ದ.ಆಫ್ರಿಕಾ ಸದ್ದಡಗಿಸಿದ RCB ಕ್ವೀನ್ಸ್ – ಸ್ಮೃತಿ ಸೆಂಚುರಿ.. ಆಶಾ ಆರ್ಭಟ
143 ರನ್‌ ಗಳ ಥ್ರಿಲ್ಲರ್ ವಿಕ್ಟರಿ

ದ.ಆಫ್ರಿಕಾ ಸದ್ದಡಗಿಸಿದ RCB ಕ್ವೀನ್ಸ್ – ಸ್ಮೃತಿ ಸೆಂಚುರಿ.. ಆಶಾ ಆರ್ಭಟ143 ರನ್‌ ಗಳ ಥ್ರಿಲ್ಲರ್ ವಿಕ್ಟರಿ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಮ್ಯಾಚ್ ನಡೀತಿದೆ ಅಂದ್ರೆ ಅಲ್ಲಿ ರನ್ ಮಳೆ ಹರಿಯೋದ್ರಲ್ಲೇ ಡೌಟೇ ಇಲ್ಲ. ಅದು ಐಪಿಎಲ್ಲೇ ಆಗಿರ್ಲಿ ಅಥವಾ ಇಂಟರ್​ನ್ಯಾಷನಲ್ ಪಂದ್ಯವೇ ಆಗಿರ್ಲಿ. ಅದ್ರಲ್ಲೂ ನಮ್ಮ ಆರ್​ಸಿಬಿ ಟೀಮ್​ನಲ್ಲಿ ಆಡೋ ಪ್ಲೇಯರ್ಸ್​ಗೆ ಈ ಕ್ರೀಡಾಂಗಣ ಅಂದ್ರೆ ತುಂಬಾನೇ ಸ್ಪೆಷಲ್. ಇದೀಗ ಇದೇ ನೆಲದಲ್ಲಿ ಆರ್​ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ಟೀಂ ಇಂಡಿಯಾ ಪರ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಬೌಲಿಂಗ್​ನಲ್ಲೂ ಕೂಡ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಡಗಿಯೇ ಜಾದೂ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದೇಗೆ? ಆರ್​ಸಿಬಿ ಆಟಗಾರ್ತಿಯರ ಆರ್ಭಟ ಹೇಗಿತ್ತು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಟೀಂ ಇಂಡಿಯಾದ ಲಕ್ಕಿ ಗರ್ಲ್ –  ಕ್ರಿಕೆಟ್ ಲೋಕದ ಮಾಸ್ಟರ್ ಮೈಂಡ್

