ಪಂಜಾಬ್‌ ಕಿಂಗ್ಸ್‌ ಗೆಲುವಿನ ಓಟಕ್ಕೆ ಬ್ರೇಕ್‌ – ಆರ್‌ಆರ್‌ ವಿರುದ್ಧ ಮೊದಲ ಸೋಲುಂಡ ಶ್ರೇಯಸ್ ಅಯ್ಯರ್ ಪಡೆ

ಪಂಜಾಬ್‌ ಕಿಂಗ್ಸ್‌  ಗೆಲುವಿನ ಓಟಕ್ಕೆ ಬ್ರೇಕ್‌ – ಆರ್‌ಆರ್‌ ವಿರುದ್ಧ ಮೊದಲ ಸೋಲುಂಡ ಶ್ರೇಯಸ್ ಅಯ್ಯರ್ ಪಡೆ

ಯಶಸ್ವಿ ಜೈಸ್ವಾಲ್‌ ಹಾಗೂ ಡೊನೊವಾನ್‌ ಫೆರೆರಾ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದೆ. ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ತಂಡ, 6 ವಿಕೆಟ್‌ಗಳಿಂದ ಪಂಜಾಬ್‌ ತಂಡವನ್ನು ಮಣಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಗಿದೆ. ಅಂದ ಹಾಗೆ ಈ ಪಂದ್ಯದ ಫಲಿತಾಂಶದ ಹೊರತಾಗಿಯೂ ಪಂಜಾಬ್‌ 13 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿ ಹಾಗೂ ಆರ್‌ಆರ್‌ ಮೂರನೇ ಸ್ಥಾನದಲ್ಲಿ ಮುಂದುವರಿದಿವೆ.

ಇದನ್ನೂ ಓದಿ: ಸುಡು ಬಿಸಿಲು ಅಂತ ಕೋಲ್ಡ್‌ ವಾಟರ್‌ ಕುಡಿಯುತ್ತೀರಾ? – ಎಚ್ಚರ.. ಈ ಸಮಸ್ಯೆ ನಿಮ್ಮನ್ನು ಕಾಡಬಹುದು!

ಮಂಗಳವಾರ ಇಲ್ಲಿನ ಮಹಾರಾಜ ಯಧವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 223 ರನ್‌ಗಳ ಗುರಿಯನ್ನು ರಾಜಸ್ಥಾನ್‌ ರಾಯಲ್ಸ್‌ ತಂಡ, 19.2 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 228 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಆರ್‌ಆರ್‌ ತಂಡದ ಚೇಸಿಂಗ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಉಪಯುಕ್ತ ಕಾಣಿಕೆ ನೀಡಿದರು.

ಆರಂಭಿಕ ವೈಭವ್‌ ಸೂರ್ಯವಂಶಿ ಪವರ್‌ಪ್ಲೇನಲ್ಲಿ 16 ಎಸೆತಗಳಲ್ಲಿ 43 ರನ್‌ ಗಳಿಸಿ ಆರ್‌ಆರ್‌ಗೆ ಭರ್ಜರಿ ಆರಂಭ ಕೊಟ್ಟು ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಧ್ರುವ್‌ ಜುರೆಲ್‌ 16 ಕ್ಕೆ ಸೀಮಿತರಾದರು. ಆದರೆ, ಒಂದು ತುದಿಯಲ್ಲಿ ದೀರ್ಘವಾಗಿ ಬ್ಯಾಟ್‌ ಮಾಡಿದ್ದ ಯಶಸ್ವಿ ಜೈಸ್ವಾಲ್‌ 27 ಎಸೆತಗಳಲ್ಲಿ 51 ರನ್‌ ಗಳಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿ ವಿಕೆಟ್‌ ಒಪ್ಪಿಸಿದರು. ನಾಯಕ ರಿಯಾನ್‌ ಪರಾಗ್‌ 29 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು

ಯುಜ್ವೇಂದ್ರ ಚಹಲ್‌ ಮಧ್ಯಮ ಓವರ್‌ಗಳಲ್ಲಿ ಧ್ರುವ್‌ ಜುರೆಲ್‌, ಯಶಸ್ವಿ ಜೈಸ್ವಾಲ್‌ ಹಾಗೂ ರಿಯಾನ್‌ ಪರಾಗ್‌ ಅವರನ್ನು ಔಟ್‌ ಮಾಡಿ ಪಂಜಾಬ್‌ ತಂಡದ ಕಮ್‌ಬ್ಯಾಕ್‌ ನೆರವು ನೀಡಿದ್ದರು. ಆದರೆ, ಕೊನೆಯಲ್ಲಿ ಡೊನೊವಾನ್‌ ಪೆರೆರಾ ಹಾಗೂ ಶುಭಮ್‌ ದುಬೇ ಅವರನ್ನು ಕಟ್ಟಿ ಹಾಕುವಲ್ಲಿ ಪಂಜಾಬ್‌ ಬೌಲರ್‌ಗಳು ವಿಫಲರಾದರು. ಡೊನೊವಾನ್‌ ಫೆರೆರಾ ಸ್ಪೋಟಕ ಬ್ಯಾಟ್‌ ಮಾಡಿ 26 ಎಸೆತಗಳಲ್ಲಿ 52 ರನ್‌ ಹಾಗೂ ಶುಭಮ್‌ ದುಬೇ 12 ಎಸೆತಗಳಲ್ಲಿ 31 ರನ್‌ಗಳ ಜೊತೆಗೆ ಇವರಿಬ್ಬರೂ 32 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟವನ್ನು ಆಡಿ ರಾಜಸ್ಥಾನ್‌ ತಂಡವನ್ನು ಗೆಲ್ಲಿಸಿದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ಪ್ರಭ್‌ಸಿಮ್ರಾನ್‌ ಸಿಂಗ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ಗೆ 223 ರನ್‌ಗಳ ಗುರಿಯನ್ನು ನೀಡಿತ್ತು.

Kishor KV