RTM ರೂಲ್ಸ್ ​​ಗೆ ಫ್ರಾಂಚೈಸಿಗಳ ಪಟ್ಟು – ಎಷ್ಟು ಆಟಗಾರರ ರಿಟೇನ್​​ ಗೆ ಅವಕಾಶ?
IPL ನಿಯಮಗಳಲ್ಲಿ ಏನೆಲ್ಲಾ ಬದಲಾವಣೆ?

RTM ರೂಲ್ಸ್ ​​ಗೆ ಫ್ರಾಂಚೈಸಿಗಳ ಪಟ್ಟು – ಎಷ್ಟು ಆಟಗಾರರ ರಿಟೇನ್​​ ಗೆ ಅವಕಾಶ?IPL ನಿಯಮಗಳಲ್ಲಿ ಏನೆಲ್ಲಾ ಬದಲಾವಣೆ?

2025ರ ಐಪಿಎಲ್ ಟೂರ್ನಿಗೆ ಬಿಸಿಸಿಐ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ. ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಗೂ ಮುನ್ನ ಒಂದಷ್ಟು ಬದಲಾವಣೆ ಮಾಡೋಕೆ ಮುಂದಾಗಿದೆ. ಯಾಕಂದ್ರೆ ಯಾರನ್ನು ಕೈಬಿಡಬೇಕು, ಯಾರನ್ನ ಉಳಿಸಿಕೊಳ್ಳಬೇಕು, ಹರಾಜಿನಲ್ಲಿ ಯಾರನ್ನು ಖರೀದಿಸಬೇಕು ಅನ್ನೋ ಬಗ್ಗೆ ಹತ್ತೂ ಫ್ರಾಂಚೈಸಿಗಳು ಕೂಡ ಈಗಾಗ್ಲೇ ಒಂದು ಬ್ಲ್ಯೂಪ್ರಿಂಟ್ ರೆಡಿ ಮಾಡಿಕೊಂಡಿವೆ. ಆದ್ರೆ ಈಗ ಇರೋ ಪ್ರಶ್ನೆ ಅಂದ್ರೆ ಎಷ್ಟು ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ಅವಕಾಶ ಇದೆ ಅನ್ನೋದು. ಹಾಗಾದ್ರೆ ಐಪಿಎಲ್ ಫ್ರಾಂಚೈಸಿಗಳು ಇಟ್ಟಿರೋ ಬೇಡಿಕೆ ಏನು? ಬಿಸಿಸಿಐ ಹರಾಜು ಪ್ರಕ್ರಿಯೆಗೆ ಈ ಬಾರಿ ಏನೆಲ್ಲಾ ಹೊಸ ರೂಲ್ಸ್ ಸೇರಿಸಲಿದೆ? ಸ್ಟಾರ್ ಆಟಗಾರರೇ ತಂಡದಿಂದ ಹೊರ ಬರ್ತಾರಾ? ಈ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಾಹಿ ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಗುಡ್​ನ್ಯೂಸ್​.. – CSK ಪರ ಮತ್ತೆ ಆಡ್ತಾರೆ ಧೋನಿ!

ಪ್ರತೀ ಬಾರಿ ಐಪಿಎಲ್ ಆರಂಭಕ್ಕೂ ಮುನ್ನ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯೋದು ಹರಾಜು ಪ್ರಕ್ರಿಯೆಗಾಗಿ. ಯಾಕಂದ್ರೆ ಯಾವ ಆಟಗಾರರು ಆಕ್ಷನ್​ಗೆ ಬರ್ತಾರೆ, ಎಷ್ಟು ಬಿಡ್ ಆಗುತ್ತೆ, ಯಾವ ತಂಡಕ್ಕೆ ಜಾಯ್ನ್ ಆಗ್ತಾರೆ ಅನ್ನೋದನ್ನ ನೋಡೋಕೆ. ಸೋ 18ನೇ ಆವೃತ್ತಿಯ ಐಪಿಎಲ್​ಗೂ ಕೂಡ ಬಿಸಿಸಿಐ ಈಗ ಪ್ರಿಪರೇಷನ್ಸ್ ಆರಂಭಿಸಿದೆ. ಮೆಗಾ​ ಹರಾಜಿನ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಭೆ ಕೂಡ ನಡೆಯಲಿದೆ. ಈಗಾಗ್ಲೇ ಫ್ರಾಂಚೈಸಿಗಳು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಭೆಗೂ ಮುನ್ನವೇ ಬಿಸಿಸಿಐಗೆ ಸಲ್ಲಿಸಿವೆ. ಮೆಗಾ ಹರಾಜಿಗೆ ಮಾಡಬೇಕಾದ ಬದಲಾವಣೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸೋ ಸಾಧ್ಯತೆ ಇದೆ. ಹಾಗಾಗಿ ಹರಾಜಿಗೂ ಮೊದಲು ಆಟಗಾರರ ರಿಟೇನ್, ಪರ್ಸ್ ಮೊತ್ತ ಮತ್ತು ಹರಾಜಿನ ಸ್ವರೂಪ-ನಿಯಮಗಳ ಬಗ್ಗೆ ಫ್ರಾಂಚೈಸಿಗಳು ಪಟ್ಟಿ ಸಲ್ಲಿಸಿವೆ.

