IPL ಟಿಕೆಟ್ ತೋರಿಸಿದ್ರೆ ಮೆಟ್ರೋದಲ್ಲಿ ಉಚಿತ ಪ್ರಯಾಣ!
16ನೇ ಆವೃತ್ತಿಯ ಐಪಿಎಲ್ (IPL 2023) ಮಾರ್ಚ್ 31 ರಿಂದ ಆರಂಭವಾಗಿದೆ. ಐಪಿಎಲ್ ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರಲ್ಲಿ ಸೋಲಿನ ಮೂಲಕ ಅಭಿಯಾನ ಆರಂಭಿಸಿತ್ತು. ಆದರೆ, ದ್ವಿತೀಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಇದೀಗ ಸಿಎಸ್ ಕೆ ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇದೆ.
ಇದನ್ನೂ ಓದಿ: ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ – ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ!
ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರಿನಲ್ಲಿ 7 ಪಂದ್ಯಗಳನ್ನು ಆಡಲಿದೆ. ಚೆನ್ನೈನಲ್ಲಿ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗಾಗಿ ತಂಡದ ಆಡಳಿತ ಮಂಡಳಿ ಗುಡ್ ನ್ಯೂಸ್ ನೀಡಿದೆ. ಚೆನ್ನೈ ತಂಡ ಪ್ರಾಂಚೈಸಿ, ಚೆನ್ನೈನ ಮೆಟ್ರೋ ರೈಲು ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳುವವರಿಗೆ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ. ಮೆಟ್ರೋದಲ್ಲಿ ಪ್ರಯಾಣಿಸುವವರು ಐಪಿಎಲ್ ಟಿಕೆಟ್ ತೋರಿಸಿದರೆ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇನ್ನು ಚೆನ್ನೈನ ಎಲ್ಲಾ ಪಂದ್ಯದ ಟಿಕೆಟ್ ಇಲ್ಲದವರಿಗೆ ಚೆನ್ನೈ ಸೆಂಟ್ರಲ್ ಸೇರಿದಂತೆ ಐದು ಮೆಟ್ರೋ ನಿಲ್ದಾಣಗಳಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಎಲ್ಇಡಿ ಪರದೆ ಅಳವಡಿಸಲಾಗಿದೆ. ವಡಪಳನಿ ಸೆಂಟ್ರಲ್, ತಿರುಮಂಗಲಂ, ವಿಮ್ಕೋ ನಗರ, ನಂದನಂ ಸೇರಿದಂತೆ 5 ಮೆಟ್ರೋ ನಿಲ್ದಾಣಗಳಲ್ಲಿ ದೊಡ್ಡ ಎಲ್ ಇಡಿ ಪರದೆಯಲ್ಲಿ ಚೆನ್ನೈ ಪಂದ್ಯಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಗಂಟೆಗೆ 10 ರೂಪಾಯಿಯಂತೆ ಶುಲ್ಕ ಪಾವತಿಸಿ ಪಂದ್ಯ ವೀಕ್ಷಿಸಬಹುದಾಗಿದೆ.