ಒಂದ್ಕಡೆ ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪುರುಷರ ತಂಡ ಸೋಲೇ ಇಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ. ಇದೀಗ ಸೂಪರ್ 8 ಸುತ್ತಿನಲ್ಲೂ ಅದ್ಭುತ ಪ್ರದರ್ಶನದ ಮೂಲಕ ಚಾಂಪಿಯನ್ ಆಗೋ ಹುಮ್ಮಸ್ಸಿನಲ್ಲಿದೆ. ಮತ್ತೊಂದ್ಕಡೆ ಮಹಿಳಾ ತಂಡ ಕೂಡ ತಾವೇನು ಕಮ್ಮಿ ಅನ್ನೋ ರೀತಿ ಅಮೋಘ ಪ್ರದರ್ಶನ ನೀಡ್ತಿದೆ. ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ವಿರುದ್ಧ ನಡೆದ ಐಸಿಸಿ ಚಾಂಪಿಯನ್​ಶಿಪ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಭರ್ಜರಿ 143 ರನ್​ಗಳ ಅಂತರದಿಂದ ಮೊದಲ ಪಂದ್ಯವನ್ನ ಗೆದ್ದು ಬೀಗಿದೆ. ಅದ್ರಲ್ಲೂ ಟೀಂ ಇಂಡಿಯಾ ಮಹಿಳಾ ತಂಡದ ವೈಸ್ ಕ್ಯಾಪ್ಟನ್, ಆರ್​ಸಿಬಿ ಟೀಂ ನಾಯಕಿ ಸ್ಮೃತಿ ಮಂದಾನ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಜೊತೆಗೆ ಆರ್​ಸಿಬಿಯ ಬೌಲರ್ ಆಶಾ ಶೋಭನಾ ಸೌತ್ ಆಫ್ರಿಕಾ ತಂಡದ ನಾಲ್ಕು ವಿಕೆಟ್ ಕಿತ್ತು ಶಾಕ್ ಕೊಟ್ಟಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಅದ್ರಂತೆ ಓಪನರ್ ಆಗಿ ಕ್ರೀಸ್​​ಗೆ ಇಳಿದ ಸ್ಮೃತಿ ಮಂದನಾ ಹಾಗೂ ಶಫಾಲಿ ವರ್ಮಾ ಜೋಡಿಗೆ ಆರಂಭದಲ್ಲೇ ಆಘಾತ ಎದುರಾಯ್ತು. 15 ರನ್ ಇರುವಾಗಲೇ ಶಫಾಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಬಳಿಕ ಬಂದ ಹೇಮಾಲತಾ ಕೂಡ 12 ರನ್​ಗೆ ಔಟ್ ಆದರು. ನಾಯಕಿ ಹರ್ಮನ್​ಪ್ರೀತ್ ಕೌರ್ 10 ರನ್, ರೋಡ್ರಿಗಸ್ 17, ರಿಚಾ ಘೋಷ್ 3 ರನ್​ಗೆ ಆಟ ಮುಗಿಸಿದರು. ಬಂದಷ್ಟೇ ವೇಗದಲ್ಲಿ ಮಹಿಳಾ ಆಟಗಾರ್ತಿಯರು ಪೆವಿಲಿಯನ್ ಸೇರಿದರು. ಆದರೆ ಇನ್ನೊಂದು ಕಡೆ ಕ್ರೀಸ್ ಕಚ್ಚಿ ನಿಂತಿದ್ದ ಸ್ಮೃತಿ ಮಂದನಾ ಮಾತ್ರ ಜವಾಬ್ದಾರಿಯುವ ಆಟವಾಡಿದ್ರು. ಭಾರತ ತಂಡಕ್ಕೆ ಆಸರೆಯಾಗಿ ನಿಂತು ಸೌತ್ ಆಫ್ರಿಕಾ ಬೌಲರ್​ಗಳನ್ನ ಬೆಂಡೆತ್ತಿದ್ರು. ಭಾರತದ ಪರ ದೀಪ್ತಿ ಶರ್ಮಾ 37, ಪೂಜಾ 31 ರನ್​ಗಳೊಂದಿಗೆ ಬ್ಯಾಟಿಂಗ್ ಮಾಡಿ ಸ್ಮೃತಿ ಮಂದನಾಗೆ ಉತ್ತಮ ಸಾಥ್ ನೀಡಿದರು. ಈ ಮೂಲಕ ಆರಂಭಿಕವಾಗಿ ಬ್ಯಾಟಿಂಗ್ ಮಾಡಲು ಬಂದಿದ್ದ ಸ್ಮೃತಿ ಮಂದನಾ 46ನೇ ಓವರ್​​ವರೆಗೆ ಬ್ಯಾಟಿಂಗ್ ಮಾಡಿ ಭರ್ಜರಿ ಶತಕ ಸಿಡಿಸಿದ್ರು. 127 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 117 ರನ್​ ಬಾರಿಸಿ ದಾಖಲೆ ಬರೆದ್ರು. ಈ ಸೆಂಚುರಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7,000 ರನ್ ಪೂರೈಸಿದ ದಾಖಲೆಗೆ ಪಾತ್ರರಾದರು. ಈ ಮೂಲಕ ಭಾರತ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 265 ರನ್​ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಭಾರತ ನೀಡಿದ್ದ ಟಾರ್ಗೆಟ್ ಬೆನ್ನು ಹತ್ತಿದ್ದ ಸೌತ್ ಆಫ್ರಿಕಾ ಪರ ಯಾರೊಬ್ಬರೂ ಕೂಡ ಉತ್ತಮ ಸ್ಕೋರ್ ಮಾಡೋಕೆ ಆಗ್ಲಿಲ್ಲ. 266ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ರೇಣುಕಾ ಸಿಂಗ್ ಮೊದಲ ಓವರ್‌ನಲ್ಲಿ ಶಾಕ್ ನೀಡಿದರು. ನಾಯಕಿ ಲಾರಾ ವೊಲ್ವಾರ್ಡ್ಟ್ ವಿಕೆಟ್​ ಪಡೆದರು. ನಂತರ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಬೌಲಿಂಗ್‌ನಲ್ಲಿ ಕ್ರಮವಾಗಿ ತಜ್ಮಿನ್ ಬ್ರಿಟ್ಸ್ ಮತ್ತು ಅನ್ನೆಕೆ ಬಾಷ್​ರ ವಿಕೆಟ್ ಪಡೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಸ್ಕೋರ್ 10.1 ಓವರ್‌ಗಳಲ್ಲಿ 33ಕ್ಕೆ 3 ವಿಕೆಟ್​ ಕಳೆದುಕೊಂಡಿತು. ಆರ್​ಸಿಬಿ ಪರ ಆಡುವ ಶೋಭನಾ ತನ್ನ ಸ್ಪಿನ್‌ ಮಾಂತ್ರಿಕತೆಯಿಂದ ಸೌತ್ ಆಫ್ರಿಕಾದ ಬ್ಯಾಟರ್​​ಗಳಿಗೆ ದುಸ್ವಪ್ನವಾಗಿ ಕಾಡಿದ್ರು. ಶೋಭನಾ 8.4 ಓವರ್‌ಗಳಲ್ಲಿ 21ರನ್​ ನೀಡಿ ನಾಲ್ಕು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 6 ಓವರ್​ಗಳಲ್ಲಿ 10 ರನ್​ ನೀಡಿ 2 ವಿಕೆಟ್ ಪಡೆದರು. ರಾಧಾ ಯಾದವ್, ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ತಲಾ ಒಂದು ವಿಕೆಟ್ ಪಡೆದರು. ಭಾರತದ ಬೌಲರ್ಸ್ ಆರ್ಭಟದ ಮುಂದೆ ಸೌತ್ ಆಫ್ರಿಕಾ ತಂಡದ ಪರ ಸುನೆ ಲೂಸ್ ಸಿಡಿಸಿದ 33 ರನ್​ಗಳೇ ವೈಯಕ್ತಿಕ ಅಧಿಕ ರನ್ ಆಯ್ತು.. ಹೀಗಾಗಿ 37.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ಆಫ್ರಿಕಾ ತಂಡ ಕೇವಲ 122 ರನ್ ಮಾತ್ರ ಗಳಿಸಿ ಭಾರತಕ್ಕೆ ತಲೆ ಬಾಗಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತು.

ಅಸಲಿಗೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲೋಕೆ ಪ್ರಮುಖ ಕಾರಣವೇ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನ ಹಾಗೇ ಸ್ಪಿನ್ನರ್ ಆಶಾ ಶೋಭನಾ. ಒಂದ್ಕಡೆ ಸ್ಮೃತಿ ಬ್ಯಾಟಿಂಗ್ ಸ್ಟ್ರೆಂತ್ ಆಗಿ ನಿಂತು ಸೆಂಚುರಿ ಬಾರಿಸಿದ್ರೆ ಮತ್ತೊಂದ್ಕಡೆ ಆಶಾ ಅವ್ರ ಮಾಂತ್ರಿಕ ಬೌಲಿಂಗ್‌ ದಾಳಿ ನಡೆಸಿದ್ರು. ಸ್ಮೃತಿ ಮಂದಾನ ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ಬಾರಿಸಿದ್ದು, ಭಾರತದ ನೆಲದಲ್ಲಿ ಸಿಡಿಸಿದ ಮೊದಲ ಅಂತರಾಷ್ಟ್ರೀಯ ಶತಕ ಇದಾಗಿದೆ. ಅವರು 2013 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಧಾನ ಏಕದಿನ ಕ್ರಿಕೆಟ್​ನಲ್ಲಿ 5 ಶತಕಗಳನ್ನು ಸಿಡಿಸಿರುವ ಪ್ರಸ್ತುತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಮೊದಲ ಸ್ಥಾನದಲ್ಲಿದ್ದು, ತಮ್ಮ ಏಕದಿನ ವೃತ್ತಿಜೀವನದಲ್ಲಿ ಒಟ್ಟು 7 ಶತಕಗಳನ್ನು ಗಳಿಸಿದ್ದಾರೆ. ಮಿಥಾಲಿ ರಾಜ್ 10,868 ರನ್​ಗಳ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಇನ್ನು ಭಾರತ ತಂಡದಲ್ಲಿ ಆಡುತ್ತಿರುವ ಸ್ಮೃತಿ ಮಂದಾನ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಕ್ಯಾಪ್ಟನ್ ಆಗಿದ್ದಾರೆ. ಆರ್​ಸಿಬಿ ಟೀಂ 2024ರ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದೂ ಕೂಡ ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವ್ರ ಹುಟ್ಟುಹಬ್ಬ ಮಾರ್ಚ್ 17ರಂದೇ ಕಪ್ ಎತ್ತಿ ಹಿಡಿದಿದ್ರು. ಆರ್​ಸಿಬಿ ಪುರುಷರ ತಂಡಕ್ಕೆ ಕನಸಿನ ಕೂಸಾಗಿರೋ ಟ್ರೋಫಿಯನ್ನ ಮಹಿಳಾ ಪ್ರೀಮಿಯರ್ ಲೀಗ್ ಶುರುವಾದ ಎರಡೇ ವರ್ಷಕ್ಕೆ ನನಸು ಮಾಡಿದ್ರು. ಚಾಂಪಿಯನ್ ಆಗೋ ಮೂಲಕ ಕೋಟಿ ಕೋಟಿ ಕನ್ನಡಿಗರ ಖುಷಿಗೆ ಕಾರಣರಾಗಿದ್ರು. ಅಲ್ದೇ ಡಬ್ಲ್ಯೂಪಿಎಲ್​ ಟೂರ್ನಿಯಲ್ಲಿ ಈ ಬಾರಿ 300 ರನ್​ಗಳಿಸಿ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇದೀಗ ಟೀಂ ಇಂಡಿಯಾದಲ್ಲೂ ಕೂಡ ಅತ್ಯದ್ಭುತ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದಾರೆ. ಅದೂ ಕೂಡ ನಮ್ಮ ಬೆಂಗಳೂರು ಸ್ಟೇಡಿಯಮ್​ನಲ್ಲಿ ಅನ್ನೋದೇ ಮತ್ತೊಂದು ಖುಷಿಯ ವಿಚಾರ.

Shwetha M

Leave a Reply

Your email address will not be published. Required fields are marked *