ಆರಂಭವೂ ಅಲ್ಲೇ.. ಮುಕ್ತಾಯವೂ ಅಲ್ಲೇ – ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ!

ಆರಂಭವೂ ಅಲ್ಲೇ.. ಮುಕ್ತಾಯವೂ ಅಲ್ಲೇ – ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ!

ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯುವ ಆಟಗಾರರ ಪ್ರತಿಭೆಯನ್ನ ಕಂಡು ಕ್ರೀಡಾಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲೆಲ್ಲೂ ಐಪಿಎಲ್ ಪಂದ್ಯದ ಫೀವರ್ ಇದ್ದು, ತಮ್ಮ ನೆಚ್ಚಿನ ತಂಡಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ.

ಇದೀಗ 16ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್ಸ್‌ ಹಾಗೂ ಫೈನಲ್‌ ಪಂದ್ಯಗಳ ವೇಳಾಪಟ್ಟಿಯನ್ನು (IPL Playoffs Schedule) ಬಿಸಿಸಿಐ (BCCI) ಪ್ರಕಟಿಸಿದೆ. ಮೇ 28 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಫೈನಲ್‌ ಪಂದ್ಯ ನಡೆಯಲಿದೆ. ಮೇ 23ರಂದು ಮೊದಲ ಕ್ವಾಲಿಫೈಯರ್‌, ಮೇ 24ರಂದು ಎಲಿಮಿನೇಟರ್‌ ಪಂದ್ಯಗಳು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 26ರಂದು 2ನೇ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಮೇ 28ರಂದು ಫೈನಲ್‌ ಪಂದ್ಯ ನಡೆಯಲಿದೆ.

ಇದನ್ನೂ ಓದಿ : ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ – ಸಹೋದರಿ ಸಾರಾ ಸೇರಿದಂತೆ ಕ್ರಿಕೆಟಿಗರ ಶುಭಹಾರೈಕೆ

ಮೇ 21ಕ್ಕೆ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಅಗ್ರಸ್ಥಾನದಲ್ಲಿರುವ 4 ತಂಡಗಳು ಪ್ಲೇ ಆಫ್ಸ್‌ ಪ್ರವೇಶಿಸಲಿವೆ. ಪ್ಲೇ ಆಫ್ಸ್‌ನ ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಮೊದಲ ಹಂತದ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ 2ನೇ ಹಂತದ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ.

ಕಳೆದ ವರ್ಷವೂ 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಅಹಮದಾಬಾದ್‌ನಲ್ಲೇ ನಡೆದಿದ್ದವು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಕೋಲ್ಕತಾದಲ್ಲಿ ನಡೆದಿತ್ತು. ಈ ವರ್ಷ ಉದ್ಘಾಟನಾ ಸಮಾರಂಭ ಹಾಗೂ ಫೈನಲ್‌ ಪಂದ್ಯಕ್ಕೂ ಮೋದಿ ಕ್ರೀಡಾಂಗಣವನ್ನೇ ಬಿಸಿಸಿಐ ಆಯ್ಕೆ ಮಾಡಿದೆ.

suddiyaana