RR ಸೋಲಿಸಿದ್ದೇ RCB ಹುಡುಗ! – ಕಾವ್ಯಾ ನಿರ್ಧಾರವೇ ಪ್ಲಸ್ ಆಯ್ತಾ?
SRH Vs KKR.. ಯಾರಿಗೆ ಟ್ರೋಫಿ?

RR ಸೋಲಿಸಿದ್ದೇ RCB ಹುಡುಗ! – ಕಾವ್ಯಾ ನಿರ್ಧಾರವೇ ಪ್ಲಸ್ ಆಯ್ತಾ?SRH Vs KKR.. ಯಾರಿಗೆ ಟ್ರೋಫಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಸೋಲಿಸಿ ಕ್ವಾಲಿಫೈಯರ್ 2 ರೌಂಡ್​ಗೆ ಸೆಲೆಕ್ಟ್ ಆಗಿದ್ದ ರಾಜಸ್ಥಾನ ರಾಯಲ್ಸ್ ಕೊನೆಗೆ ಹೈದ್ರಾಬಾದ್ ವಿರುದ್ಧ ಮಂಡಿಯೂರಿದೆ. ಈ ಬಾರಿಯ ಐಪಿಎಲ್​ನ ಲೀಗ್ ಹಂತದ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ ತಂಡಗಳೇ ಇದೀಗ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಅಷ್ಟಕ್ಕೂ ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ ಎಡವಿದ್ದೇಗೆ? ಆರ್​ಸಿಬಿಯ ಹುಡುಗ ಹೈದ್ರಾಬಾದ್​ನ ಗೆಲ್ಲಿಸಿದ್ದೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯ ದಾಂಪತ್ಯದಲ್ಲಿ ಬಿರುಕು – ಹಾರ್ದಿಕ್ನ ಶೇ.70 ರಷ್ಟು ಆಸ್ತಿ ನತಾಶಾ ಪಾಲು..?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಫೈನಲ್ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಫೈಟ್ ನಡೆಸಲಿವೆ. ಟೇಬಲ್ ಟಾಪರ್​ಗಳ ನಡುವೆಯೇ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಮೇ 21 ರಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡವನ್ನು ಮಣಿಸಿ ಕೆಕೆಆರ್​ ಫೈನಲ್​ ಪ್ರವೇಶಿಸಿತ್ತು. ಇನ್ನು ಮೇ 22 ರಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿ ರಾಜಸ್ಥಾನ್ ರಾಯಲ್ಸ್ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿತ್ತು. ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಬೆಂಗಳೂರು ತಂಡವನ್ನ ಚೇಸಿಂಜ್​ನಲ್ಲಿ ಸೋಲಿಸಿದಂತೆಯೇ ಹೈದ್ರಾಬಾದ್​ನೂ ಕಟ್ಟಿ ಹಾಕೋ ಪ್ಲ್ಯಾನ್​ನಲ್ಲಿದ್ರು. ಮತ್ತೊಂದೆಡೆ ಫಸ್ಟ್ ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಕೂಡ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. 120 ರನ್​ಗಳನ್ನ ದಾಟುವಷ್ಟರಲ್ಲೇ  ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್ ಹಾಗೂ ರಾಹುಲ್ ತ್ರಿಪಾಠಿ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಇಂಥಾ ಟೈಮಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಹೆನ್ರಿಕ್ ಕ್ಲಾಸೆನ್ ಅರ್ಧಶತಕ ಬಾರಿಸಿದರು. ಇವ್ರ ನೆರವಿನಿಂದಲೇ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 172 ರನ್ ಚೇಸ್ ಮಾಡಿದ್ದ ಆರ್​ಆರ್ ಈ ಸ್ಕೋರ್​ನೂ ಈಸಿಯಾಗೇ ಚೇಸ್ ಮಾಡುತ್ತೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಬಟ್ ಅದು ಸಾಧ್ಯವಾಗ್ಲೇ ಇಲ್ಲ.

