IPL ಹರಾಜಿಗೆ ಶಾರ್ಟ್ ಲಿಸ್ಟ್ ರಿಲೀಸ್ – 2 ಸೆಟ್.. 12 ಪ್ಲೇಯರ್ಸ್.. ಬೆಲೆ ಎಷ್ಟು?
5 ಫ್ರಾಂಚೈಸಿಗಳಿಗೆ ಕ್ಯಾಪ್ಟನ್ಸ್ ಯಾರು?

IPL ಹರಾಜಿಗೆ ಶಾರ್ಟ್ ಲಿಸ್ಟ್ ರಿಲೀಸ್ – 2 ಸೆಟ್.. 12 ಪ್ಲೇಯರ್ಸ್.. ಬೆಲೆ ಎಷ್ಟು?5 ಫ್ರಾಂಚೈಸಿಗಳಿಗೆ ಕ್ಯಾಪ್ಟನ್ಸ್ ಯಾರು?

ಐಪಿಎಲ್ ಮೆಗಾ ಆಕ್ಷನ್​ಗೆ ಇನ್ನೊಂದೇ ವಾರ ಬಾಕಿ. ನವೆಂಬರ್ 24 ಮತ್ತು ನವೆಂಬರ್ 25 ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಮಿಲಿಯನ್ ಡಾಲರ್ ಟೂರ್ನಿಗೆ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿ ಭಾಗಿಯಾಗಲು ಬರೋಬ್ಬರಿ 1,574 ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಅದ್ರಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಟಗಾರರ ಶಾರ್ಟ್​ ಲಿಸ್ಟ್ ರಿಲೀಸ್ ಮಾಡಿದ್ದಾರೆ. ಒಟ್ಟಾರೆ 574 ಆಟಗಾರರ ಅಂತಿಮ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ. ಹಾಗಾದ್ರೆ ಫೈನಲ್ಲಾಗಿ ಮೆಗಾ ಆಕ್ಷನ್​ಗೆ ಆಯ್ಕೆಯಾಗಿರೋ ಭಾರತೀಯರು ಯಾರು? ಅದ್ರಲ್ಲಿ ಸೆಟ್ 1, ಸೆಟ್ 2ನಲ್ಲಿ ಯಾರಿದ್ದಾರೆ? ಕ್ಯಾಪ್ಡ್ ಹಾಗೇ ಅನ್ ಕ್ಯಾಪ್ಡ್ ಪ್ಲೇಯರ್ಸ್ ಎಷ್ಟು ಜನ ಅನ್ನೋ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ  ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

ಇಡೀ ಕ್ರಿಕೆಟ್ ಜಗತ್ತೇ ಕಾಯ್ತಿರುವಂಥ ಹರಾಜು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಒಂದ್ಕಡೆ ಪರ್ತ್‌ನಲ್ಲಿ  ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿಯಾಗಲಿವೆ. ಮತ್ತೊಂದೆಡೆ, ಐಪಿಎಲ್ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರ ಅದೃಷ್ಟವೇ ಬದಲಾಗಲಿದೆ. ಒಂದಷ್ಟು ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನೆಲ್ಲಾ ರಿಲೀಸ್ ಮಾಡಿರೋ ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದ್ರಲ್ಲೂ ಐದು ತಂಡಗಳಿಗೆ ಕ್ಯಾಪ್ಟನ್ ಬೇಕಾಗಿರೋದ್ರಿಂದ ದಿಗ್ಗಜ ಪ್ಲೇಯರ್ಸ್ ಮೇಲೆ ಕೋಟಿ ಕೋಟಿ ಸುರಿಯೋಕೆ ರೆಡಿಯಾಗಿದ್ದಾರೆ. ಇದೀಗ ಬಿಸಿಸಿಐ ಆಟಗಾರರ ಶಾರ್ಟ್ ಲಿಸ್ಟ್ ರಿಲೀಸ್ ಮಾಡಿರೋದ್ರಿಂದ ಲೆಕ್ಕಾಚಾರಗಳೂ ಶುರುವಾಗಿವೆ.

ಎರಡು ದಿನಗಳ ಕಾಲ ಐಪಿಎಲ್ ಮೆಗಾ ಹರಾಜು ಹಬ್ಬ!

