ಭಾರತದಲ್ಲೀಗ ಐಫೋನ್‌ 15 ಮೇನಿಯಾ! – ಫೋನ್‌ ಖರೀದಿಸಲು ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

ಭಾರತದಲ್ಲೀಗ ಐಫೋನ್‌ 15 ಮೇನಿಯಾ! – ಫೋನ್‌ ಖರೀದಿಸಲು ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

ಆ್ಯಪಲ್ ಕಂಪನಿ ಇತ್ತೀಚೆಗಷ್ಟೆ ತನ್ನ ವಂಡರ್‌ಲಸ್ಟ್ ಈವೆಂಟ್​ನಲ್ಲಿ ಐಫೋನ್ 15 ಸರಣಿಯನ್ನು ಅನಾವರಣ ಮಾಡಿತ್ತು. ಅಂದಿನಿಂದ ಕುತೂಹಲ, ನಿರೀಕ್ಷೆ ಮೂಡಿಸಿದ್ದ ಈ ಬಹುನಿರೀಕ್ಷಿತ ಐಫೋನ್‌ 15 ಮಾರುಕಟ್ಟೆಗೆ ಇಂದಿನಿಂದ (ಶುಕ್ರವಾರ) ಲಗ್ಗೆ ಇಟ್ಟಿದ್ದು, ಐಫೋನ್‌ ಪ್ರಿಯರಿಗೆ ಹಬ್ಬ ಅಂತಾನೇ ಹೇಳಬಹುದು. ಹೀಗಾಗಿ ಐಫೋನ್‌ ಪ್ರಿಯರು ಮೊಬೈಲ್‌ ಖರೀದಿಗೆ ಬೆಳ್ಳಂಬೆಳ್ಳಿಗೆ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.

ಭಾರತದಲ್ಲಿ ಆ್ಯಪಲ್ ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ ಮಾರಾಟವನ್ನು ಪ್ರಾರಂಭಿಸಿದ್ದು, ಉದ್ಘಾಟನಾ ದಿನದಂದೇ ಐಫೋನ್ ಖರೀದಿಗಾಗಿ ಗ್ರಾಹಕರು ಐಫೋನ್ ಸ್ಟೋರ್‌ಗಳಲ್ಲಿ ತಮ್ಮ ತುದಿಗಾಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳ್ಳಂಬೆಳಗ್ಗೆ ಗ್ರಾಹಕರು ದೆಹಲಿ ಹಾಗೂ ಮುಂಬೈನ ಸ್ಟೋರ್‌ಗಳಲ್ಲಿ ಕ್ಯೂ ನಿಂತಿದ್ದು, ಅದರ ಫೀಚರ್‌ಗಳನ್ನು ಅನುಭವಿಸಲು ಮೊದಲಿಗರಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಣವಿಲ್ಲದೆ ಪರದಾಡುತ್ತಿದ್ದಾರೆ ಭಾರತದ ನಂಬರ್ 1 ಟೆನ್ನಿಸ್ ತಾರೆ – ಟೆನ್ನಿಸ್ ಆಟಗಾರರಿಗೆ ಭಾರತದಲ್ಲಿ ಬೆಲೆಯೇ ಇಲ್ವಾ..?

ಮುಂಬೈನ ಬಿಕೆಸಿ ಮತ್ತು ನವದೆಹಲಿಯ ಸಾಕೇತ್‌ನಲ್ಲಿರುವ ಆ್ಯಪಲ್ ಸ್ಟೋರ್‌ಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಉದ್ದನೆಯ ಸರದಿ ಸಾಲುಗಳು ಕಂಡುಬಂದಿದೆ. ಮಳಿಗೆಗಳು ತೆರೆಯುವ ಮೊದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಆ್ಯಪಲ್ ಇಂಡಿಯಾ ಪ್ರಸ್ತುತ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮೇಲೆ 6,000 ರೂ. ಹಾಗೂ ಐಫೋನ್ 15 ಮತ್ತು 15 ಪ್ಲಸ್ ನಲ್ಲಿ 5,000 ರೂ. ರಿಯಾಯಿತಿಯನ್ನು ಪಡೆಯಲು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಹ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಲು ಸೂಚಿಸಿದೆ. ಈ ಮೂಲಕ ಐಫೋನ್ 15ನ ಬೆಲೆ 79,900 ರೂ.ಯಿಂದ 74,900 ರೂ.ಗೆ ಕಡಿಮೆಯಾಗಿದೆ. 89,900 ರೂ.ಯ ಐಫೋನ್ 15 ಪ್ಲಸ್ 84,900 ರೂ.ಗೆ ಲಭ್ಯವಿದೆ. ಐಫೋನ್ 15 ಪ್ರೊ 1,34,900 ರೂ.ಯಿಂದ 1,28,900 ರೂ.ಗೆ ಕಡಿಮೆಯಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 1,59,900 ರೂ. ಯಿಂದ 1,53.900 ರೂ. ಗೆ ರಿಯಾಯಿತಿಯಾಗಿದೆ.

ಗ್ರಾಹಕರು ಇಎಂಐ ಮಾಸಿಕ ಕಂತು ಯೋಜನೆಗಳಿಂದ ಐಫೋನ್ ಖರೀದಿ ಆಯ್ಕೆ ಮಾಡಬಹುದು. ಆಯ್ದ ಬ್ಯಾಂಕ್‌ಗಳಿಂದ 3 ಅಥವಾ 6 ತಿಂಗಳುಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಯೋಜನೆಗಳ ಆಯ್ಕೆಯನ್ನು ಸಹ ಪಡೆಯಬಹುದು. ಗ್ರಾಹಕರು ತಮ್ಮ ಆ್ಯಪಲ್ ಸಾಧನವನ್ನು ತಮ್ಮ ಪ್ರಸ್ತುತ ಸ್ಮಾರ್ಟ್‌ ಫೋನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯುವ ಟ್ರೇಡ್ ಇನ್ ಸ್ಕೀಮ್ ಲಭ್ಯವಿದೆ.

Shwetha M