ಸರಣಿ ಗೆದ್ದ ಭಾರತದ ಸಿಂಹಿಣಿಯರು – ಹರಿಣಗಳ ಟಾರ್ಗೆಟ್ ಮಿಸ್ ಆಗಿದ್ದೇಗೆ?
4 ಶತಕ.. ಸ್ಮೃತಿ ಬೌಲಿಂಗ್ ಮೋಡಿ!

ಸರಣಿ ಗೆದ್ದ ಭಾರತದ ಸಿಂಹಿಣಿಯರು – ಹರಿಣಗಳ ಟಾರ್ಗೆಟ್ ಮಿಸ್ ಆಗಿದ್ದೇಗೆ?4 ಶತಕ.. ಸ್ಮೃತಿ ಬೌಲಿಂಗ್ ಮೋಡಿ!

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪುರುಷರ ತಂಡ ಭರ್ಜರಿ ಪರ್ಫಾಮೆನ್ಸ್ ನೀಡ್ತಿದೆ. ಈಗಾಗ್ಲೇ ಸೂಪರ್ 8 ಸುತ್ತಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯ ಆಡೋಕೆ ರೆಡಿಯಾಗಿದ್ದಾರೆ. ಮತ್ತೊಂದ್ಕಡೆ ಮಹಿಳಾ ತಂಡ ಕೂಡ ಭರ್ಜರಿ ಪ್ರದರ್ಶನ ನೀಡ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ದಿನಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರಣರೋಚಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನ ಕೈ ವಶ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಒಂದು ಪಂದ್ಯದಲ್ಲಿ ಸಿಡಿದ ಸೆಂಚುರಿಗಳೆಷ್ಟು? ಬರೆದ ದಾಖಲೆಗಳೆಷ್ಟು? ಸ್ಮೃತಿ ಮಂದಾನ ಮಾಡಿದ ಸಾಧನೆ ಎಂಥಾದ್ದು ಅನ್ನೋ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:IND Vs AFG.. ಕೊಹ್ಲಿಗೆ ಕೊಕ್? – ಪ್ಲೇಯಿಂಗ್ 11ನಲ್ಲಿ ಯಾರಿಗೆಲ್ಲಾ ಚಾನ್ಸ್?  

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್​ಗಳ ರಣರೋಚಕ ಜಯ ಸಾಧಿಸಿದೆ. ಲಾಸ್ಟ್ ಮೂಮೆಂಟ್​ವರೆಗೂ ಗೆಲುವಿಗಾಗಿ ಹೋರಾಡಿದ ಆಫ್ರಿಕಾ ತಂಡ ವಿರೋಚಿತ ಸೋಲು ಕಂಡಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲಿ ರನ್ ಕಲೆ ಹಾಕೋಕೆ ಒದ್ದಾಡಿತ್ತು. ಮೊದಲ 10 ಓವರ್‌ಗಳಲ್ಲಿ ಜಸ್ಟ್ 28 ರನ್ ಅಷ್ಟೇ ಗಳಿಸಿತ್ತು. 17 ಓವರ್‌ಗಳಲ್ಲಿ ಟೀಂ ಇಂಡಿಯಾ 50 ರನ್‌ಗಳಷ್ಟೇ ಕಲೆ ಹಾಕಿತ್ತು. ಆದರೆ ಇದಾದ ಬಳಿಕ ಮಂಧಾನ ಮತ್ತು ಹೇಮಲತಾ ವೇಗದ ಬ್ಯಾಟಿಂಗ್ ನಡೆಸಿ ಕೇವಲ 57 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿದ್ರು. ಈ ವೇಳೆ ಮಂಧಾನ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹೇಮಲತಾ ಅವರ ವಿಕೆಟ್ ಪತನದ ನಂತರ, ಮಂಧಾನ ಜೊತೆಗೂಡಿದ ನಾಯಕಿ ಹರ್ಮನ್‌ಪ್ರೀತ್ ಸ್ಫೋಟಕ ಆಟಕ್ಕೆ ಮುಂದಾದರು. ಇವರಿಬ್ಬರೂ ಕೇವಲ 90 ಎಸೆತಗಳಲ್ಲಿ ಶತಕದ ಜೊತೆಯಾಟ ನೀಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಹಿಮ್ಮೆಟ್ಟಿಸಿದರು. ಹರ್ಮನ್‌ಪ್ರೀತ್ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಮಂಧಾನ 103 ಎಸೆತಗಳಲ್ಲಿ ದಾಖಲೆಯ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಸ್ಮೃತಿ 120 ಎಸೆತಗಳಲ್ಲಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್​ಗಳ ಇನ್ನಿಂಗ್ಸ್ ಆಡಿದರೆ, ಹರ್ಮನ್​ಪ್ರೀತ್ ಕೌರ್ ತಮ್ಮ ಇನ್ನಿಂಗ್ಸ್​ನಲ್ಲಿ 88 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಬಾರಿಸಿದರು. ಅಲ್ಲದೆ ಈ ಇಬ್ಬರೂ 136 ಎಸೆತಗಳಲ್ಲಿ 171 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ತಂಡ 300 ರ ಗಡಿ ದಾಟುವಂತೆ ಮಾಡಿದರು. ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಈ ಆಟಗಾರ್ತಿಯರಿಂದಲೇ ಭಾರತ ಮಹಿಳಾ ತಂಡ 325 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

