36 ಮಂದಿ ಸಾವಿನ ಬೆನ್ನಲ್ಲೇ ಬೇಲೇಶ್ವರ ದೇವಸ್ಥಾನ ನೆಲಸಮ – ದೇವಸ್ಥಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಭೋಪಾಲ್: ರಾಮನವಮಿಯಂದು ಮೆಟ್ಟಿಲುಬಾವಿ ಕುಸಿದು 36 ಜನರ ಸಾವಿಗೆ ಕಾರಣವಾಗಿದ್ದ ಇಂದೋರ್ ನ ಬೇಲೇಶ್ವರ ದೇವಸ್ಥಾನವನ್ನು ಅಲ್ಲಿನ ಪಾಲಿಕೆ ನೆಲಸಮಗೊಳಿಸುತ್ತಿದೆ.
ಅಕ್ರಮ ಕಟ್ಟಡ ಕಾಮಗಾರಿ ಹಿನ್ನೆಲೆ ಈ ದೇವಸ್ಥಾನವನ್ನು 5 ಬುಲ್ಡೋಜರ್‌ಗಳು ನೆಲಸಮಗೊಳಿಸುತ್ತಿವೆ. ದೇವಾಲಯದಲ್ಲಿದ್ದ ದೇವರ ವಿಗ್ರಹಗಳನ್ನು ಮತ್ತೊಂದು ದೇಗುಲಕ್ಕೆ ಸ್ಥಳಾಂತರಿಸಲು ಸ್ಥಳೀಯಾಡಳಿತಕ್ಕೆ ಅಧಿಕಾರಿಗಳು ಕಳುಹಿಸಿದ್ದಾರೆ. ಉಪ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಪೊಲೀಸರು ಬೆಳಗ್ಗೆಯೇ ದೇವಾಲಕ್ಕೆ ಆಗಮಿಸಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಗಲ್ವಾ ಅನುಮತಿ? – ಕಾರಣ ಏನು ಗೊತ್ತಾ?
ಕುಸಿದ ಬೇಲೇಶ್ವರ ದೇವಾಲಯದ ಪ್ರದೇಶವು ಅಕ್ರಮ ರಚನೆಯಾಗಿದ್ದು, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷ ನೆಲಸಮ ಮಾಡಲು ಮೆಟ್ಟಿಲುಬಾವಿಯ ಹೊದಿಕೆಯನ್ನು ಗುರುತಿಸಿತ್ತು. ಆದರೆ ದೇವಾಲಯದ ಟ್ರಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತೆ ಅಂತಾ ಎಚ್ಚರಿಸಿದ ನಂತರ ಅಧಿಕಾರಿಗಳು ನೆಲಸಮ ಕಾರ್ಯದಿಂದ ಹಿಂದೆ ಸರಿದಿದ್ದರು.
ರಾಮನವಮಿಯಂದು ದೇವಾಲಯದಲ್ಲಿ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಧ್ಯಾಹ್ನ ಪುರಾತನ ಬಾವಡಿ (ದೊಡ್ಡ ಬಾವಿ) ಯ ಮೇಲ್ಛಾವಣೆ ಮೇಲೆ ಅನೇಕರು ನಿಂತಿದ್ದರು. ಈ ವೇಳೆ ಭಾರ ತಡೆಯಲಾಗದೆ ಮೇಲ್ಛಾವಣಿ ಕುಸಿದಿದ್ದು, ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದು, 36 ಮಂದಿ ಸಾವನ್ನಪ್ಪಿದ್ದರು.
ಈ ಸಂಬಂಧ ದೇವಸ್ಥಾನದ ಟ್ರಸ್ಟ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ. ಅಕ್ರಮ ಕಟ್ಟಡ ತೆರವು ಕಾರ್ಯ ಮಾಡದೇ ಇದ್ದಿದ್ದ ನಗರಸಭೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.