176 ರನ್​ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 42 ರನ್ ಬಾರಿಸುವ ಮೂಲಕ ಒಳ್ಳೆ ಓಪನಿಂಗ್ ನೀಡಿದ್ರು. ಈ ವೇಳೆ ಪಂದ್ಯ ಆರ್​ಆರ್ ಪರವಾಗೇ ಇತ್ತು. ಆದ್ರೆ ಆದರೆ ಆ ಬಳಿಕ ದಾಳಿಗಿಳಿದ ಹೈದ್ರಾಬಾದ್​ನ ಸ್ಪಿನ್ನರ್​ಗಳಾದ ಶಹಬಾಝ್ ಅಹ್ಮದ್ ಹಾಗೂ ಅಭಿಷೇಕ್ ಶರ್ಮಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 4 ಓವರ್​ಗಳಲ್ಲಿ ಕೇವಲ 23 ರನ್ ನೀಡಿದ ಶಹಬಾಝ್ ಅಹ್ಮದ್ 3 ವಿಕೆಟ್ ಕಬಳಿಸಿದರೆ, ಅಭಿಷೇಕ್ ಶರ್ಮಾ 4 ಓವರ್​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಕಿತ್ತರು. ಪರಿಣಾಮ ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ 4 ಓವರ್​ಗಳಲ್ಲಿ 73 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ಯುವ ದಾಂಡಿಗ ಧ್ರುವ್ ಜುರೇಲ್ 56 ರನ್ ಸಿಡಿಸಿ ಭರವಸೆ ಮೂಡಿಸಿದ್ರು. ಆದರೆ ಮತ್ತೊಂದ್ಕಡೆ ರಾಜಸ್ಥಾನ ಬ್ಯಾಟ್ಸ್​ಮನ್ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದ್ರು. ಹೀಗಾಗಿ ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 139 ರನ್​ಗಳಿಸಿ ರಾಜಸ್ಥಾನ್ ರಾಯಲ್ಸ್ 36 ರನ್​ಗಳಿಂದ  ಸೋಲೊಪ್ಪಿಕೊಳ್ಳಬೇಕಾಯ್ತು. ಈ ಮೂಲಕ ಹೈದ್ರಾಬಾದ್ ತಂಡ ಫೈನಾಲೆಗೆ ಲಗ್ಗೆ ಇಟ್ಟಿತು. ಇನ್ನು  ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಶಹಬಾಝ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಕುತೂಹಲಕಾರಿ ವಿಷ್ಯ ಅಂದ್ರೆ ಹೈದರಾಬಾದ್ ತಂಡಕ್ಕೆ ಶಹಬಾಝ್ ಅಹ್ಮದ್ ಅವರನ್ನು ನೀಡಿದ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಅಂದರೆ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ಮತ್ತು ಎಸ್​ಆರ್​ಹೆಚ್ ಆಟಗಾರರನ್ನು ಪರಸ್ಪರ ಟ್ರೇಡ್ ಮಾಡಿಕೊಂಡಿತ್ತು. ಅದ್ರಂತೆ ಶಹಬಾಝ್ ಅಹ್ಮದ್ ಅವರನ್ನು ಎಸ್​ಆರ್​ಹೆಚ್​ಗೆ ನೀಡಿ ಆರ್​ಸಿಬಿ ಫ್ರಾಂಚೈಸಿ ಎಸ್​ಆರ್​ಹೆಚ್ ತಂಡದಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ಖರೀದಿ ಮಾಡಿತ್ತು. ಇದೇ ಟ್ರೇಡ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಆಗಿರುವುದು ವಿಶೇಷ. ಯಾಕಂದ್ರೆ  ಈ ಬಾರಿಯ ಐಪಿಎಲ್​ನಲ್ಲಿ ಶಹಬಾಝ್ ಅಹ್ಮದ್ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಎಸ್​ಆರ್​ಹೆಚ್​ ಪರ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿರುವ ಶಹಬಾಝ್ ಒಟ್ಟು 207 ರನ್ ಕಲೆಹಾಕಿದ್ದಾರೆ. ಹಾಗೆಯೇ 6 ವಿಕೆಟ್ ಕಬಳಿಸಿ ತಂಡ ಗೆಲುವಿನಲ್ಲಿ ಕೊಡುಗೆ ನೀಡಿದ್ದಾರೆ. ಆದ್ರೆ ಆರ್​ಸಿಬಿ ತಂಡವು ಎಸ್​ಆರ್​ಹೆಚ್ ತಂಡದಿಂದ ಆಯ್ಕೆ ಮಾಡಿದ ಮಯಾಂಕ್ ಡಾಗರ್ ಅವರ ಕೊಡುಗೆ ಕೇವಲ 1 ವಿಕೆಟ್ ಮಾತ್ರ. ಅಂದರೆ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮಯಾಂಕ್ ಪಡೆದಿದ್ದು ಕೇವಲ ಒಂದು ವಿಕೆಟ್ ಅಷ್ಟೇ.

