ಒಂದು ಡ್ಯಾಮ್​ನಿಂದ ಪೇಚಿಗೆ ಸಿಲುಕಿದ ಪಾಪಿ ಪಾಕ್‌ – ಭಾರತಕ್ಕೆ ಏನೆಲ್ಲಾ ಲಾಭವಾಗುತ್ತೆ ಗೊತ್ತಾ?

ಒಂದು ಡ್ಯಾಮ್​ನಿಂದ ಪೇಚಿಗೆ ಸಿಲುಕಿದ ಪಾಪಿ ಪಾಕ್‌ – ಭಾರತಕ್ಕೆ ಏನೆಲ್ಲಾ ಲಾಭವಾಗುತ್ತೆ ಗೊತ್ತಾ?

ಜಮ್ಮು-ಕಾಶ್ಮೀರದೊಳಕ್ಕೆ ಉಗ್ರರನ್ನ ಛೂ ಬಿಡೋ ಮೂಲಕ ಕಾಟ ಕೊಡೋ ಪಾಕಿಸ್ತಾನಕ್ಕೆ ಈಗ ಇದೇ ಕಾಶ್ಮೀರದಲ್ಲಿ ನಿರ್ಮಾಣವಾದ ಒಂದು ಡ್ಯಾಮ್​ನಿಂದಲೇ ಬಿಸಿ ಮುಟ್ಟಿದೆ. ಪಾಕಿಸ್ತಾನಕ್ಕೆ ರವಿ ನದಿಯ ನೀರು ಹರಿಯೋದನ್ನ ಭಾರತ ಕಂಪ್ಲೀಟ್ ಬಂದ್ ಮಾಡಿದೆ. ಇದು ಪಾಕಿಸ್ತಾನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಭಾರತಕ್ಕೆ ಏನೆಲ್ಲಾ ಲಾಭವಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಪಾಕ್‌ ಪರ ಘೋಷಣೆ ಪ್ರಕರಣ – ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

ರವಿ ನದಿಗೆ ನಿರ್ಮಿಸಿರೋ ಡ್ಯಾಮ್​ನಿಂದಾಗಿ ಪಾಕಿಸ್ತಾನವಂತೂ ಈಗ ಪೆಚ್ಚಾಗಿಬಿಟ್ಟಿದೆ. ಪಾಕಿಗಳಿಗೆ ಒಳಗೊಳಗೇ ಕುದೀತಾ ಇದೆ. ಹಾಗಂತಾ ಓಪನ್ ಪ್ರಶ್ನೆ ಮಾಡೋಕೂ ಗೊತ್ತಿಲ್ಲ. ಇಲ್ಲಿ ವಿಶ್ವಸಂಸ್ಥೆಗೆ ಹೋಗಿ ಚಾಡಿ ಹೇಳೋಕೂ ಆಗಲ್ಲ. ಯಾಕಂದ್ರೆ ವರ್ಲ್ಡ್​ ಬ್ಯಾಂಕ್​​ ಒಪ್ಪಂದದ ಪ್ರಕಾರ ರವಿ, ಸತ್ಲೇಜ್, ಬಿಯಾಸ್ ನದಿಗಳ ನೀರನ್ನ ಸಂಪೂರ್ಣವಾಗಿ ಬಳಸುವ ಹಕ್ಕು ಭಾರತಕ್ಕಿದೆ. ಈ ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯೋದನ್ನ ತಡೆದ್ರೂ ಯಾರಿಗೂ ಅದನ್ನ ಪ್ರಶ್ನೆ ಮಾಡೋಕೆ ಆಗೋದಿಲ್ಲ.

