ಜಗತ್ತಿನಾದ್ಯಂತ ಇನ್ಸ್ಟಾಗ್ರಾಂ ಸರ್ವರ್ ಡೌನ್ – ಸಾವಿರಾರು ಬಳಕೆದಾರರಿಂದ ದೂರಿನ ಸುರಿಮಳೆ
ವಾಷಿಂಗ್ಟನ್: ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರಂ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ.
ಗುರುವಾರ ಬೆಳಗ್ಗೆ 7 ಗಂಟೆಯಿಂದ ಇನ್ಸ್ಟಾಗ್ರಾಂನಲ್ಲಿ ಲೋಪ ಕಂಡುಬಂದಿದೆ. ಸರ್ವರ್ ಸ್ಥಗಿತದಿಂದ ಸುಮಾರು 46 ಸಾವಿರಕ್ಕೂ ಅಧಿಕ ಬಳಕೆದಾರರ ಖಾತೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಅಂತಾ ಸರ್ವರ್ ಸ್ಥಗಿತ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್ ಡಿಟೆಕ್ಟರ್ ವರದಿ ಮಾಡಿದೆ.
ಇದನ್ನೂ ಓದಿ: ‘ಮೆಟಾ’ ಉದ್ಯೋಗಿಗಳ ಮೇಲೆ ಮತ್ತೆ ‘ವಜಾಸ್ತ್ರ’ – ಟರ್ಮಿನೇಟ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?
ಭಾರತ, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಇತರ ದೇಶಗಳ ಇನ್ಸ್ಟಾಗ್ರಾಂ ಬಳಕೆದಾರರಲ್ಲಿ ಶೇ.50 ರಷ್ಟು ಮಂದಿಗೆ ಸರ್ವರ್ ಕನೆಕ್ಷನ್ ಸಮಸ್ಯೆ ಕಾಣಿಸಿಕೊಂಡಿದೆ. ಶೇ.20 ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಇನ್ಸ್ಟಾಗ್ರಾಂನಲ್ಲಿ ದೋಷ ಕಾಣಿಸಿಕೊಳ್ಳುತ್ತಿದ್ದಂತೆ ಸುಮಾರು 27 ಸಾವಿರಕ್ಕೂ ಅಧಿಕ ಜನರು ವರದಿ ಮಾಡಿದ್ದಾರೆ. ಅಲ್ಲದೇ ತಮಗೆ ಉಂಟಾದ ಸಮಸ್ಯೆ ಕುರಿತು ಟ್ವಿಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ತೆರೆಯಲು ಪ್ರಯತ್ನಿಸಿದಾಗ ಪ್ಲಾಟ್‌ಫಾರ್ಮ್ ಕ್ರ್ಯಾಶ್ ಆಗುತ್ತಿದೆ. ಬಳಕೆದಾರರು ಲಾಗಿನ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪ್ರಪಂಚದ ಹಲವಾರು ಭಾಗಗಳಲ್ಲಿ ಇನ್ಸ್ಟಾಗ್ರಾಂ ಡೌನ್ ಆಗುತ್ತಿದ್ದಂತೆ, ಜನರು ಟ್ವಿಟ್ಟರ್ನಲ್ಲಿ ಮೇಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ನನ್ನ ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ ಅಥವಾ ಇನ್ಸ್ಟಾಗ್ರಾಂ ಮತ್ತೆ ಡೌನ್ ಆಗಿದೆಯಾ ಅಂತಾ ಗೊಂದಲ ಉಂಟಾಗುತ್ತಿದೆ’ ಅಂತಾ ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ‘ಧನ್ಯವಾದಗಳು ಟ್ವಿಟರ್ ಇನ್ಸ್ಟಾಗ್ರಾಂ ಅನ್ನು ಮತ್ತೆ ಬ್ಯಾನ್ ಮಾಡಿದ್ದಕ್ಕೆ’ ಅಂತಾ ವ್ಯಂಗ್ಯವಾಡಿದ್ದಾರೆ.
ಬುಧವಾರ ಕೂಡ ಇನ್ಸ್ಟಾಗ್ರಾಂ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಸಾವಿರಾರು ಬಳಕೆದಾರರು ಪರದಾಡುವಂತೆ ಆಗಿತ್ತು ಎಂದು ವರದಿಯಾಗಿದೆ.