RCBಗೆ ಬರಲು ರೆಡಿ ಇದ್ರಾ ರಿಷಭ್? – ಪಂತ್ ಸೇರ್ಪಡೆಗೆ ಕೊಹ್ಲಿ ಅಡ್ಡಗಾಲು?
ರಿಷಬ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಕ್ರಿಕೆಟ್ ಅಭಿಮಾನಿಗಳಿಗೆ ಈಗ ಐಪಿಎಲ್ ಆಕ್ಷನ್ ರೂಲ್ಸ್ದೇ ಚಿಂತೆ. ಎಷ್ಟು ಆಟಗಾರರ ರೀಟೇನ್ಗೆ ಅವಕಾಶ ಸಿಗುತ್ತೆ? ಆರ್ಟಿಎಂ ಕಾರ್ಡ್ ಅಪ್ಲೈಗೆ ಈ ಸಲವೂ ಪರ್ಮಿಷನ್ ಇರುತ್ತಾ? ಸ್ಟಾರ್ ಪ್ಲೇಯರ್ಸ್ ಹರಾಜಿಗೆ ಬಂದ್ರೆ ಯಾವ ತಂಡ ಸೇರಿಕೊಳ್ಬೋದು ಹೀಗೆ. ಇದೇ ಕಾರಣಕ್ಕೆ ಫ್ರಾಂಚೈಸಿಗಳ ಮಾಲೀಕರು ಸಹ ಬಿಸಿಸಿಐ ರಿಲೀಸ್ ಮಾಡಲಿರುವ ನಿಯಮಗಳಿಗಾಗಿ ಕಾಯ್ತಿದ್ದಾರೆ. ಈಗಾಗಲೇ ಹರಾಜಿನ ಲೆಕ್ಕಾಚಾರಗಳನ್ನೂ ಕೂಡ ಆರಂಭಿಸಿದ್ದಾರೆ. ಬಟ್ ಇದೆಲ್ಲದ್ರ ನಡುವೆ ಆ ಪ್ಲೇಯರ್ ಈ ತಂಡಕ್ಕೆ ಬರ್ತಾರೆ, ಈ ಆಟಗಾರ ಮತ್ತೊಂದು ಫ್ರಾಂಚೈಸಿಗೆ ನಾಯಕ ಆಗ್ತಾನೆ ಅನ್ನೋ ಸುದ್ದಿಗಳು ಹರಿದಾಡ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಆರ್ಸಿಬಿಗೆ ಬರ್ತಾರೆ ಅನ್ನೋ ಸುದ್ದಿಯಂತೂ ಸಂಚಲನ ಸೃಷ್ಟಿಸಿದೆ. ಇದಕ್ಕೆ ಪಂತ್ ಕೂಡ ಬೆಂಕಿ ರಿಪ್ಲೈ ಕೊಟ್ಟಿದ್ದಾರೆ. ಅದು ರಿಪ್ಲೈ ಅನ್ನೋದ್ಕಿಂತ ವಾರ್ನಿಂಗ್ ಅನ್ಬೋದೇನೋ. ಅಷ್ಟಕ್ಕೂ ರಿಷಭ್ ಬೆಂಗಳೂರು ಫ್ರಾಂಚೈಸಿಗೆ ಸೇರೋ ಸುದ್ದಿ ಬಗ್ಗೆ ಸಿಟ್ಟಾಗಿರೋದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತಿರುಪತಿ ಪ್ರಸಾದ ವಿವಾದದ ಬೆನ್ನಲ್ಲೇ ಅಯೋಧ್ಯೆಯಲ್ಲಿ ಮಹತ್ವದ ನಿರ್ಧಾರ – ಏಜೆನ್ಸಿಗಳಿಂದ ತಯಾರಾಗುವ ಪ್ರಸಾದಕ್ಕೆ ನಿಷೇಧ ಹೇರಿಕೆ!