ಇಲ್ಲಿ ಇನ್ನೊಂದು ಸೂಕ್ಷ್ಮ ವಿಚಾರ ಕೂಡ ಇದೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದಿರೋ ಇಂಡಸ್ ನೀರಿನ ಒಪ್ಪಂದದ ಬಗ್ಗೆ ಜಮ್ಮು-ಕಾಶ್ಮೀರಕ್ಕೆ ಈಗಲೂ ಸಮಾಧಾನ ಇಲ್ಲ. ಇದಕ್ಕೆ ಕಾರಣ ಇಷ್ಟೇ. ಝೇಲಮ್, ಚೆನಾಬ್ ಮತ್ತು ಇಂಡಸ್ ನದಿಗಳ ನೀರನ್ನ ಪಾಕಿಸ್ತಾನಕ್ಕೆ ನಿಯೋಜನೆ ಮಾಡಿರೋದ್ರಿಂದ ಜಮ್ಮು-ಕಾಶ್ಮೀರಕ್ಕೆ ಇದ್ರ ಪ್ರಯೋಜನವೇ ಸಿಗ್ತಾ ಇಲ್ಲ. ಈ ಮೂರು ನದಿಗಳ ನೀರು ಪಾಕಿಸ್ತಾನದ ಪಾಲಾಗದೇ ಇರ್ತಿದ್ರೆ, ಜಮ್ಮು-ಕಾಶ್ಮೀರದ ಜನರಿಗೇ ಅದನ್ನ ಬಳಸಬಹುದಿತ್ತು. ಈ ವಿಚಾರವಾಗಿ ಕಾಶ್ಮೀರದ ಜನರಿಗೆ ಈಗಲೂ ನೋವಿದೆ. ಅದ್ರಲ್ಲೂ ಝೇಲಮ್ ನದಿಯಲ್ಲಂತೂ ಮಲ್ಟಿ ಪರ್ಪಸ್​ ಪ್ರಾಜೆಕ್ಟ್​​ಗಳನ್ನ ಕೈಗೊಳ್ಳಬಹುದಾಗಿತ್ತು. 20,000 ಮೆಗಾ ವ್ಯಾಟ್​ನಷ್ಟು ವಿದ್ಯುತ್​​ನ್ನ ಈ ಝೇಲಮ್ ನದಿ ನೀರಿನ ಮೂಲಕವೇ ಉತ್ಪಾದನೆ ಮಾಡಬಹುದಾಗಿತ್ತು.

ಹಾಗಿದ್ರೆ ರವಿ ನದಿ ನೀರು ಹರಿಯೋದನ್ನ ತಡೆಯೋದ್ರಿಂದ ಪಾಕಿಸ್ತಾನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಕೂಡ ಇಂಪಾರ್ಟೆಂಟ್. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ತಾ ಇದೆ. ಅದ್ರಲ್ಲೂ ಪಾಕಿಸ್ತಾನದಲ್ಲಂತೂ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಕೊರತೆ ಇದೆ. ಹಾಗಂತಾ ಭಾರತದ ಪರಿಸ್ಥಿತಿಯೇನು ಚೆನ್ನಾಗಿದೆ ಅಂತೇನಲ್ಲ. 2050ರ ವೇಳೆಗೆ ನೀರಿನ ಪ್ರಮಾಣ ಭಾರತಕ್ಕೆ ಈಗಿರೋದಕ್ಕಿಂತ ಡಬಲ್ ಬೇಕಾಗುತ್ತೆ ಅಂತಾ ಅಧ್ಯಯನಗಳ ವರದಿಯಿಂದ ಬಹಿರಂಗವಾಗಿದೆ. ಹೀಗಾಗಿ ನಮ್ಮ ನೀರಿನ ಮೂಲಗಳನ್ನ, ನದಿಗಳನ್ನ ರಕ್ಷಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹವಾಮಾನ ವೈಪರೀತ್ಯದಿಂದ ಹಿಮಾಲಯದಲ್ಲಿರೋ ಹಿಮ ಕೂಡ ವೇಗವಾಗಿ ಕರಗ್ತಾ ಇದ್ದು ಇದು ಭಾರತಕ್ಕೆ ಭಾರಿ ಆತಂಕಕಾರಿ ಸಂಗತಿ. ಕೆಲ ವರದಿಗಳ ಪ್ರಕಾರ ಮುಂದಿನ ಮೂರು ದಶಕಗಳಲ್ಲಿ ಹಿಮಾಲಯದಲ್ಲಿರೋ ಅಷ್ಟೂ ಹಿಮ ಸಂಪೂರ್ಣವಾಗಿ ಕರಗಿ ಹೋಗೋ ಸಾಧ್ಯತೆ ಇದೆ. ಹೀಗಾದಲ್ಲಿ ಹಿಮಾಲಯದಿಂದಲೇ ಹುಟ್ಟುವ ಇಂಡಸ್, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ವರ್ಷವಿಡೀ ನೀರು ಹರಿಯೋ ಬದಲು ಕೆಲ ತಿಂಗಳುಗಳಿಗಷ್ಟೇ ನೀರು ಸೀಮಿತವಾಗಬಹುದು. ಈ ಎಲ್ಲಾ ಕಾರಣಕ್ಕಾಗಿಯೇ ಭಾರತ ತನ್ನ ನೀರಿನ ಮೂಲಗಳ ರಕ್ಷಣೆ ಒಂದಷ್ಟು ಕ್ರಮಗಳನ್ನ ಕೈಗೊಳ್ತಿದೆ.

