ಶ್ರೀಲಂಕಾ ವಿರುದ್ಧ ಟಿ20ಐ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಟೀಂ IND

ಶ್ರೀಲಂಕಾ ವಿರುದ್ಧ ಟಿ20ಐ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಟೀಂ IND

ನಾಯಕಿ ಹರ್ಮನ್‌ಪ್ರೀತ್‌ ಕೌರ್  ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಎದುರಾಳಿ ಶ್ರೀಲಂಕಾ ತಂಡವನ್ನು 15 ರನ್‌ಗಳಿಂದ ಸೋಲಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಟೀಮ್ ಇಂಡಿಯಾ  ತನ್ನ ಪಾಲಿನ 20 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಕೇವಲ 160 ರನ್ ಗಳಿಸಲು ಸಾಧ್ಯವಾಯಿತು. ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ, ಪ್ರವಾಸಿ ಶ್ರೀಲಂಕಾ ತಂಡ ನಿರಾಶೆಯೊಂದಿಗೆ ಭಾರತದ ಪ್ರವಾಸವನ್ನು ಮುಗಿಸಿತು.

ಈ ಪಂದ್ಯದಲ್ಲಿ ಟಾಸ್ ಸೋತ ನಂತರ ಮೊದಲು ಬ್ಯಾಟ್‌ ಮಾಡುವಂತಾದ ಭಾರತದ ಪರ ಶಫಾಲಿ ವರ್ಮಾ ಕೇವಲ ಐದು ರನ್‌ಗಳಿಗೆ ಔಟಾದರು. ಗುಣಲನ್ ಕಮಲಿನಿ 12 ರನ್ ಮತ್ತು ಹರ್ಲೀನ್ ಡಿಯೋಲ್ 13 ರನ್ ಗಳಿಸಿದರು. ಆದಾಗ್ಯೂ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಇನಿಂಗ್ಸ್ ಆಡಿದರು. ಅವರು ಆಡಿದ 43 ಎಸೆತಗಳಲ್ಲಿ 68 ರನ್ ಗಳಿಸಿ ತಂಡವನ್ನು ಸ್ಥಿರಗೊಳಿಸಿದರು. ಅಮನ್‌ಜೋತ್ ಕೌರ್ 21 ರನ್ ಗಳಿಸಿದರೆ, ಅರುಂಧತಿ ರೆಡ್ಡಿ 23 ರನ್ ಗಳಿಸಿ ಭಾರತವನ್ನು 175ಕ್ಕೆ ಕೊಂಡೊಯ್ದರು. ಶ್ರೀಲಂಕಾ ಪರ ರಶ್ಮಿಕಾ ಸೆವ್ವಂಡಿ, ಚಾಮರಿ ಅಟಪಟ್ಟು ಮತ್ತು ಕವಿಶಾ ದಿಲ್ಹಾರಿ ತಲಾ ಎರಡು ವಿಕೆಟ್ ಪಡೆದರೆ, ನಿಮ್ಶಾ ಮೀಪಗೆ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ವಾಹನ ಸವಾರರಿಗೆ ನ್ಯೂ ಇಯರ್ ಎಫೆಕ್ಟ್ – ಇಂದು ಬೆಂಗಳೂರಿನ ಈ ರಸ್ತೆ, ಪ್ಲೈ ಓವರ್ ಬಂದ್

176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಕಳಪೆ ಆರಂಭವನ್ನು ಕಂಡಿತು. ಭಾರತದ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ದಾಳಿ ನಡೆಸಿ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸುವುದನ್ನು ತಡೆದರು. ಹಾಸಿನಿ ಪೆರೆರಾ 65 ಮತ್ತು ಇಮೇಶಾ ದುಲಾನಿ 50 ರನ್ ಗಳಿಸಿದರು, ಆದರೆ ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಶ್ರೀಲಂಕಾದ ಇಡೀ ತಂಡವು ಕೇವಲ 160 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು ಮತ್ತು ಭಾರತವು ಪಂದ್ಯವನ್ನು 15 ರನ್‌ಗಳಿಂದ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಭಾರತವು ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿತು.

ಟೀಮ್ ಇಂಡಿಯಾ 5-0 ಅಂತರದಲ್ಲಿ ಟಿ20ಐ ಸರಣಿಯನ್ನು ಗೆದ್ದಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 2024 ರಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿಯನ್ನು 5-0 ಅಂತರದಲ್ಲಿ ಗೆದ್ದಿತ್ತು. ಇದಲ್ಲದೆ, ಇದು ಶ್ರೀಲಂಕಾ ವಿರುದ್ಧ ಭಾರತ ತಂಡದ 25ನೇ ಟಿ20ಐ ಗೆಲುವು.

Kishor KV