ಐಫೋನ್ ಹ್ಯಾಕ್ ಯತ್ನ ಪ್ರಕರಣ – ಸಾಕ್ಷಿ ಒದಗಿಸುವಂತೆ ಆ್ಯಪಲ್ಗೆ ಕೇಂದ್ರ ಸರ್ಕಾರದಿಂದ ನೋಟಿಸ್

ದೇಶದಾದ್ಯಂತ ಐಫೋನ್ ಹ್ಯಾಕ್ ಪಯತ್ನ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಭಾರತದ ಕೆಲ ಮುಖಂಡರ ಐಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳಾಗುತ್ತಿರಬಹುದು ಎಂಬ ಅಲರ್ಟ್ ಮೆಸೇಜ್ ಬಂದಿದೆ ಎಂದು ಕೆಲ ನಾಯಕರು ಆರೋಪ ಮಾಡಿದ್ದಾರೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಆ್ಯಪಲ್ ಕಂಪನಿಗೆ ಕೇಂದ್ರ ಸರ್ಕಾರ ನೋಟಿಸ್ ಕಳುಹಿಸಿದ್ದು, ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರವನ್ನು ಒದಗಿಸುವಂತೆ ಕೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆ್ಯಪಲ್ ಕಂಪನಿಗೆ ನೋಟಿಸ್ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿರುವುದಕ್ಕೆ ಈ ತಕ್ಷಣ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ಅಂತಿಮ ನಿರ್ಣಯವನ್ನು ತಿಳಿಸುವಂತೆ ಆ್ಯಪಲ್ ಕಂಪನಿಯ ಅಧಿಕಾರಿಗಳಿಗೆ ಸಚಿವಾಲಯ ತಿಳಿಸಿದೆ.
ಅ.31ರಂದು. ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್ ಸಂಸದ ಶಶಿ ತರೂರ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್ ಚಡ್ಡಾ (ಆ್ಯಪ್ ಪಕ್ಷದ ರಾಜ್ಯಸಭಾ ಸದಸ್ಯ) ಮತ್ತು ಐಎನ್ಸಿ ವಕ್ತಾರರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಸೋಮವಾರ ರಾತ್ರಿ ಆ್ಯಪಲ್ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿದ್ದು, ಇದು ಸರ್ಕಾರಿ ಪ್ರಾಯೋಜಕತ್ವದ ಹ್ಯಾಕಿಂಗ್ ಯತ್ನ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಯವಾಗಿ ತಿರಸ್ಕರಿಸಿದೆ.
ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿ ಸಾಕುವವರಿಗೆ ಹೊಸ ರೂಲ್ಸ್! – ಪ್ರಾಣಿಪ್ರಿಯರನ್ನು ಕೆರಳಿಸಿದ ಹೊಸ ನಿಯಮ!
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯೆ ನೀಡಿದ್ದು, ಫೋನ್ ಹ್ಯಾಕಿಂಗ್ ಬಗ್ಗೆ ಯಾರೆಲ್ಲ ರಾಜಕಾರಣಿಗಳು ಧ್ವನಿ ಎತ್ತಿದ್ದಾರೋ ಅದನ್ನು ಪರಿಗಣಿಸಿ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಎಚ್ಚರಿಕೆ ಸಂದೇಶದಲ್ಲಿ ಏನಿದೆ?
ಆ್ಯಪಲ್ ಕಂಪನಿಯು ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಿದೆ ಮತ್ತು ಇತ್ತೀಚಿನ iOS 17.1 ಅಪ್‌ಡೇಟ್‌ಗೆ ಮೊಬೈಲ್ ಅನ್ನು ಅಪ್‌ಗ್ರೇಡ್ ಮಾಡಲು ಒತ್ತಾಯಿಸಿದೆ. ಏಕೆಂದರೆ, ಅಪ್‌ಗ್ರೇಡ್ ಮಾಡದಿದ್ದರೆ, ಅದು ಭದ್ರತಾ ಲೋಪದೋಷಗಳನ್ನು ಪ್ಲಗ್ ಮಾಡುವ ಹಲವಾರು ಸೆಕ್ಯುರಿಟಿ ಪ್ಯಾಚ್‌ಗಳನ್ನು ಹೊಂದಿದ್ದು, ಐಫೋನ್ ಹ್ಯಾಕ್ಗೆ ಅನುಮತಿಸಬಹುದು ಎಂಬುದು ಎಚ್ಚರಿಕೆ ಸಂದೇಶದಲ್ಲಿದೆ.
ಆ್ಯಪಲ್ ಸ್ಪಷ್ಟನೆ ಏನು?
ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿತ ಹ್ಯಾಕಿಂಗ್ ಬೆದರಿಕೆ ನೋಟಿಫಿಕೇಶನ್ಗಳ ಬಗ್ಗೆ ಆ್ಯಪಲ್ ಕಂಪನಿ ಆರೋಪ ಮಾಡುವುದಿಲ್ಲ. ಸರ್ಕಾರ ಪ್ರಾಯೋಜಿತ ಹ್ಯಾಕರ್ಗಳು ಉತ್ತಮ ಹಣ ಮತ್ತು ಅತ್ಯಾಧುನಿಕರಾಗಿರುತ್ತಾರೆ. ಈ ಹ್ಯಾಕರ್ಗಳ ದಾಳಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಇಂತಹ ಹ್ಯಾಕರ್ಗಳನ್ನು ಪತ್ತೆಹಚ್ಚುವುದು ಸಾಮಾನ್ಯವಾಗಿ ಅಪೂರ್ಣ ಮತ್ತು ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಕೆಲವು ಆ್ಯಪಲ್ ಬೆದರಿಕೆ ನೋಟಿಫಿಕೇಶನ್ಗಳು ತಪ್ಪು ಎಚ್ಚರಿಕೆ ಸಂದೇಶಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯೂ ಇದೆ. ಬೆದರಿಕೆ ನೋಟಿಫಿಕೇಶನ್ಗಳು ಬರಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ತಮ್ಮ ನಡವಳಿಕೆಯನ್ನು ಹೊಂದಿಕೊಳ್ಳಲು ಮಾಹಿತಿ ಸಹಾಯ ಮಾಡಬಹುದು ಎಂದು ಆ್ಯಪಲ್ ಕಂಪನಿ ಹೇಳಿದೆ.
ಆ್ಯಪಲ್ ಸುಮಾರು 150 ರಾಷ್ಟ್ರಗಳಿಗೆ ಹ್ಯಾಕ್ ಆಗುವ ಅಪಾಯದಲ್ಲಿರುವ ಜನರಿಗೆ ಇದೇ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. 2021ರಲ್ಲಿ ಪೆಗಾಸೆಸ್ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫೀಚರ್ನಲ್ಲಿ ಲಾಕ್ಡೌನ್ ಮೋಡ್ ಪರಿಚಯಿಸಿತ್ತು. ಈ ಫೀಚರ್ ಹ್ಯಾಕರ್ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್ಮೆಂಟ್ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.