5 ವರ್ಷಕ್ಕೊಮ್ಮೆ ಮೆಗಾ ಹರಾಜಿಗೆ ಮನವಿ!   

ಐಪಿಎಲ್​ ಹರಾಜುಗಳನ್ನು ಪ್ರತಿ ಮೂರು ವರ್ಷಕ್ಕೆ ನಡೆಸುವುದರ ಬದಲಿಗೆ ಐದು ವರ್ಷಗಳಿಗೊಮ್ಮೆ ಆಯೋಜಿಸಬೇಕು ಎಂದು ಕೆಲ ಫ್ರಾಂಚೈಸಿಗಳ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದಕ್ಕೆ ಕಾರಣ ಆಟಗಾರರ ಮೇಲೆ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ದೀರ್ಘ ಅಂತರದ ಕಾರಣ, ಯುವ ಆಟಗಾರರನ್ನು ಸಿದ್ಧಪಡಿಸಲು ತಂಡಗಳಿಗೆ ಸಮಯ ಸಿಗುತ್ತೆ. ಹಾಗೇ ಪ್ರತಿ ಫ್ರಾಂಚೈಸಿಗೆ ಗರಿಷ್ಠ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ ಎಂದು ಬಿಸಿಸಿಐ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಆದ್ರೆ ಈ ಬಗ್ಗೆ ಕೆಲವು ತಂಡಗಳಿಗೆ ಅಸಮಾಧಾನ ಇದೆ. ನಾಲ್ಕರ ಬದಲಿಗೆ ಎಂಟು ಆಟಗಾರರ ರಿಟೆನ್ಶನ್​ಗೆ ಬೇಡಿಕೆ ಇಟ್ಟಿವೆ. ಇದಲ್ಲದೆ, 4 ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಅಂತಾ ಬಿಸಿಸಿಐಗೆ ಮನವಿ ಸಲ್ಲಿಸಿವೆ. ಮತ್ತೊಂದೆಡೆ ಫ್ರಾಂಚೈಸಿಯೊಬ್ಬರ ಸಿಇಒ ತಂಡಗಳು ಹರಾಜಿಗೂ ಮುನ್ನ ಒಬ್ಬನೇ ಆಟಗಾರನನ್ನು ಮಾತ್ರ ಉಳಿಸಿಕೊಳ್ಳಬೇಕು. ಅದು ಕೂಡ ನಾಯಕನಾಗಿರಬೇಕು. ಉಳಿದ ಆಟಗಾರರನ್ನು ಉಳಿಸಿಕೊಳ್ಳಲು ಆರ್​​ಟಿಎಂ ಅಂದರೆ ರೈಟ್​ ಟು ಮ್ಯಾಚ್​ ಆಯ್ಕೆಗೆ ಅನುಮತಿ ನೀಡಬೇಕು ಎಂದಿದ್ದಾರೆ. ಅಷ್ಟಕ್ಕೂ ಈ ಆರ್​ಟಿಎಂ ಅಂದರೆ ಪ್ಲೇಯರ್​​ಗಳನ್ನು ಆಯ್ಕೆ ಮಾಡಿ ಹರಾಜಿಗೆ ಬಿಡುವ ವಿಧಾನ ಇದಾಗಿದೆ. ಫಾರ್ ಎಕ್ಸಾಂಪಲ್ ಆರ್​ಸಿಬಿ ತಂಡವು ವಿರಾಟ್ ಕೊಹ್ಲಿ ಅವರನ್ನು ಆರ್​ಟಿಎಂನಲ್ಲಿ ಆಯ್ಕೆ ಮಾಡಿದೆ ಎಂದುಕೊಳ್ಳಿ. ಆದರೂ ಕೊಹ್ಲಿ ಹೆಸರು ಹರಾಜಿನಲ್ಲಿ ಇರಲಿದೆ. ಯಾವುದೇ ಫ್ರಾಂಚೈಸಿ ಎಷ್ಟು ಬೇಕಾದರೂ ಬಿಡ್ ಮಾಡಬಹುದು. ಫೈನಲಿ ಯಾವುದೋ ಒಂದು ತಂಡ ಕೊಹ್ಲಿಯವ್ರನ್ನ 20 ಕೋಟಿಗೆ ಖರೀದಿಸಿದರೆ, ಅಷ್ಟೂ ಮೊತ್ತವನ್ನು ನಾವು ನೀಡುತ್ತೇವೆ ಎಂದು ಆರ್​ಸಿಬಿ ತಂಡವೇ ವಿರಾಟ್​ ಅವರನ್ನು ಉಳಿಸಿಕೊಳ್ಳಬಹುದು. ಇಂತಹ 8 ಆಯ್ಕೆಗಳಿಗೆ ಅವಕಾಶ ಕೊಡಲು ಫ್ರಾಂಚೈಸಿಗಳು ಬೇಡಿಕೆ ಇಟ್ಟಿವೆ. ಐಪಿಎಲ್​ನಲ್ಲಿ ಬಹುತೇಕ ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮುನ್ನ ಈ ಆಯ್ಕೆ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಇದಕ್ಕೆ ಮುಖ್ಯ ಕಾರಣ ರಿಟೈನ್ ಆಟಗಾರರ ಸಂಖ್ಯೆ ಕಡಿಮೆ ಇರುವುದು. ಅಂದರೆ ಮೆಗಾ ಹರಾಜಿಗೂ ಮುನ್ನ ಕೇವಲ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ಉಳಿದ 21 ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದ ಮೆಗಾ ಹರಾಜಿನ ಬಳಿಕ ಇಡೀ ತಂಡ ಬದಲಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಒಂದು ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆಯಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚು ಆಟಗಾರರನನ್ನ ತಂಡದಲ್ಲಿ ಉಳಿಸಿಕೊಳ್ಳೋಕೆ ಈ ಬೇಡಿಕೆ ಇಟ್ಟಿವೆ.

