ಬಿಸಿಸಿಐಗೂ ಗೊತ್ತು RCB ಗತ್ತು – IPL ಫಸ್ಟ್ ಮ್ಯಾಚ್ ಬೆಂಗಳೂರೇ ಯಾಕೆ?

ಚಾಂಪಿಯನ್ಸ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗಿದ್ರೂ ಕೂಡ ಭಾರತದ ಕ್ರಿಕೆಟ್ ಅಭಿಮಾನಿಗಳು ಕಾಯ್ತಿರೋದು 18ನೇ ಸೀಸನ್ ಐಪಿಎಲ್ಗಾಗಿ. ಅದ್ರಲ್ಲೂ ಈ ಸಲ ಮೆಗಾ ಹರಾಜು ನಡೆದಿದ್ದು ಸ್ಟಾರ್ ಆಟಗಾರರೆಲ್ಲಾ ಬೇರೆ ಬೇರೆ ಟೀಮ್ಗಳನ್ನ ಸೇರಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಸೋ ಅವ್ರ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಕೂಡ ಜಾಸ್ತಿಯಾಗ್ತಿದೆ. ಇನ್ನು ಸೀಸನ್ ಬದ್ಲಾದಂತೆ ಬೆಂಗಳೂರು ತಂಡದ ಫ್ಯಾನ್ಸ್ ಕ್ರೇಜ್ ಕೂಡ ನೆಕ್ಸ್ಟ್ ಲೆವೆಲ್ಗೆ ಹೋಗಿದ್ದು ಈ ವರ್ಷವೂ ಕೂಡ ಮೊದಲ ಪಂದ್ಯದಲ್ಲೇ ಆರ್ಸಿಬಿ ಬಾಯ್ಸ್ ಅಬ್ಬರಿಸಲಿದ್ದಾರೆ. ಹೊಸ ಟೀಂ, ಹೊಸ ಕ್ಯಾಪ್ಟನ್ ಅಡಿ ಕಪ್ ಗೆಲ್ಲೋಕೆ ರೆಡಿಯಾಗಿದ್ದಾರೆ.
ಇದನ್ನೂ ಓದಿ : ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಛಾವಾ – ಮೂರೇ ಮೂರು ದಿನದಲ್ಲಿ 121 ಕೋಟಿ ರೂ ಕಲೆಕ್ಷನ್!
ತೀವ್ರ ಕುತೂಹಲ ಮೂಡಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಶೆಡ್ಯೂಲ್ ರಿಲೀಸ್ ಆಗಿದ್ದು, ಈ ಬಾರಿಯೂ 10 ತಂಡಗಳು ಭಾಗವಹಿಸಲಿವೆ. ಐಪಿಎಲ್‌ನ ಮೊದಲ ಪಂದ್ಯ ಮಾರ್ಚ್ 22, 2025 ರಂದು ನಡೆಯಲಿದ್ದು, ಆರ್ಸಿಬಿ ಹಾಗೂ ಹಾಲಿ ಚಾಂಪಿಯನ್ ಕೆಕೆಆರ್ ತಂಡಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕಣಕ್ಕಿಳಿಯಲಿವೆ. 17 ವರ್ಷಗಳ ನಂತರ ಎರಡೂ ತಂಡಗಳು ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. 65 ದಿನಗಳ ಕಾಲ ನಡೆಯುವ ಟೂರ್ನಮೆಂಟ್ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಮಾರ್ಚ್ 22 ರಿಂದ ಮೇ 18 ರವರೆಗೆ 70 ಲೀಗ್ ಪಂದ್ಯಗಳು ನಡೆಯಲಿವೆ. ಪ್ಲೇಆಫ್‌ಗಳು ಮೇ 20 ರಿಂದ ಮೇ 25 ರವರೆಗೆ ನಡೆಯಲಿವೆ. ಕಳೆದ ಬಾರಿಯ ರನ್ನರ್ ಅಪ್ ಸನ್ ರೈಸರ್ಸ್ ಹೈದ್ರಾಬಾದ್ ಮಾರ್ಚ್ 23 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಖಾಡಕ್ಕಿಳಿಯಲಿದೆ. ಮಧ್ಯಾಹ್ನ ಈ ಪಂದ್ಯ ನಡೆಯಲಿದ್ದು, ಅದೇ ದಿನ ರಾತ್ರಿಗೆ 5 ಸಲ ಚಾಂಪಿಯನ್ಗಳಾಗಿರೋ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಫೈಟ್ ಇರುತ್ತೆ
