ಧಾರವಾಡದಲ್ಲಿ ಮೊಳಗಿತ್ತು ಕನ್ನಡದ ಕಹಳೆ – ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿ

ಧಾರವಾಡದಲ್ಲಿ ಮೊಳಗಿತ್ತು ಕನ್ನಡದ ಕಹಳೆ – ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿ

ಕರ್ನಾಟಕದ ಏಕೀಕರಣ ಎಂದಾಗ ನೆನಪಾಗುವುದೇ ವರಕವಿ ಬೇಂದ್ರೆಯವರ ಹೆಮ್ಮೆಯ ಧಾರಾವಾಡ. ಇಲ್ಲಿಯೇ ಸಾಹಿತಿಗಳ ಮೂಲಕ ಕನ್ನಡದ ಕಹಳೆ ಮೊಳಗಿದ್ದು. ನಂತರ ಬೇಂದ್ರೆಯವರು ಕನ್ನಡಕ್ಕಾಗಿ, ಕನ್ನಡತನ ಎತ್ತಿಹಿಡಿಯುವಲ್ಲಿ ಮಹತ್ತರ ಪಾತ್ರ ವಹಿಸಿದರು.

ಇದನ್ನೂ ಓದಿ: ಕರ್ನಾಟಕ ಕಟ್ಟಲು ಕೈ ಜೋಡಿಸಿದ ಬ್ರಿಟಿಷ್ ಅಧಿಕಾರಿಗಳು – ಏಕೀಕರಣದ ಕನಸನ್ನು ಬಿತ್ತುವಲ್ಲಿ ಇವರ ಪಾಲು ಇದೆ..!

1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿಗೆ ಸಂಘಟನಾತ್ಮಕ ಬೆಂಬಲ ದೊರಕಿತು. ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಕುರಿತು ಉಪನ್ಯಾಸಗಳು, ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಿದರು. 1922 ನವೆಂಬರ್‌ನಲ್ಲಿ ಜಯಕರ್ನಾಟಕ ಪತ್ರಿಕೆ ಆರಂಭವಾಯ್ತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಂಪಾದಕರಾಗಿ ಕೆಲಸ ಮಾಡಿದರು. ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಾರಥ್ಯವನ್ನು ಸಾಹಿತಿಗಳು ವಹಿಸಿಕೊಂಡಿದ್ದರು. ಇವರು ಆರಂಭಿಸಿದ ಗ್ರಂಥಕರ್ತರ ಸಮಾವೇಶ ಮುಂದೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿರ್ಮಾಣಕ್ಕೆ ನಾಂದಿಹಾಡಿತು. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆಯಿತು. ಆಗಲೇ ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ 25-12-1924ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು. ಕೊನೆಗೆ ಮುಹೂರ್ತ ಕೂಡಿ ಬಂದಿದ್ದು 1938ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ. ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ. ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

Sulekha