ತೊಟ್ಟಿಲು ತೂಗುವಳು.. ಜಗವನ್ನೂ ಆಳುವಳು – ವಿಶ್ವ ಮಹಿಳಾ ದಿನ ಹುಟ್ಟಿಕೊಂಡಿದ್ದೇಗೆ ಗೊತ್ತಾ..?
ಮನೆ ಮನೆಯಲಿ ದೀಪ ಮುಡಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ..? ರಾಷ್ಟ್ರಕವಿ ಪುರಸ್ಕೃತ ಕನ್ನಡ ಸಾಹಿತಿ ಜಿ.ಎಸ್ ಶಿವರುದ್ರಪ್ಪರವರು ಬರೆದಿರುವ ಈ ಸಾಲುಗಳು ಅದೆಷ್ಟು ಅರ್ಥಗರ್ಭಿತ. ಹೆಣ್ಣೆಂಬ ಅದ್ಭುತವನ್ನ ಪದಗಳಲ್ಲೇ ಬಣ್ಣಿಸಿರೋ ಅವರ ಸಾಲುಗಳಿಗೆ ಮಾರುಹೋಗದವರುಂಟೇ.
ಹೌದು. ಹೆಣ್ಣೆಂಬುದೇ ಹೆಮ್ಮೆ. ಮಗುವಾಗಿ ಹುಟ್ಟಿ ಮಗಳಾಗಿ ಬೆಳೆದು ಹೆಂಡತಿಯಾಗಿ ಮತ್ತೊಂದು ಮನೆಯ ಹಣತೆ ಹಚ್ಚಿ ಅಮ್ಮನೆಂಬ ಅಮೃತಉಣಿಸಿ ಅತ್ತೆ, ಅಜ್ಜಿಯಾಗಿ ಸಂಸಾರ ನೌಕೆ ನಡೆಸುವ ಮಹಿಳೆಗೆ ಸರಿಸಾಟಿ ಯಾರು ಹೇಳಿ. ಇಂತಹ ಮಹಿಳೆಯರಿಗಾಗೇ ಇರುವ ದಿನ ಮಾರ್ಚ್ 8. ಅಂದ್ರೆ ಅಂತಾರಾಷ್ಟ್ರೀಯ ಮಹಿಳಾ ದಿನ. ಅಷ್ಟಕ್ಕೂ ಇಂಥದ್ದೊಂದು ದಿನ ಹುಟ್ಟಿಕೊಂಡಿದ್ದು ಹೇಗೆ? ಇದರ ಹಿನ್ನೆಲೆ, ಇತಿಹಾಸ ಏನು. ಇದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.
ಇದನ್ನೂ ಓದಿ : ಮಹಿಳಾ ದಿನಾಚರಣೆಗೆ ವಿಶೇಷ ಉಡುಗೊರೆ – ಬಿಎಂಟಿಸಿವತಿಯಿಂದ ಉಚಿತ ಪ್ರಯಾಣ
ಸ್ತ್ರೀ ಅಂದರೆ ಶಕ್ತಿ. ಮಹಿಳೆಯರು (Women) ಪುರುಷರಷ್ಟೇ (Men) ಸಮಾನರು. ಅವರಿಲ್ಲದ ಕ್ಷೇತ್ರವಿಲ್ಲ, ಅವರು ಮಾಡದ ಸಾಧನೆ ಇಲ್ಲ. ತೊಟ್ಟಿಲನ್ನು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. ಹೀಗೆ ಮಹಿಳೆಯರ ಸಾಧನೆ, ಕೊಡುಗೆ ಸ್ಮರಿಸಲು ಒಂದು ವಿಶೇಷ ದಿನವನ್ನು (Women’s Day) ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 8 ರಂದು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ತ್ಯಾಗ, ಪರಿಶ್ರಮ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಅಗತ್ಯತೆ, ಕೊಡುಗೆ, ಅವರಿಗೆ ಗೌರವ ಸಲ್ಲಿಸಲು ಹೀಗೆ ಹತ್ತಾರು ಕಾರಣಕ್ಕೆ ಈ ದಿನವನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಾರಂಭವಾಗಿದ್ದೇಗೆ..?
1908 ರಲ್ಲಿ ಅಮೆರಿಕದಲ್ಲಿ ನಡೆದ ಕಾರ್ಮಿಕ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಧ್ವನಿ ಎತ್ತಿದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದರು.
ಸಮ್ಮೇಳನದಲ್ಲಿ ಚರ್ಚಿತವಾದ ವಿಷಯಗಳು
ಇನ್ನು ಈ ಸಮ್ಮೇಳನದಲ್ಲಿ ಚರ್ಚಿತವಾದ ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಅಂದಿನಿಂದ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಮಹಿಳಾ ದಿನದಲ್ಲಿ ಬಣ್ಣಗಳಿಗೆ ಮಹತ್ವ
ಮಹಿಳಾ ದಿನದಂದು ವಿಶೇಷವಾಗಿ ನೇರಳೆ ಬಣ್ಣದ ಬಟ್ಟೆ ಧರಿಸುತ್ತಾರೆ. ಹಸಿರು ಬಣ್ಣವು ಭರವಸೆಯನ್ನು ಪ್ರೇರೇಪಿಸುತ್ತದೆ ಮತ್ತು ಬಿಳಿ ಬಣ್ಣ ಶುದ್ಧತೆಯ ಪ್ರತೀಕವಾಗಿದೆ. ಮಹಿಳೆಯರಿಗೆ ನ್ಯಾಯದ ಭರವಸೆಯನ್ನು ಈ ಬಣ್ಣಗಳ ಮೂಲಕ ಹೇಳಲಾಗುತ್ತದೆ. ಯುಕೆಯಲ್ಲಿನ ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟ (WSPU) 1908 ರಲ್ಲಿ ಈ ದಿನಕ್ಕಾಗಿ ಬಣ್ಣಗಳನ್ನು ರಚಿಸಿತು.
ಮಹಿಳಾ ದಿನದ ಆಚರಣೆ ಹೇಗೆ..?
ಮಹಿಳೆಯರಿಗೆ ಶುಭಾಶಯ ತಿಳಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ಕಾರ್ಯಕ್ರಮಗಳ ಆಯೋಜನೆ, ಮಹಿಳೆಯರ ಸಾಧನೆಗಳ ಕುರಿತು ವರದಿ, ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಮಹಿಳಾ ಸಬಲೀಕರಣದ ಬಗ್ಗೆ ಕಾರ್ಯಕ್ರಮ ಹೀಗೆ ಹಲವು ಮಾರ್ಗಗಳ ಮೂಲಕ ಮಹಿಳೆಯರಿಗೆ ಈ ದಿನವನ್ನು ಸಮರ್ಪಿಸಬಹುದು.
ಆಚರಣೆಯ ಮುಖ್ಯ ಉದ್ದೇಶ
ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ ಎಂದರೆ ಲಿಂಗ ಸಮಾನತೆಯನ್ನು ಎತ್ತಿಹಿಡಿಯುವುದು, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿದೆ. ಹೀಗಾಗಿ ಕೇವಲ ಮಾರ್ಚ್ 8 ಈ ದಿನ ಸೀಮಿತವಾಗದೇ ಎಲ್ಲಾ ಸಮಯದಲ್ಲೂ ಈ ದಿನ ಸಿಗುವ ಗೌರವ, ಮನ್ನಣೆ ಮಹಿಳೆಗೆ ಸಿಗಬೇಕು.