ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ – ದೇಶೀ ಸ್ಟಾರ್ಸ್‌ಗಳ ಬೊಂಬಾಟ್ ಆಟ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ – ದೇಶೀ ಸ್ಟಾರ್ಸ್‌ಗಳ ಬೊಂಬಾಟ್ ಆಟ

ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು ಪಡೆದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಒಂದು ವಿಕೆಟ್‌ನಿಂದ ಡಿಸಿ ಸೋಲಿಸಿದೆ. ಸೋಮವಾರ ವಿಶಾಖಪಟ್ಟಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್‌ನಿಂದಾಗಿ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದೆಹಲಿ ತಂಡ 19.3 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳಿಂದ ತಿರಸ್ಕರಿಸಲ್ಪಟ್ಟ ಶಾರ್ದೂಲ್ ಠಾಕೂರ್, ಮೊಹ್ಸಿನ್ ಖಾನ್ ಅವರ ಗಾಯದಿಂದಾಗಿ ಈ ಸೀಸನ್‌ನಲ್ಲಿ ಆಡಲು ಅವಕಾಶ ಪಡೆದರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಶಾರ್ದೂಲ್ ಲಕ್ನೋ ಪರ ಮೊದಲ ಓವರ್‌ನಲ್ಲಿ ಡಬಲ್ ವಿಕೆಟ್ ಉರುಳಿಸಿದರು. ನಂತರ ಎರಡನೇ ಓವರ್‌ನಲ್ಲಿ ಮೂರನೇ ವಿಕೆಟ್ ಕೂಡ ಪತನವಾಯಿತು. ಶೀಘ್ರದಲ್ಲೇ ತಂಡದ ಅರ್ಧದಷ್ಟು ಜನರು ಪೆವಿಲಿಯನ್‌ಗೆ ಮರಳಿದರು. ಹೀಗಾಗಿ ಕೇವಲ 40 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡ ದೆಹಲಿಯ ಸೋಲು ಖಚಿತವೆನಿಸಿದರೂ ಅಶುತೋಷ್ ಅವರ ಉದ್ದೇಶವೇ ಬೇರೆಯಾಗಿತ್ತು.

7ನೇ ಓವರ್‌ನಲ್ಲಿ ಬ್ಯಾಟಿಂಗ್​ಗೆ ಬಂದ ಅಶುತೋಷ್ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರೆ, ಇತ್ತ ಸ್ಟಬ್ಸ್ ಕೇವಲ 22 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ತಂಡವನ್ನು ಮತ್ತೆ ಟ್ರ್ಯಾಕ್​ಗೆ ತಂದರು. ಆ ಬಳಿಕ ಬಂದ  ವಿಪ್ರಾಜ್ ನಿಗಮ್ ಪಂದ್ಯದ ಗತಿಯನ್ನು ಬದಲಾಯಿಸಿದರು. ಈ 20 ವರ್ಷದ ಸ್ಪಿನ್ ಆಲ್‌ರೌಂಡರ್ ತಮ್ಮ ಮೊದಲ ಪಂದ್ಯದಲ್ಲೇ ಕೇವಲ 15 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ದೆಹಲಿ ತಂಡಕ್ಕೆ ಗೆಲುವಿನ ಅಸೆ ಮೂಡಿಸಿದರು. ಇತ್ತ ತನ್ನ ಗೇರ್ ಬದಲಿಸಿದ ಅಶುತೋಷ್‌ ಕೊನೆಯ 3 ಓವರ್‌ಗಳಲ್ಲಿ 39 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.

ವಾಸ್ತವವಾಗಿ 19ನೇ ಓವರ್‌ನಲ್ಲಿ ಡೆಲ್ಲಿ ತಂಡದ 9ನೇ ವಿಕೆಟ್ ಪತನವಾಯಿತು. ಅಂತಿಮವಾಗಿ ಡೆಲ್ಲಿ ತಂಡಕ್ಕೆ 9 ಎಸೆತಗಳಲ್ಲಿ 18 ರನ್‌ಗಳು ಬೇಕಾಗಿದ್ದವು. ಅಂತಹ ಪರಿಸ್ಥಿತಿಯಲ್ಲಿ, ಅಶುತೋಷ್ 19 ನೇ ಓವರ್ ಅನ್ನು ಒಂದು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಕೊನೆಗೊಳಿಸಿದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ರಿಷಭ್ ಪಂತ್ ಸ್ಟಂಪಿಂಗ್ ಅವಕಾಶವನ್ನು ತಪ್ಪಿಸಿಕೊಂಡರು. ಆ ನಂತರದ ಎಸೆತದಲ್ಲೂ ರನೌಟ್ ಕೈತಪ್ಪಿತು. ಇದರ ಲಾಭ ಪಡೆದ ಅಶುತೋಷ್ ಸ್ಟ್ರೈಕ್‌ಗೆ ಬಂದಿದಲ್ಲದೆ ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ಪಂದ್ಯವನ್ನು ಕೊನೆಗೊಳಿಸಿದರು.

 

Kishor KV

Leave a Reply

Your email address will not be published. Required fields are marked *