ಬೆಂಗಳೂರಿನಲ್ಲಿ ಮಾ. 21 ರಿಂದ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ – ಜಲಮಂಡಳಿ ಆದೇಶ

ಬೆಂಗಳೂರಿನಲ್ಲಿ ಮಾ. 21 ರಿಂದ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ – ಜಲಮಂಡಳಿ ಆದೇಶ

ಈ ಬಾರಿ ಮಳೆಯ ಕೊರತೆಯಿಂದಾಗಿ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನದಿಗಳಲ್ಲಿ ಬಹುತೇಕ ನೀರು ಬತ್ತಿಹೋಗಿವೆ. ಇದರ ಎಫೆಕ್ಟ್‌ ರಾಜ್ಯ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಜಲಮಂಡಳಿ ಹೈ ಅಲರ್ಟ್‌ ಆಗಿದೆ. ನೀರು ಪೋಲಾಗದಂತೆ ಮಾಡಲು ಹಲವು ಕ್ರಮ ಕೈಗೊಂಡಿದೆ. ಇದೀಗ ನಲ್ಲಿಗಳಿಗೆ ಏರಿಯೇಟರ್‌ ಅನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕೆಂದು ತಿಳಿಸಿದೆ.

ಬೆಂಗಳೂರಿನ ಹಲವು ಕಡೆಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ, ಐಷಾರಾಮಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್‌ಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕೆಂದು ಸೂಚನೆ ನೀಡಿದೆ.

ಇದನ್ನೂ ಓದಿ: ಜೆಡಿಎಸ್ ಗೆ ಮೋಸ ಮಾಡಿತಾ ಬಿಜೆಪಿ? – ಮಂಡ್ಯಕ್ಕೆ HDK.. ಸುಮಲತಾ ಸದ್ದಡಗಿತಾ?

ಮಾರ್ಚ್‌ 21 ರಿಂದ ಮಾರ್ಚ್‌ 31 ರ ವರೆಗೆ ಸ್ವಯಂ ಪ್ರೇರಿತರಾಗಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವುದನ್ನ ಕಡ್ಡಾಯಗೊಳಿಸಲಾಗಿದೆ. 10 ದಿನಗಳಲ್ಲಿ ತಮಗೆ ಸಿಗುವ ಏರಿಯೇಟರ್‌ ಗಳನ್ನು ನಲ್ಲಿಗಳಿಗೆ ಅಳವಡಿಸಿಕೊಳ್ಳಬೇಕು. ಗಡುವಿನ ಅವಧಿಯಲ್ಲಿ ಈ ಏರಿಯೇಟರ್‌ (ವಾಟರ್‌ ಟ್ಯಾಪ್ ಮಾಸ್ಕ್‌ಗಳನ್ನು) ಅಳವಡಿಸಿಕೊಳ್ಳದೇ ಇರುವ ಕಟ್ಟಡ ಗಳಲ್ಲಿ ಜಲಮಂಡಳಿಯಿಂದ ಪರವಾನಗಿ ಹೊಂದಿರುವ ಪ್ಲಂಬರ್‌ ಗಳ ಸಹಾಯದಿಂದ ಏರಿಯೇಟರ್‌ ಗಳನ್ನು ಅಳವಡಿಸಲಾಗುವುದು ಮತ್ತು ಈ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸುವಂತೆ ಸೂಚಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಮನೆಯಲ್ಲಿ ಕೈತೊಳೆಯುವ, ಪಾತ್ರೆ ತೊಳೆಯುವ, ಶವರ್, ವಾಷ್ ಬೇಸಿನ್ ನಲ್ಲಿಗಳು ಸೇರಿದಂತೆ ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಕಡೆಗಳಲ್ಲಿ ಸಾರ್ವಜನಿಕರು ಏರಿಯೇಟರ್‌ ಗಳನ್ನು ಅಳವಡಿಸಿಕೊಳ್ಳಬೇಕು. ಈ ಉಪಕರಣ ಮಾರುಕಟ್ಟೆಯಲ್ಲಿ 60 ರೂಪಾಯಿಗಳಿಂದ ಲಭ್ಯವಿದೆ. ಇದರಿಂದ ಜನರ ಮನೆಯಲ್ಲಿ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಹಾಗೆಯೇ, ನೀರಿನ ಬಿಲ್‌ ಕೂಡಾ ಕಡಿಮೆ ಆಗುತ್ತದೆ ಎಂದರು.

Shwetha M