326 ರನ್​​ಗಳ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾಗೂ ಕೂಡ ಉತ್ತಮ ಆರಂಭ ಸಿಗಲಿಲ್ಲ. ತಂಡ 14 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ತಾಜ್ಮೀನ್ ಬ್ರಿಟ್ಸ್ 11 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಲಷ್ಟೇ ಶಕ್ತರಾದರು. ಅನ್ನೆಕೆ ಬಾಷ್ 23 ಎಸೆತಗಳಲ್ಲಿ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಲೂಸ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಇದಾದ ಬಳಿಕ ಕ್ಯಾಪ್ ಮತ್ತು ಲಾರಾ ನಡುವೆ 170 ಎಸೆತಗಳಲ್ಲಿ 184 ರನ್‌ಗಳ ಜೊತೆಯಾಟವಾಡಿದ್ರು. ಮರಿಜ್ನೆ ಕ್ಯಾಪ್ 94 ಎಸೆತಗಳಲ್ಲಿ 114 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು. ಕೊನೆಯಲ್ಲಿ ನಡಿನ್ ಡಿ ಕ್ಲರ್ಕ್ 22 ಎಸೆತಗಳಲ್ಲಿ 28 ರನ್ ಗಳಿಸಿದರು. ಆರಂಭದಿಂದಲೂ ಗೆಲುವಿಗಾಗಿ ಹೋರಾಟ ನೀಡಿದ ನಾಯಕಿ ಲಾರಾ ವೊಲ್ವಾರ್ಡ್ 135 ಎಸೆತಗಳಲ್ಲಿ 135 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿದ್ದವು. ಕೊನೆಯ ಓವರ್‌ನಲ್ಲಿ ಆಫ್ರಿಕಾ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಈ ವೇಳೆ ಭಾರತದ ಪರ ಪೂಜಾ ವಸ್ತ್ರಾಕರ್ ಬೌಲಿಂಗ್​ಗೆ ಇಳಿದಿದ್ರು. ಪೂಜಾ ಅವರ ಎರಡನೇ ಎಸೆತದಲ್ಲಿ ಡಿ ಕ್ಲರ್ಕ್ ಬೌಂಡರಿ ಬಾರಿಸಿದರು. ಇನ್ನೇನು ಪಂದ್ಯ ಕೈತಪ್ಪುತ್ತಾ ಅಂತಾ ಟೀಂ ಇಂಡಿಯಾ ಆಟಗಾರ್ತಿಯರು ಹಾಗೂ ಫ್ಯಾನ್ಸ್ ಆತಂಕದಲ್ಲಿದ್ರು. ಬಟ್ ನಂತರ ಪೂಜಾ ಮುಂದಿನ ಎರಡು ಎಸೆತಗಳಲ್ಲಿ ಆಫ್ರಿಕಾ ಪ್ಲೇಯರ್ಸ್​ಗೆ ಮರ್ಮಾಘಾತ ನೀಡಿದ್ರು. ವಸ್ತ್ರಾಕರ್ ಮೂರನೇ ಎಸೆತದಲ್ಲಿ ಡಿ ಕ್ಲರ್ಕ್ ಅವರನ್ನು ಔಟ್ ಮಾಡಿದರೆ, ಮುಂದಿನ ಎಸೆತದಲ್ಲಿ ಶಾಂಗಾಸೆ ವಿಕೆಟ್ ಬೇಟೆಯಾಡಿದ್ರು. ವಸ್ತ್ರಾಕರ್ ಕೊನೆಯ ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿದ್ದರಿಂದ ಟೀಂ ಇಂಡಿಯಾ ಪಂದ್ಯ ಹಾಗೂ ಸರಣಿಯನ್ನು ರೋಚಕವಾಗಿ ಗೆದ್ದುಕೊಂಡಿತು.