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ರಿಷಭ್ ಪಂತ್ ಸದ್ಯ ಟ್ರೆಂಡಿಂಗ್ ಹಿರೋ. ಪ್ರಸ್ತುತ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭಾರತದ ಪರ ಸ್ಟಾರ್ ಆಟಗಾರರಾಗಿದ್ದಾರೆ.ಭೀಕರ ಅಪಘಾತಕ್ಕೀಡಾಗಿ ತಿಂಗಳುಗಟ್ಟಲೆ ಬೆಡ್ ರೆಸ್ಟ್ ಮಾಡಿ ಅವ್ರು ಕಮ್ ಬ್ಯಾಕ್ ಮಾಡಿದ ರೀತಿಯೇ ಎಷ್ಟೋ ಜನ್ರಿಗೆ ಸ್ಫೂರ್ತಿ. ಸದ್ಯ ಪಂತ್ ಕಾನ್ಪುರದಲ್ಲಿ ನಡೆಯುತ್ತಿರೋ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಮ್ಮ ಬಗೆಗಿನ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಅದೂ ಕೂಡ ಆರ್ಸಿಬಿಗೆ ಸೇರ್ಪಡೆಯಾಗ್ತಾರೆ ಅನ್ನೋ ಸುದ್ದಿ ಬಗ್ಗೆ.
ಪಂತ್ ಬೆಂಗಳೂರು ಫ್ರಾಂಚೈಸಿ ಸೇರ್ಪಡೆ ಸುದ್ದಿ ವೈರಲ್!
2025ರ ಐಪಿಎಲ್ಗೆ ಬಿಸಿಸಿಐ ಇನ್ನೇನು ಕೆಲವೇ ದಿನಗಳಲ್ಲಿ ರಿಟೆನ್ಶನ್ ಪಾಲಿಸಿ ಬಿಡುಗಡೆ ಮಾಡಲಿದೆ. ಈ ಬಳಿಕ ತಂಡಗಳು ತಮ್ಮಲ್ಲಿ ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ರಿಲೀಸ್ ಮಾಡಲಿವೆ. ಇದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂಥ್ ಬಿಡುತ್ತಾರೆ ಎಂಬ ಸುದ್ದಿಗಳು ವೈರಲ್ ಆಗ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪಂತ್ ಮುಂದಿನ ಸೀಸನ್ಗೆ ಆರ್‌ಸಿಬಿ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬ ಚರ್ಚೆಗಳು ಜೋರಾಗಿವೆ.
ಪಂತ್ ಆರ್ ಸಿಬಿ ಸೇರಲು ವಿರಾಟ್ ಕೊಹ್ಲಿ ಅಡ್ಡಗಾಲು!
ಕ್ರಿಕೆಟ್ ಅಭಿಮಾನಿಯೊಬ್ಬ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ವೊಂದನ್ನ ಶೇರ್ ಮಾಡಿದ್ದು, ಅದರಲ್ಲಿ ಆರ್ಸಿಬಿಯಲ್ಲಿ ಕ್ಯಾಪ್ಟನ್ ಸ್ಥಾನ ಖಾಲಿ ಇದೆ. ಈ ಸಂಬಂಧ ಇದೇ ವಾರ ರಿಷಬ್ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್‌ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು. ಆದರೆ ಆರ್‌ಸಿಬಿ ನಿರಾಕರಣೆ ಮಾಡಿದೆ. ಆರ್ಸಿಬಿಗೆ ನಿರಾಕರಣೆಗೆ ವಿರಾಟ್ ಕೊಹ್ಲಿಯವ್ರೇ ಕಾರಣ. ಟೀಮ್ ಇಂಡಿಯಾ ಹಾಗೂ ಡೆಲ್ಲಿ ತಂಡದಲ್ಲಿ ನಡೆಯುತ್ತಿರುವ ತಂತ್ರಗಳಿಂದ ಆರ್ಸಿಬಿಗೆ ಪಂತ್ ಬರುವುದು ವಿರಾಟ್ಗೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದನು. ಇದೇ ಪೋಸ್ಟ್ ಈಗ ಪಂತ್ರ ಪಿತ್ತವನ್ನ ನೆತ್ತಿಗೇರಿಸಿದೆ.
ಇದೆಲ್ಲ ಫೇಕ್ ನ್ಯೂಸ್.. ಲಾಸ್ಟ್ ವಾರ್ನಿಂಗ್ ಎಂದು ಪಂತ್ ರಿಪ್ಲೈ!