ಇನ್ನು ಫಿನಾಲೆ ಕ್ವಾಲಿಫೈಯರ್ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಸೋತಿದ್ದಕ್ಕೆ ತೀವ್ರ ಬೇಸರ ಮಾಡಿಕೊಂಡಿದ್ದ ತಂಡದ ಸಿಇಒ ಕಾವ್ಯಾ ಮಾರನ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುವಾಗ ಡಲ್ ಆಗಿದ್ದ ಕಾವ್ಯಾ ಬಳಿಕ ಒಂದೊಂದೇ ವಿಕೆಟ್ ಉರುಳಿದಂತೆ ಸಂಭ್ರಮದಲ್ಲಿ ತೇಲಾಡ್ತಿದ್ರು. ವಿಕೆಟ್ ಬಿದ್ದಾಗಲೆಲ್ಲಾ ಕುಣಿದು ಕುಪ್ಪಳಿಸಲಾರಂಭಿಸಿದ್ದರು. ಈ ಖುಷಿ ಕೊನೆಯ ಓವರ್​ವರೆಗೂ ಮುಂದುವರಿದಿತ್ತು. ಅಲ್ಲದೆ ಪಂದ್ಯ ಗೆಲ್ಲುತ್ತಿದ್ದಂತೆ ತಂದೆ ಬಳಿ ಓಡಿ ಹೋಗಿ ಅಪ್ಪುಗೆಯೊಂದಿಗೆ ಸಂಭ್ರಮಿಸಿದರು. ಇದೀಗ ಕಾವ್ಯ ಮಾರನ್ ಅವರ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈದ್ರಾಬಾದ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಇದೊಂದು ಮಹತ್ವದ ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ನನಗೆ ನಿಜಕ್ಕೂ ಹೆಮ್ಮೆ ತಂದಿದೆ. ಆದರೆ ಬ್ಯಾಟಿಂಗ್​ನಲ್ಲಿ ನಾವು ಎಡವಿದೆವು. ಅದರಲ್ಲೂ ಸ್ಪಿನ್ ದಾಳಿ ವಿರುದ್ಧ ಮಧ್ಯಮ ಓವರ್​ಗಳಲ್ಲಿ ನಮ್ಮಲ್ಲಿ ಉತ್ತಮ ಆಯ್ಕೆಗಳ ಕೊರತೆ ಕಂಡುಬಂದಿತು. ಅಲ್ಲಿಯೇ ನಾವು ಪಂದ್ಯ ಕಳೆದುಕೊಂಡೆವು ಎಂದು ಹೇಳಿದ್ದಾರೆ. ಸದ್ಯ ಬೆಂಗಳೂರು ತಂಡವನ್ನ ಮನೆಗೆ ಕಳಿಸಿ ಕ್ವಾಲಿಫೈಯರ್ 2ಗೆ ಸೆಲೆಕ್ಟ್ ಆಗಿದ್ದ ರಾಜಸ್ಥಾನವನ್ನ ಹೈದ್ರಾಬಾದ್ ತಂಡ ಮನೆಗೆ ಕಳಿಸಿದೆ. ಮೇ 26 ರಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಫಿನಾಲೆ ನಡೆಯಲಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

Shwetha M