ಐಪಿಎಲ್ ಮೆಗಾ ಹರಾಜು ಎರಡು ದಿನಗಳ ಕಾಲ ಅಂದರೆ, ನವೆಂಬರ್ 23 ರ ಶನಿವಾರ ಮತ್ತು ನವೆಂಬರ್ 24 ರ ಭಾನುವಾರ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ಹರಾಜು ಆರಂಭವಾಗಲಿದೆ. ಇನ್ನು ಈ ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರರಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಹೆಸರುಗಳಿವೆ. ಈ ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿಗೆ ನಿಗದಿ ಮಾಡ್ಲಾಗಿದೆ. ಹಾಗೆಯೇ ಮಾರ್ಕ್ಯೂ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿದೇಶಿ ಆಟಗಾರರಲ್ಲಿ ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಮಿಚೆಲ್ ಸ್ಟಾರ್ಕ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋಸ್ ಬಟ್ಲರ್ ಹೆಸರು ಸೇರಿದ್ದು, ಮಿಲ್ಲರ್ ಮೂಲ ಬೆಲೆ 1.50 ಕೋಟಿ ರೂಪಾಯಿ ಫಿಕ್ಸ್ ಮಾಡಲಾಗಿದೆ.

12 ಮಂದಿ ಮಾರ್ಕ್ಯೂ ಆಟಗಾರರ ಪೈಕಿ 11 ಜನ್ರಿಗೆ 2 ಕೋಟಿ ಮೂಲಬೆಲೆ!

ಇನ್ನು ಈ ಸಲ ಎರಡು ಸೆಟ್‌ಗಳಲ್ಲಿ ಮಾರ್ಕ್ಯೂ ಆಟಗಾರರ ಹೆಸರು ಹರಾಜಿಗೆ ಬರಲಿದ್ದು, ಮೊದಲ ಸೆಟ್‌ನಲ್ಲಿ ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್ ಮತ್ತು ಮಿಚೆಲ್ ಸ್ಟಾರ್ಕ್ ಇದ್ದಾರೆ. ಎರಡನೇ ಸುತ್ತಿನಲ್ಲಿ ಯುಜ್ವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇದ್ದಾರೆ.   ಈ 12 ಆಟಗಾರರ ಪೈಕಿ ಡೇವಿಡ್ ಮಿಲ್ಲರ್ ಅವರ ಮೀಸಲು ಬೆಲೆ 1.50 ಕೋಟಿ ರೂ.ಗಳಾಗಿದ್ದರೆ ಉಳಿದ ಆಟಗಾರರ ಮೂಲ ಬೆಲೆ 2 ಕೋಟಿ ರೂಪಾಯಿ ಇದೆ.

366 ಭಾರತೀಯ ಆಟಗಾರರು.. 208 ವಿದೇಶಿ ಪ್ಲೇಯರ್ಸ್!

2025ರ ಐಪಿಎಲ್ ಸೀಸನ್​ನಲ್ಲಿ ಆಡಲು ಯಂಗ್​ಸ್ಟರ್ಸ್​​ಗೆ ಗೋಲ್ಡನ್ ಚಾನ್ಸ್ ಇದೆ. ಮೆಗಾ ಹರಾಜಿಗೆ 574 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 366 ಭಾರತೀಯ ಆಟಗಾರರಿದ್ರೆ, 208 ವಿದೇಶಿ ಆಟಗಾರರಿದ್ದಾರೆ. ಭಾರತದ 318 ಅನ್‌ಕ್ಯಾಪ್ಡ್ ಆಟಗಾರರು ಐಪಿಎಲ್ ಮೆಗಾ ಹರಾಜು ಅಖಾಡದಲ್ಲಿದ್ದಾರೆ. ಜೊತೆಗೆ 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರನ್ನು ಸೇರಿಸಲಾಗಿದೆ. 574 ಆಟಗಾರರ ಪಟ್ಟಿಯಲ್ಲಿ ಕೇವಲ 204 ಆಟಗಾರರಿಗೆ ಮಾತ್ರ ಅದೃಷ್ಟ ಒಲಿಯಲಿದೆ. ಇದರಲ್ಲಿ 70 ಸ್ಲಾಟ್‌ಗಳು ವಿದೇಶಿ ಆಟಗಾರರಿಗೆ ಇರಲಿದೆ. ಆಟಗಾರರ ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿ ಫಿಕ್ಸ್ ಮಾಡಿದ್ದು, ಈ ಮೂಲ ಬೆಲೆಯೊಂದಿಗೆ 81 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜೇಮ್ಸ್ ಆಂಡರ್ಸನ್ ಹಿರಿಯ.. ವೈಭವ್ ಸೂರ್ಯವಂಶಿ ಕಿರಿಯ!

