RCB ಗೆ ಮಾಡು ಇಲ್ಲವೇ ಮಡಿ – ಪ್ಲೇ ಆಫ್ ಗೆ ಇನ್ನೂ ಚಾನ್ಸ್ ಇದ್ಯಾ?
ಐಪಿಎಲ್ ಆರಂಭ ಆದಾಗ ಆರ್‌ಸಿಬಿ ಮ್ಯಾಚ್ ಅಂದ್ರೆ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ರು. ಮ್ಯಾಚ್ ಶುರುವಾಗೋ ಗಂಟೆಗೂ ಮೊದ್ಲೇ ಮೊಬೈಲ್, ಟಿವಿ ಮುಂದೆ ಹಾಜರ್ ಆಗ್ತಿದ್ರು. ಆದ್ರೆ ಆರ್‌ಸಿಬಿ ಟೀಂ ಆಡ್ತಿರೋ ರೀತಿ ನೋಡಿ ಫ್ಯಾನ್ಸ್ಗೇ ಕ್ರೇಜೇ ಹೊರಟೋಗಿದೆ. ಭಾನುವಾರ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳಲ್ಲಿ ಮಾತ್ರ ಮೊದ್ಲಿಲ್ಲ ಜೋಶ್ ಕಾಣ್ತಾನೇ ಇಲ್ಲ. ಯಾಕಂದ್ರೆ ಈ ಸೀಸನ್ನಲ್ಲಿ ಅತ್ಯಂತ ಕಳಪೆ ಫಾರ್ಟ್ನಲ್ಲಿರೋ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿದೆ. ಹಾಗಾದ್ರೆ ಆರ್‌ಸಿಬಿ ಪ್ಲೇಆಫ್‌ಗೆ ಹೋಗೋಕೆ ಆಗಲ್ವಾ ಅಂತಾ ನಿಮಗೆ ಅನ್ನಿಸಬಹುದು. ಖಂಡಿತವಾಗಿಯೂ ಆ ಚಾನ್ಸ್ ಇದೆ. ಆದ್ರೆ ಅದಕ್ಕಿರೋದು ಒಂದೇ ದಾರಿ. ಏನದು ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಕ್ರಿಸ್ ಗೇಲ್, ಎಬಿಡಿ ಹೊಡಿಬಡಿ ಆಟಕ್ಕೂ ಸೆಡ್ಡು ಹೊಡೆದ ಎಂ.ಎಸ್ ಧೋನಿ
ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀರಸ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು, ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹಾಗಾಗಿ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಟೂರ್ನಿಯ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕೆಂದರೆ ಆರ್‌ಸಿಬಿ, ಇನ್ನುಳಿದ ಏಳೂ ಪಂದ್ಯಗಳಲ್ಲಿಯೂ ಗೆಲುವು ಪಡೆಯಬೇಕಾದ ಅಗತ್ಯವಿದೆ. ಇದರಲ್ಲಿ ಒಂದರಲ್ಲಿ ಸೋತರೂ ಆರ್‌ಸಿಬಿ ಪಾಲಿನ ನಾಕ್‌ಔಟ್ ಹಾದಿ ಕಠಿಣವಾಗಲಿದೆ. ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಬಿಟ್ಟುಕೊಟ್ಟಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಆರ್‌ಸಿಬಿ ಫೇಲ್ಯೂರ್ ಆಗಿದೆ. ಪ್ರತೀ ಪಂದ್ಯದಲ್ಲೂ ಕೂಡ ಬೌಲಿಂಗ್ ತೀರಾ ಕಳಪೆಯಾಗುತ್ತಿದೆ. ಅದ್ರಲ್ಲೂ ಆರ್ಸಿಬಿಯ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆಯಲು ಸಾಧ್ಯವಾಗದೆ ಫೇಲ್ಯೂರ್ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ಇಡೀ ಪಂದ್ಯಕ್ಕೆ ಎಫೆಕ್ಟ್ ಆಗುವಂತೆ ಮಾಡ್ತಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲೊ ಆರ್‌ಸಿಬಿ ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಲು ಸಜ್ಜಾಗಿದೆ. ಜೆರ್ಸಿ ಬದಲಾದ ಮೇಲಾದಾರೂ ಆರ್‌ಸಿಬಿ ಹಣೆಬರಹ ಬದಲಾಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೆಕೆಆರ್ ವಿರುದ್ಧ ಕೂಡ ಆಡಲ್ಲ ಎನ್ನಲಾಗಿದ್ದು, ವಿಲ್ ಜ್ಯಾಕ್ಸ್ ಮತ್ತು ಲಾಕಿ ಫರ್ಗ್ಯುಸನ್ ತಂಡದಲ್ಲಿ ಮುಂದುವರೆಯಬಹುದು. ವೈಶಾಖ್ ಅಥವಾ ಯಶ್ ದಯಾಳ್ ಬದಲಾಗಿ ಮೊಹಮ್ಮದ್ ಸಿರಾಜ್ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಅವಕಾಶ ಇದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಬ್ಯಾಟಿಂಗ್‌ನಲ್ಲಿ ಮಿಂಚಿದ ಆರ್ ಸಿಬಿ, ಬೌಲಿಂಗ್‌ನಲ್ಲಿ ಸಂಪೂರ್ಣವಾಗಿ ಲಯ ಕಳೆದುಕೊಂಡಿತ್ತು. ಕೆಕೆಆರ್ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದು, ಆರ್ ಸಿಬಿ ಬೌಲಿಂಗ್ ಸುಧಾರಣೆ ಕಾಣದಿದ್ದರೆ ಗೆಲುವು ಸಾಧಿಸುವುದು ಕನಸಾಗಲಿದೆ. ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಬಳಿಕ ಸುದೀರ್ಘ ವಿರಾಮ ಸಿಕ್ಕಿರುವ ಕಾರಣ, ಆರ್ ಸಿಬಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಉತ್ತಮ ತಯಾರಿ ಮಾಡಿಕೊಳ್ಳಬಹುದು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ 11 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ 7 ಬಾರಿ ಕೆಕೆಆರ್ ಗೆದ್ದಿದ್ದರೆ, ಆರ್ ಸಿಬಿ 4 ಬಾರಿ ಮಾತ್ರ ಗೆಲುವು ಸಾಧಿಸಿದೆ. 2019ರ ಬಳಿಕ ಆರ್‌ಸಿಬಿ ಇಲ್ಲಿ ಪಂದ್ಯವನ್ನು ಗೆದ್ದಿಲ್ಲ, ಈ ಬಾರಿಯಾದರೂ ಗೆಲ್ಲುತ್ತಾ ಎಂದು ನೋಡಬೇಕಿದೆ.
ಇನ್ನು ಶ್ರೇಯಸ್ ಅಯ್ಯುರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಈ ತಂಡ ಇಲ್ಲಿಯವರೆಗೂ ಆಡಿದ 6 ಪಂದ್ಯಗಳಲ್ಲಿ ಎರಡರಲ್ಲಿ ಸೋತಿದ್ದು ಇನ್ನುಳಿದ ನಾಲ್ಕು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಕೆಕೆಆರ್ 2 ವಿಕೆಟ್ಗಳ ಸೋಲು ಅನುಭವಿಸಿತ್ತು. ಆದರೆ, ಆರ್‌ಸಿಬಿ ತಂಡ, ಸನ್‌ರೈಸರ್ಸ್ ಹೈದರಬಾದ್ ಎದುರು 25 ರನ್‌ಗಳಿಂದ ಸೋತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಇಲ್ಲಿಯವರೆಗೂ 34 ಪಂದ್ಯಗಳಲ್ಲಿ ಮುಖಾಮುಖಿ ಕಾದಾಟ ನಡೆಸಿವೆ. ಇದರಲ್ಲಿ ಕೆಕೆಆರ್ ತಣಡ 20 ರಲ್ಲಿ ಗೆಲುವು ಪಡದಿದ್ದು, ಆರ್‌ಸಿಬಿ 14 ಪಂದ್ಯಗಳಲ್ಲಿ ಜಯಿಸಿದೆ. ಇನ್ನು ಪ್ರಸಕ್ತ ಟೂರ್ನಿಯಲ್ಲಿ ಮೊದಲ ಬಾರಿ ಕಾದಾಟದಲ್ಲಿ ಆರ್‌ಸಿಬಿ ಎದುರು ಕೆಕೆಆರ್ ಗೆಲುವು ಪಡೆದಿತ್ತು. ಇದೀಗ ವಿಶ್ವಾಸದಲ್ಲಿ ಕೆಕೆಆರ್ ಕಣಕ್ಕೆ ಇಳಿಯಲಿದೆ. ಇನ್ನು ಪಿಚ್ ರಿಪೋರ್ಟ್ ನೋಡೋದಾದ್ರೆ ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ನಡೆಯುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿ ವಿಕೆಟ್ ಆಗಿದೆ. ಈ ಪಿಚ್‌ನಲ್ಲಿ ಸರಾಸರಿ ಮೊತ್ತ 175 ರನ್‌ಗಳಾಗಿವೆ.