ಐಪಿಎಲ್ 2025ರ ಸಿದ್ಧತೆಗಳು ಶುರುವಾದ ಬೆನ್ನಲ್ಲೇ RTM ಆಯ್ಕೆ ವಿಚಾರ ತುಂಬಾನೇ ಚರ್ಚೆಯಾಗ್ತಿದೆ.   2018 ರ ಮೆಗಾ ಹರಾಜಿನ ವೇಳೆ ಈ ನಿಯಮವನ್ನು ಪರಿಚಯಿಸಲಾಗಿತ್ತು. ಈ ವೇಳೆ ಮೂವರು ಆಟಗಾರರ ಮೇಲೆ ಆರ್​​ಟಿಎಂ ಆಯ್ಕೆ ಬಳಸಲು ಅವಕಾಶ ನೀಡಲಾಗಿತ್ತು. ಆದರೆ 2022 ರಲ್ಲಿ ನಡೆದ ಮೆಗಾ ಹರಾಜಿನ ವೇಳೆ ಈ ನಿಯಮವನ್ನು ತೆಗೆದು ಹಾಕಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಎರಡು ಹೊಸ ತಂಡಗಳ ಸೇರ್ಪಡೆ. ಅಂದರೆ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಹರಾಜಿನಲ್ಲಿ ಕಾಣಿಸಿಕೊಂಡಿದ್ದರಿಂದ ಈ ನಿಮಯವನ್ನು ಬಳಸಲಾಗಿರಲಿಲ್ಲ. ಆದ್ರೆ ಈ ಬಾರಿಯ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಆರ್​ಟಿಎಂ ಆಯ್ಕೆಗಾಗಿ ಫ್ರಾಂಚೈಸಿಗಳು ಮನವಿ ಮಾಡಿದೆ. ಹೀಗಾಗಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್​ಟಿಎಂ ಆಯ್ಕೆ ಮತ್ತೆ ಬಂದ್ರೂ ಅಚ್ಚರಿ ಪಡ್ಬೇಕಿಲ್ಲ.

Shwetha M