ಇನ್ನು ಹರಾಜಿನಲ್ಲಿ ಭಾಗಿಯಾಗುವ ಅತ್ಯಂತ ಹಿರಿಯ ಆಟಗಾರ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಆಗಿದ್ದರೆ, ಅತ್ಯಂತ ಕಿರಿಯ ಆಟಗಾರ ಭಾರತದ ವೈಭವ್ ಸೂರ್ಯವಂಶಿ. ಬಿಸಿಸಿಐ ಪ್ರಕಟಿಸಿರುವ ಈ ಅಂತಿಮ ಪಟ್ಟಿಯಲ್ಲಿ 491 ನೇ ಸ್ಥಾನದಲ್ಲಿರುವ ವೈಭವ್, ಅನ್‌ಕ್ಯಾಪ್ಡ್ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಹಾರದ ಸಮಸ್ತಿಪುರದ ವೈಭವ್ ಸೂರ್ಯವಂಶಿಗೆ ಇನ್ನೂ 13 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಅವರು ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟ್ರೋಫಿಗಳನ್ನು ಆಡಿದ್ದಾರೆ. ಇತ್ತೀಚೆಗೆ ಭಾರತದ ಅಂಡರ್-19 ತಂಡಕ್ಕೂ ಆಯ್ಕೆಯಾಗಿದ್ದರು. ಜೇಮ್ಸ್ ಆಂಡರ್ಸನ್ ಗೆ 42 ವರ್ಷ ವಯಸ್ಸಾಗಿದ್ದು ಇವ್ರೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಕರ್ನಾಟಕದಿಂದ 24 ಆಟಗಾರರ ಅದೃಷ್ಟಪರೀಕ್ಷೆ!

ಇನ್ನು ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕೆ.ಎಲ್‌.ರಾಹುಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್‌ವಾಲ್‌, ಪ್ರಸಿದ್ಧ್‌ ಕೃಷ್ಣ, ಲುವ್ನಿತ್‌ ಸಿಸೋಡಿಯಾ, ಆರ್‌.ಸ್ಮರಣ್‌, ಎಲ್‌.ಆರ್‌.ಚೇತನ್‌, ಮನೋಜ್‌ ಭಾಂಡಗೆ, ಅಭಿಲಾಶ್‌ ಶೆಟ್ಟಿ, ವೈಶಾಖ್‌ ವಿಜಯ್‌ಕುಮಾರ್‌, ಪ್ರವೀಣ್‌ ದುಬೆ, ಮನ್ವಂತ್‌ ಕುಮಾರ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಹಾರ್ದಿಕ್‌ ರಾಜ್‌, ಅಭಿನವ್‌ ಮಹೋಹರ್‌, ಬಿ.ಆರ್‌.ಶರತ್‌. ಕೃಷ್ಣನ್‌ ಶ್ರೀಜಿತ್‌, ವಿದ್ವತ್‌ ಕಾವೇರಪ್ಪ, ದೀಪಕ್‌ ದೇವಾಡಿಗ, ವಿದ್ಯಾಧರ್‌ ಪಾಟೀಲ್‌, ಶುಭಾಂಗ್‌ ಹೆಗಡೆ, ಸಮರ್ಥ್‌ ನಾಗರಾಜ್‌ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಇನ್ನು ಹರಾಜಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ತಲಾ 37, ನ್ಯೂಜಿಲೆಂಡ್‌ನ 24, ದಕ್ಷಿಣ ಆಫ್ರಿಕಾದ 31, ವೆಸ್ಟ್‌ಇಂಡೀಸ್‌ನ 22, ಅಫ್ಘಾನಿಸ್ತಾನದ 18, ಬಾಂಗ್ಲಾದೇಶದ 12, ಶ್ರೀಲಂಕಾದ 19 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಹೀಗಾಗಿ ಐಪಿಎಲ್ ಆಕ್ಷನ್ ಈ ಸಲ ತುಂಬಾನೇ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಫ್ರಾಂಚೈಸಿಗಳ ಸ್ಟ್ರಾಟಜಿ ಯಾವ ರೀತಿ ಇರುತ್ತೆ ಕಾದು ನೋಡ್ಬೇಕು.

 

Shwetha M