2008ರಲ್ಲಿ ಶುರುವಾಗಿರೋ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೂ 17 ಸೀಸನ್ಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ 18ನೇ ಸೀಸನ್ಗೆ ವೇದಿಕೆ ಸಿದ್ಧವಾಗಿದೆ. ಈ 17 ಸೀಸನ್ಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಇದ್ರೂ ಕೋಟಿ ಕೋಟಿ ಮನಸ್ಸನ್ನ ಗೆದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಬ್ರ್ಯಾಂಡ್ ಆಗಿ ಬೆಳೆದಿದೆ. ಬೆಂಗಳೂರು ತಂಡದ ಈ ಗತ್ತು ಬಿಸಿಸಿಐಗೂ ಗೊತ್ತಿದೆ. ಇದೇ ಕಾರಣಕ್ಕೆ ಈ ವರ್ಷವೂ ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಬೆಂಗಳೂರು ಮ್ಯಾಚ್ ಇಡಲಾಗಿದೆ. ಕಳೆದ ವರ್ಷವೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಮೊದಲ ಮ್ಯಾಚ್ ಆಡಿತ್ತು. ಇದೀಗ ಈ ವರ್ಷವೂ ಕೆಕೆಆರ್ ವಿರುದ್ಧ ಬೆಂಗಳೂರು ತಂಡವನ್ನೇ ಕಣಕ್ಕಿಳಿಸಲಾಗಿದೆ. ಇದೇ ಕ್ರೇಜ್ನಿಂದಲೇ ಬೆಂಗಳೂರು ತಂಡದ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚುತ್ತಲೇ ಇದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಬ್ರಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2023ಕ್ಕೆ ಹೋಲಿಸಿದ್ರೆ 2024ನೇ ವರ್ಷ ಬ್ರಾಂಡ್ ಮೌಲ್ಯ ಶೇಕಡಾ 13ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ 12 ಬಿಲಿಯನ್ ಡಾಲರ್ ತಲುಪಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ ರೂ.1.01 ಲಕ್ಷ ಕೋಟಿ ಆಗಿದೆ. ಐದೈದು ಸಲ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ಗೆ ಸೆಡ್ಡು ಹೊಡೆಯುವಂತೆ ಬೆಂಗಳೂರು ತಂಡ ಬ್ರಾಂಡ್ ವ್ಯಾಲ್ಯೂವನ್ನ ಹೆಚ್ಚಿಸಿಕೊಳ್ತಾನೇ ಇದೆ. ಪ್ರಸ್ತುತ ಹೆಚ್ಚಿನ ಬ್ರಾಂಡ್ ಮೌಲ್ಯ ಹೊಂದಿರುವ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದೆ. ಅದರ ಬ್ರಾಂಡ್ ಮೌಲ್ಯ ₹1034 ಕೋಟಿ ರೂ. ಗೆ ತಲುಪಿದೆ. 2ನೇ ಪ್ಲೇಸ್ನಲ್ಲಿ ಮುಂಬೈ ಇಂಡಿಯನ್ಸ್ ಇದ್ದು, ಈ ತಂಡದ ಬ್ರಾಂಡ್ ಮೌಲ್ಯ ₹1008 ಕೋಟಿ ರೂಪಾಯಿ ಇದೆ. ಬಟ್ ಒಮ್ಮೆಯೂ IPL ಟ್ರೋಫಿ ಗೆಲ್ಲದಿದ್ದರೂ RCBಯ ಬ್ರಾಂಡ್ ಮೌಲ್ಯ 991 ಕೋಟಿ ರೂ. ಗೆ ತಲುಪಿದೆ. ಬಹುಶಃ ಈ ವರ್ಷ ಮೇಲಿನ ಇಬ್ಬರನ್ನೂ ಬಿಟ್ ಮಾಡಿದ್ರೂ ಅಚ್ಚರಿ ಇಲ್ಲ. ಹಾಗೇ ಕಳೆದ ಬಾರಿ ಚಾಂಪಿಯನ್ ಆಗಿದ್ದ KKR ತಂಡ ಬ್ರಾಂಡ್ ವ್ಯಾಲ್ಯೂ ಒಟ್ಟು 923 ಕೋಟಿ ರೂ ಆಗಿದೆ.