ಸದ್ಯ ಏಳು ಮ್ಯಾಚ್ಗಳ ಪೈಕಿ 6ರಲ್ಲಿ ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿರೋ ಆರ್‌ಸಿಬಿ ಈ ಸೀಸನ್ನಲ್ಲಿ ಫ್ಲೇ ಆಫ್ಗೆ ಎಂಟ್ರಿ ಕೊಡುತ್ತಾ? ಇಲ್ವಾ? ಅನ್ನೋದೇ ಅಭಿಮಾನಿಗಳನ್ನ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆ. -1.185 ರನ್ರೇಟ್ ಹೊಂದಿರುವ ಆರ್‌ಸಿಬಿ ಈ ಬಾರಿ ಪ್ಲೇ ಆಫ್ ತಲುಪಲ್ಲ ಅಂತಾ ಕ್ರಿಕೆಟ್ ಪಂಡಿತರು ಭವಿಷ್ಯ ನುಡೀತಾ ಇದ್ದಾರೆ. ಕೆಲ ಫ್ಯಾನ್ಸ್ ಕೂಡ ಈ ಬಾರಿಯೂ ಕಪ್ ನಮ್ದಲ್ಲ ಅಂತಾ ಫಿಕ್ಸ್ ಆಗಿದ್ದಾರೆ. ಇದನ್ನ ಹುಸಿಯಾಗಿಸೋ ಒಂದು ಚಾನ್ಸ್ ಆರ್ಸಿಬಿಗಿದೆ. ಅದೃಷ್ಟ ಬದಲಾದ್ರೆ ಆರ್ಸಿಬಿಗೆ ಫ್ಲೇ ಆಫ್ ತಲುಪೋ ಅವಕಾಶವೂ ಇದೆ. ಆರ್‌ಸಿಬಿ ಪ್ಲೇ-ಅಫ್ ತಲುಪಬೇಕು ಅಂದ್ರೆ ಮುಂದಿರೋ 7ಕ್ಕೆ 7 ಪಂದ್ಯಗಳನ್ನ ಗೆಲ್ಲಬೇಕಿದೆ. ಸದ್ಯ 1 ಪಂದ್ಯ ಗೆದ್ದಿರುವ ಆರ್‌ಸಿಬಿ ಉಳಿದ 7 ಪಂದ್ಯ ಗೆದ್ರೆ, 16 ಪಾಯಿಂಟ್ಸ್ ಕಲೆ ಹಾಕಲಿದೆ. ಆಗ ಮಾತ್ರ ಪ್ಲೇ ಆಫ್ ಪ್ರವೇಶದ ಚಾನ್ಸ್ ಸಿಗಲಿದೆ. ಕೇವಲ ಗೆಲುವು ಸಾಕಾಗಲ್ಲ.. ಭಾರೀ ಅಂತರದ ಪ್ರಚಂಡ ದಿಗ್ವಿಜಯದ ಅಗತ್ಯತೆ ತಂಡಕ್ಕಿದೆ. ಆಗ ಮಾತ್ರ ಪಾತಾಳಕ್ಕೆ ಕುಸಿದಿರೋ ರನ್ರೇಟ್ ಹೆಚ್ಚಾಗಲಿದೆ. ಆದ್ರೆ ಆರ್‌ಸಿಬಿ ಅದ್ಭುತ ಗೆಲುವು ದಾಖಲಿಸಬೇಕು ಅಂದ್ರೆ ಮೊದಲಿಗೆ ಬೌಲರ್ಗಳ ಮೇಲೆ ಪ್ರೆಶರ್ ಕಡಿಮೆ ಮಾಡಬೇಕಿದೆ. ಕಳಪೆ ಪರ್ಫಾಮೆನ್ಸ್ನಿಂದ ಕಂಗೆಟ್ಟಿರೋ ಬೌಲರ್ಸ್, ಟ್ರ್ಯಾಕ್ಗೆ ಮರಳಬೇಕು ಅಂದ್ರೆ ಬ್ಯಾಟರ್ಸ್ ಬಿಗ್ ಸ್ಕೋರ್ ಕಲೆ ಹಾಕಬೇಕು. ಮೊನ್ನೆ ಹೈದ್ರಾಬಾದ್ ವಿರುದ್ಧ ಆಡಿದ ಅಗ್ರೆಸ್ಸಿವ್ ಇಂಟೆಂಟ್ನಲ್ಲಿ ಆಡಬೇಕು. ಇದ್ರ ಸಂಪೂರ್ಣ ಜವಾಬ್ದಾರಿ ಬ್ಯಾಟರ್ಸ್ ಮೇಲೆ. ಆದ್ರೆ ಈ ಬಾರಿ ಕೊಹ್ಲಿ ಮತ್ತು ಡಿಕೆಯನ್ನ ಬಿಟ್ರೆ ಮತ್ಯಾರೂ ಫಾರ್ಮ್ನಲ್ಲಿ ಇಲ್ಲದೆ ಇರೋದೇ ದೊಡ್ಡ ತಲೆ ನೋವಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ತನ್ನ 