ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ – ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಪ್ಲ್ಯಾನ್

ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ – ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ಪ್ಲ್ಯಾನ್

ರಾಮ. ರಾಮ. ರಾಮ. ಯಾರ ಬಾಯಲ್ಲಿ ಕೇಳಿದ್ರೂ ರಾಮ. ಎಲ್ಲಿ ನೋಡಿದ್ರೂ ಮರ್ಯಾದಾ ಪುರುಷೋತ್ತಮ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಲಿರುವ ದಶರಥ ಪುತ್ರನ ಪ್ರಾಣ ಪ್ರತಿಷ್ಠೆಗಾಗಿ ಇಡೀ ರಾಷ್ಟ್ರವೇ ಕಾಯ್ತಿದೆ. ದೇಶ ವಿದೇಶಗಳಲ್ಲೂ ಸಂಭ್ರಮಾಚರಣೆ ಮಾಡಲಾಗ್ತಿದೆ. ಆದ್ರೆ ಶ್ರೀರಾಮ ಈಗ ಬರೀ ದೇವರಾಗಿ ಉಳಿದಿಲ್ಲ. ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿಯೂ ಬದಲಾಗಿದ್ದಾನೆ. ರಾಮಲಲ್ಲಾ ಮೂರ್ತಿ ಲೋಕಾರ್ಪಣೆ ದಿನದಂದು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಕರ್ನಾಟಕದಲ್ಲಿ ರಾಮನಾಮ ಜಪದ ಮೂಲಕವೇ ಕಾಂಗ್ರೆಸ್​ಗೆ ಕೌಂಟರ್ ಕೊಡಲು ತಂತ್ರಗಾರಿಕೆ ಸಿದ್ಧವಾಗಿದೆ. ಅಷ್ಟಕ್ಕೂ ಬಿಜೆಪಿ ಪ್ಲ್ಯಾನ್ ಏನು..? ಇದ್ರಿಂದ ಕಾಂಗ್ರೆಸ್ ಗೆ ಎಫೆಕ್ಟ್ ಆಗುತ್ತಾ..? ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ..? ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ರಾಮಾಯಣದಲ್ಲಿ ಲೇಪಾಕ್ಷಿ ಮಹತ್ವದ ಸ್ಥಾನ ಪಡೆದುಕೊಂಡಿರೋದ್ಯಾಕೆ? – ಜಟಾಯು ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಪಾಲಿಗೆ ಜನವರಿ 22 ಇನ್ಮುಂದೆ ಐತಿಹಾಸಿಕ ದಿನವಾಗಲಿದೆ. ಕೋಟ್ಯಂತರ ಭಕ್ತರ ಕನಸು ನನಸಾದ ಗಳಿಗೆಯನ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತೆ. ಹಾಗೇ ಅಯೋಧ್ಯೆಯ ರಾಮಮಂದಿರ ಬಿಜೆಪಿಗೆ ಬಹುದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕರ್ನಾಟಕದಲ್ಲಿ ಸೊರಗಿದ್ದ ಕಮಲಪಡೆಗೆ ರಾಮಮಂದಿರ ಬೂಸ್ಟ್ ನೀಡಲಿದೆ. ಅದಕ್ಕಾಗಿ ಸಾಲು ಸಾಲು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ಲ್ಯಾನ್! 

ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಇದೇ ದಿನವನ್ನ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಲು ಬಿಜೆಪಿ ನಾಯಕರು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.  ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ರಾಮನ ಪೂಜೆಗೆ ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದೆ. ರಾಮನ ಪ್ರತಿಮೆಗೆ ಪೂಜೆ, ಉತ್ಸವ ಮಾಡದಿದ್ರೆ ಕಾಂಗ್ರೆಸ್ ಶಾಸಕರಿಗೆ ಬಿಸಿ ಮುಟ್ಟಿಸಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ರಾಮನ ಆರಾಧನೆಗೆ ಭರ್ಜರಿ ತಯಾರಿ ನಡೆದಿದೆ. ರಾಮನ ಪ್ರತಿಮೆ, ಉತ್ಸವ, ಮೆರವಣಿಗೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಹಲವು ಬಿಜೆಪಿ ಕ್ಷೇತ್ರಗಳಲ್ಲಿ ರಾಮನ ಗೊಂಬೆ, ಪ್ರತಿಮೆ ಮೂಲಕ ಆರಾಧನೆಗೆ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೂ ಪೂಜೆ ಮಾಡಿಸಲು ತಯಾರಿ ಮಾಡಲಾಗಿದೆ.

ಹಾಗೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಮನ ಆರಾಧನೆಗೆ ಸೂಚನೆ ನೀಡಿದ್ದಾರೆ. ಹಾಗೇ ರಾಮ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಸಹಕಾರ ಕೊಡಬೇಕು. ಜನವರಿ 22ರ ಬಳಿಕ 60 ದಿನಗಳ ಅವಧಿಯಲ್ಲಿ ಕರ್ನಾಟಕದಿಂದ 35 ಸಾವಿರಕ್ಕೂ ಹೆಚ್ಚು ರಾಮ ಭಕ್ತರು ಪ್ರಯಾಣಿಸಲಿದ್ದಾರೆ.  ರಾಮಭಕ್ತರಿಗೆ ಸಮಸ್ಯೆಯಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಏನಾದರೂ ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ಕಾಂಗ್ರೆಸ್ ಹೊಣೆಯಾಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.  ಹಾಗೇ ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ರಾಜ್ಯದಲ್ಲಿ 160 ಪಿವಿಆರ್ ಚಿತ್ರಮಂದಿರದಲ್ಲಿ ನೇರಪ್ರಸಾರ ನಡೆಯಲಿದೆ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಬಿಜೆಪಿ ರಾಮಮಂದಿರ ಲೋಕಾರ್ಪಣೆಗೆ ಇಷ್ಟೊಂದು ಮಹತ್ವ ಕೊಡ್ತಿರೋದ್ರ ಹಿಂದೆ ಕಾರಣವೂ ಇದೆ.

ಕೇಸರಿ ಪಡೆ ತಂತ್ರಗಾರಿಕೆ! 

ಸದ್ಯ ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆಯಲು ಬಿಜೆಪಿ ಭರ್ಜರಿ ಐಡಿಯಾ ಮಾಡಿದೆ.  ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುತ್ತಿರುವ ಈ ವಿಶೇಷ ಮತ್ತು ಐತಿಹಾಸಿಕ ಕಾರ್ಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದರಿಂದ ಬಿಜೆಪಿಗೆ ಎರಡು ರೀತಿಯ ಪ್ರಯೋಜನಗಳು ಆಗಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಎಷ್ಟೋ ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಗೆ ಚುನಾವಣೆಗಳಲ್ಲಿ ವೋಟು ತಂದುಕೊಡುವ ಅಂಶವಾಗಿಯೇ ಉಪಯೋಗಕ್ಕೆ ಬರುತ್ತಿದೆ. ಅಯೋಧ್ಯೆಯ ರಾಮನ ಹೆಸರು ಹೇಳಿಕೊಂಡೇ ದೇಶಾದ್ಯಂತ ಹಿಂದೂ ಮತ ಬ್ಯಾಂಕ್ ಅನ್ನು ಸೃಷ್ಟಿಸಿಕೊಂಡು ಬಿಜೆಪಿ ಅದರಲ್ಲಿ ಯಶಸ್ಸು ಕೂಡ ಕಂಡಿದೆ.

Sulekha