶ್ರೇಯಸ್ ಪಡೆ

ಪಂಜಾಬ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 54 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿತು. ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನೋಲಿ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 7 ವಿಕೆಟ್‌ಗೆ 254 ಬೃಹತ್ ಮೊತ್ತ ಕಲೆಹಾಕಿತು. ಇದು ಪಂಜಾಬ್ ತಂಡದ ಎರಡನೇ ಅತ್ಯಧಿಕ ಗರಿಷ್ಠ ಮೊತ್ತವಾಗಿದೆ. 2024ರಲ್ಲಿ ಕೆಕೆಆರ್ ವಿರುದ್ಧ 262 ರನ್ ಬಾರಿಸಿದ್ದು ದಾಖಲೆ.
ಬೃಹತ್ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ಬ್ಯಾಟಿಂಗ್ ಮೂಲಕ ಬೆನ್ನಟಿಕೊಂಡು ಬಂದ ಲಖನೌ, ಅಂತಿಮವಾಗಿ 5 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಶ್ರೇಯಸ್ ಅಯ್ಯರ್ ಪಡೆ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತಷ್ಟು ಗಟ್ಟಿಗೊಳಿಸಿತು. ಲಖನೌ 4ನೇ ಸೋಲು ಕಂಡಿತು.
ಇದನ್ನೂ ಓದಿ: ದೇಶದಲ್ಲಿ ತಾಪಮಾನ ಹೆಚ್ಚಳ! – ಹೀಟ್ ಸ್ಟ್ರೋಕ್ ನಿಂದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಚೇಸಿಂಗ್ ವೇಳೆ ಮಿಚೆಲ್ ಮಾರ್ಷ್ ಮತ್ತು ಆರಂಭಿಕನಾಗಿ ಬಡ್ತಿ ಪಡೆದು ಬಂದ ಆಯೂಷ್ ಬದೋನಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಲಾರಂಭಿಸಿದರು. ಉಭಯ ಆಟಗಾರರ ಬೀಸಾಟದಿಂದ ತಂಡದ ಮೊತ್ತವೂ ಹಿಗ್ಗಿತು. ಓವರ್‌ಗೆ 12ರಂತೆ ರನ್ ಹರಿದುಬಂದಿತು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕನ್ನಡಿಗ ವಿಜಯಕುಮಾರ್ ವೈಶಾಕ್ ಬೇರ್ಪಡಿಸಿದರು. ತಾವೆಸೆದ ಮೊದಲ ಓವರ್‌ನ ಅಂತಿಮ ಎಸೆತದಲ್ಲಿ ಬದೋನಿ ವಿಕೆಟ್ ಕಿತ್ತು ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಬದೋನಿ 21 ಎಸೆತಗಳಿಂದ 35 ರನ್ ಬಾರಿಸಿದರು.
ಬದೋನಿ ವಿಕೆಟ್ ಪತನಗೊಂಡ ಬಳಿಕ ಆಡಲಿಳಿದ ನಾಯಕ ಪಂತ್ ಕೂಡ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು. ಮಾರ್ಕೊ ಜಾನ್ಸೆನ್‌ಗೆ ಸತತ ಸಿಕ್ಸರ್‌ಗಳ ರುಚಿ ತೋರಿಸಿದ ಪಂತ್ ಒಟ್ಟಾರೆ 4 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿ ಅರ್ಶ್‌ದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ 40 ರನ್ ಗಳಿಸಿದರು. ಕೆಲ ಕ್ರಮಾಂಕದಲ್ಲಿ ಮಾರ್ಕ್ರಮ್ 42 ರನ್ ಬಾರಿಸಿದರೂ ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ.
ಬೃಹತ್ ಮೊತ್ತದ ಜತೆಯಾಟ ನಡೆಸಿದ ಪ್ರಿಯಾಂಶ್-ಕೊನೋಲಿ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನೋಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದ ಉಭಯ ಆಟಗಾರರು ಲಖನೌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 2ನೇ ವಿಕೆಟ್‌ಗೆ ಬರೋಬ್ಬರಿ 185 ರನ್ ರಾಶಿ ಹಾಕಿ ತಂಡಕ್ಕೆ ಬದ್ರ ಬುನಾದಿ ಹಾಕಿದರು.

ನೋಡಿರಿ