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವಿಚಾರದಲ್ಲಿ ಫೇಕ್ ನ್ಯೂಸ್ ಹರಿದಾಡೋದು ಹೊಸದೇನೂ ಅಲ್ಲ. ಬಟ್ ನಟರೇ ಇರಲಿ, ಕ್ರಿಕೆಟರ್ಗಳೇ ಆಗಲಿ ಅದಕ್ಕೆ ರಿಪ್ಲೈ ಮಾಡೋಕೆ ಹೋಗಲ್ಲ. ತುಂಬಾ ಅತಿರೇಖಕ್ಕೆ ಹೋದಾಗ ಮಾತ್ರ ಪ್ರತಿಕ್ರಿಯೆ ನೀಡ್ತಾರೆ. ಹೀಗಾಗೇ ಪಂತ್ ಕೂಡ ತಮ್ಮ ವಿರುದ್ಧದ ಪೋಸ್ಟ್ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಅಭಿಮಾನಿ ಹಾಕಿದ್ದ ಪೋಸ್ಟ್ಗೆ ರಿಪ್ಲೈ ಮಾಡಿರೋ ಪಂತ್, ಆರ್‌ಸಿಬಿ ಸೇರಲು ಬಯಸಿದ್ದರು ಎಂದು ಹೇಳಿದ್ದ ಅಭಿಮಾನಿಗೆ ಚಳಿ ಬಿಡಿಸಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ. ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ?. ಸೆನ್ಸಬಲ್ ಯುವಕರು ತುಂಬಾ ಕೆಟ್ಟವರು. ಫೇಕ್ ನ್ಯೂಸ್ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು. ದಿನ ಇದೇ ಆದರೆ ಕೆಟ್ಟದ್ದು ಎನಿಸುತ್ತದೆ. ತಪ್ಪು ಮಾಹಿತಿಯಿಂದ ಬೇರೆ ರೀತಿಯ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಯಂಗ್ ಕ್ರಿಕೆಟರ್ ಖಡಕ್ಕಾಗೇ ಎಚ್ಚರಿಕೆ ಕೊಟ್ಟಿದ್ದಾರೆ.
ಹರಾಜಿಗೆ ಬಂದ್ರೆ ಪಂತ್ ಮೇಲೆ ಕೋಟಿ ಕೋಟಿ ಹಣ!
ಈಗಾಗ್ಲೇ ಡೆಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಡೆಲ್ಲಿ ತಂಡವನ್ನು ತೊರೆಯುತ್ತಿದ್ದಂತೆ ಪಂತ್ ಸಹ, ತಂಡವನ್ನು ತೊರೆಯುತ್ತಾರೆ ಎಂಬ ಊಹಾಪೋಹಗಳು ಎದ್ದಿವೆ. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಬಿಸಿಸಿಐ ರಿಟೇನ್ಶನ್ ಮಾಹಿತಿಯನ್ನು ರಿಲೀಸ್ ಮಾಡಿದ ಬಳಿಕ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಮಾಹಿತಿ ಸಿಗುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ರಿಷಭ್ ಪಂತ್ ಅವರನ್ನು ಡೆಲ್ಲಿ ಕೈ ಬಿಟ್ಟಿದ್ದೇ ಆದಲ್ಲಿ ಹರಾಜು ಅಂಗಳಕ್ಕೆ ಪಂತ್ ಪ್ರವೇಶಿಸಲಿದ್ದಾರೆ. ಈ ವೇಳೆ ಅವರು ಭಾರೀ ಹಣಕ್ಕೆ ಬೇರೆ ತಂಡವನ್ನು ಸೇರೋದಂತೂ ಗ್ಯಾರಂಟಿ. ಇನ್ನು ರಿಷಭ್ ಪಂತ್ರನ್ನ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಅಪಘಾತದ ಬಳಿಕ 2024 ರಲ್ಲಿ ಮತ್ತೆ ಅದೇ ತಂಡದ ಪರ ಅಖಾಡಕ್ಕೆ ಇಳಿದಿದ್ದ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕೆ ಟೀಂ ಇಂಡಿಯಾದಲ್ಲೂ ಬ್ಯಾಕ್ ಟು ಬ್ಯಾಕ್ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಆದ್ರೆ ಐಪಿಎಲ್ನಲ್ಲಿ ಫ್ರಾಂಚೈಸಿ ಬಿಡ್ತಾರೆ ಅನ್ನೋ ಸುದ್ದಿ ಪಂತ್ ಸಿಟ್ಟಿಗೆ ಕಾರಣವಾಗಿದೆ.