8ನೇ ಪಂದ್ಯವನ್ನಾಡಲಿದ್ದು, ಈ ಪಂದ್ಯ ಆರ್ಸಿಬಿಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಆರ್‌ಸಿಬಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಆರ್‌ಸಿಬಿ ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತದೆ. ಅದರಂತೆ ಈ ಬಾರಿಯೂ ಆರ್‌ಸಿಬಿ ತಮ್ಮ ಪದ್ಧತಿಯನ್ನು ಮುಂದುವರೆಸುತ್ತಿದೆ. ಆರ್‌ಸಿಬಿ ತನ್ನ ಅಭಿಮಾನಿಗಳಲ್ಲಿ ಸ್ವಚ್ಛತೆ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹಸಿರು ಜೆರ್ಸಿಯನ್ನು ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಅದರಂತೆ ಕಳೆದ ಬಾರಿ ಆರ್‌ಸಿಬಿ ತನ್ನ ಈ ಅಭಿಯಾನದಡಿಯಲ್ಲಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಮುಂದಾಗಿತ್ತು. ಇದೀಗ ಆರ್‌ಸಿಬಿ ತಾನು ಕೈಗೆತ್ತಿಕೊಂಡಿದ್ದ ಕೆಲಸವನ್ನು ವರ್ಷದೊಳಗೆ ಪೂರೈಸಿದ್ದು, ತನ್ನ ಸತ್ಕಾರ್ಯದ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ. ಒಟ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲೋದೆ ಆರ್‌ಸಿಬಿ ಮುಂದಿರೋ ಬಿಗ್ಗೆಸ್ಟ್ ಚಾಲೆಂಜ್. 7 ಪಂದ್ಯಗಳ ಪೈಕಿ ಹೋಮ್ಗ್ರೌಂಡ್ನಲ್ಲಿ ಇನ್ನು 3 ಪಂದ್ಯಗಳನ್ನ ಆರ್‌ಸಿಬಿ ಆಡಲಿದೆ. ಗುಜರಾತ್, ಡೆಲ್ಲಿ, ಚೆನ್ನೈ ತಂಡಗಳ ಸವಾಲು ಎದುರಾಗಲಿದ್ದು, ಈ ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಚಿಕ್ಕ ಗ್ರೌಂಡ್ ಆಗಿರೋದ್ರಿಂದ ಡಿಫೆಂಡ್ ಮಾಡಿಕೊಳ್ಳೋದು ಕಷ್ಟದ ವಿಚಾರವೇ. ಹೀಗಾಗಿ ಸ್ಟ್ರೆಂಥ್ಗೆ ತಕ್ಕಂತೆ ಆಡಬೇಕಿದೆ. ಇನ್ನೊಂದು ಮ್ಯಾಚ್ನಲ್ಲಿ ಮುಗ್ಗರಿಸಿದ್ರೂ ಆರ್‌ಸಿಬಿ ಪ್ಲೇಆಫ್ ಕನಸನ್ನ ಕೈಬಿಡಬೇಕಿದೆ. ಈ ಸಲವೂ ಕಪ್ ನಮ್ದಲ್ಲ ಅಂತಾ ಅಭಿಮಾನಿಗಳು ಸಮಾಧಾನ ಪಟ್ಟುಕೊಳ್ಬೇಕು.