ಅಸಲಿಗೆ ಈ ಪಂದ್ಯದ ಬಗ್ಗೆ ಇನ್ನೊಂದು ವಿಚಾರವನ್ನ ನಿಮಗೆ ಹೇಳಲೇಬೇಕು. ಹೇಳಿ ಕೇಳಿ ನಮ್ಮ ವಿರಾಟ್ ಕೊಹ್ಲಿ ಬ್ಯಾಟ್ ಬೀಸೋದ್ರಲ್ಲಿ ಎತ್ತಿದ ಕೈ. ಅದೇ ರೀತಿ ಟೀಮ್​ ಇಂಡಿಯಾದ ಮಹಿಳಾ ತಂಡದಲ್ಲೂ ಸ್ಮೃತಿ ಮಂದನಾ ಬ್ಯಾಟಿಂಗ್ ಮಾಡುವುದರಲ್ಲಿ ಶ್ರೇಷ್ಠ ಆಟಗಾರ್ತಿ. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐಸಿಸಿ ಚಾಂಪಿಯಲ್​ ಟ್ರೋಫಿಯಲ್ಲಿ ಸ್ಮೃತಿ ಮಂದನಾ ಸತತ 2 ಶತಕ ಸಿಡಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಬುಧವಾರ ನಡೆದ ಮ್ಯಾಚ್​ನಲ್ಲಿ ವಿರಾಟ್​ ಕೊಹ್ಲಿಯಂತೆ ಸ್ಮೃತಿ ಮಂದಾನ ಸೇಮ್ ಟು ಸೇಮ್ ಬೌಲಿಂಗ್ ಮಾಡಿದ್ದಾರೆ.

ಅಷ್ಟೇ ಅಲ್ಲ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ ಮಂಧಾನ ಸುನೆ ಲೂಯಿಸ್ ವಿಕೆಟ್​ ಪಡೆಯುವ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂದನಾ ಹಾಗೂ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಈ ಇಬ್ಬರು ಸ್ಟಾರ್​ ಪ್ಲೇಯರ್ಸ್​ ಬೌಲಿಂಗ್ ಮಾಡುವ ಸ್ಟೈಲ್​ ಹೋಲಿಕೆಯಾಗುತ್ತಿದೆ. ಅಲ್ದೇ ಇಬ್ಬರ ಜೆರ್ಸಿ ನಂಬರ್ ಕೂಡ 18 ಆಗಿದ್ದು ಫ್ಯಾನ್ಸ್ ಅಂತೂ ಫುಲ್ ಥ್ರಿಲ್ ಆಗಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಬೆವರಿಳಿಸಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ. ಮಿಥಾಲಿ ಕೂಡ 7 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಮಿಥಾಲಿ 232 ಪಂದ್ಯಗಳಲ್ಲಿ ಏಳು ಶತಕ ಸಿಡಿಸಿದ್ದರು, ಆದರೆ ಸ್ಮೃತಿ 83 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಲ್ಯಾನಿಂಗ್ 103 ಪಂದ್ಯಗಳಲ್ಲಿ 15 ಶತಕ ಸಿಡಿಸಿದ್ದಾರೆ. ಇನ್ನು ಸೌತ್ ಆಫ್ರಿಕಾ ಮತ್ತು ಭಾರತ ಮಹಿಳಾ ತಂಡದ ಎರಡನೇ ಏಕದಿನ ಪಂದ್ಯದಲ್ಲಿ ಒಟ್ಟು 4 ಶತಕಗಳು ದಾಖಲಾಗಿದ್ದು ವಿಶ್ವ ದಾಖಲೆಯಾಗಿದೆ.  ಈ ಪಂದ್ಯದಲ್ಲಿ ಎರಡು ತಂಡಗಳಿಂದ ಬರೋಬ್ಬರಿ 646 ರನ್ ದಾಖಲಾಗಿದೆ. ಒಟ್ನಲ್ಲಿ ಒಂದ್ಕಡೆ ಬಾಯ್ಸ್ ಟಿ-20 ವಿಶ್ವಕಪ್​ನಲ್ಲಿ ಅಬ್ಬರಿಸುತ್ತಿದ್ರೆ ಮಹಿಳಾ ಪಡೆ ಕೂಡ ನಾವೇನ್ ಕಮ್ಮಿ ಅಂತಾ ಎದುರಾಳಿಗಳ ಬೆವರಿಳಿಸಿದೆ. ಅದ್ರಲ್ಲೂ ಸ್ಮೃತಿ ಬೌಲಿಂಗ್ ಅಂತೂ ಹವಾ ಎಬ್ಬಿಸಿದೆ.

Shwetha M

Leave a Reply

Your email address will not be published. Required fields are marked *