ಈಗ ರವಿ ನದಿ ನೀರನ್ನ ಪಾಕಿಸ್ತಾನಕ್ಕೆ ಹರಿಯೋದನ್ನ ತಡೆಯೋದ್ರಿಂದ ಏನೇನಾಗುತ್ತೆ ನೋಡೋಣ. ಹಿಮಾಚಲಪ್ರದೇಶದಲ್ಲಿ ಹುಟ್ಟಿ ಜಮ್ಮು-ಕಾಶ್ಮೀರವಾಗಿ ಹರಿದು ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯಕ್ಕೆ ರವಿ ನದಿ ಎಂಟ್ರಿಯಾಗುತ್ತೆ. ಅಲ್ಲಿಂದ ಲಾಹೋರ್ ಮೂಲಕ 450 ಮೈಲಿ ದೂರ ಹರಿದು ಪಾಕಿಸ್ತಾನದೊಳಗಿರೋ ಚೆನಾಬ್ ನದಿಯನ್ನ ಸೇರುತ್ತೆ. ಆದ್ರೀಗ ರವಿ ನದಿ ನೀರು ಪಾಕಿಸ್ತಾನವನ್ನ ಪ್ರವೇಶಿಸೋದು ಕಂಪ್ಲೀಟ್ ಬಂದ್ ಆಗ್ತಾ ಇರೋದ್ರಿಂದ ಅಲ್ಲಿನ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗೋದಂತೂ ಗ್ಯಾರಂಟಿ. ಹಾಗೆಯೇ ರವಿ ನದಿ ನೀರು ಇನ್ಮುಂದೆ ಪಾಕಿಸ್ತಾನದೊಳಗಿರೋ ಚನಾಬ್​​​ ನದಿಯನ್ನ ಕೂಡ ಸೇರೋದಿಲ್ಲ. ಹೀಗಾಗಿ ಚೆನಾಬ್​ ನದಿ ನೀರಿನ ಪ್ರಮಾಣ ಕೂಡ ಕಡಿಮೆಯಾಗಲಿದೆ. ಇದ್ರಿಂದ ಪಾಕಿಸ್ತಾನದ ಪ್ರಮುಖ ನದಿಗೇ ಹೊಡೆತ ಬೀಳುತ್ತೆ. ಅಂತೂ ಪಾಕಿಸ್ತಾನ ಈಗ ಎಲ್ಲಾ ರೀತಿಯಲ್ಲೂ ನರಕಯಾತನೆ ಅನುಭವಿಸ್ತಾ ಇದೆ. ಇಲ್ಲಿ ಪಾಕಿಸ್ತಾನದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಬೇಕು ಅನ್ನೋ ಉದ್ದೇಶವನ್ನಿಟ್ಟುಕೊಂಡೇ ಭಾರತ ರವಿ ನದಿ ನೀರು ಹರಿಯೋದನ್ನ ತಡೆಯುತ್ತಿಲ್ಲ. ನಮ್ಮ ಜನರ ಜೀವನಕ್ಕಾಗಿ, ಜಮ್ಮು-ಕಾಶ್ಮೀರದ ಕೃಷಿಕರ ಅನುಕೂಲಕ್ಕಾಗಿ ಡ್ಯಾಮ್ ನಿರ್ಮಿಸಲಾಗಿದೆ. ನಮಗೆ ನಮ್ಮ ದೇಶದ ಜನರ ಹಿತ ಮುಖ್ಯವಾಗಿರೋವಾಗ ಪಾಕಿಸ್ತಾನದ ಬಗ್ಗೆ ಚಿಂತೆ ಮಾಡಿಕೊಂಡು ಕುಳಿತುಕೊಳ್ಳೋಕೆ ಸಾಧ್ಯವೇ ಇಲ್ಲ ಬಿಡಿ.

Shwetha M