ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ – ಸಾವಿನ ಸಂಖ್ಯೆ 35 ಕ್ಕೆ ಏರಿಕೆ
ಮಧ್ಯಪ್ರದೇಶ: ರಾಮ ನವಮಿ ಆಚರಣೆ ವೇಳೆ ದೇವಸ್ಥಾನವೊಂದರ ಮೆಟ್ಟಿಲುಬಾವಿ ಕುಸಿತ ಅವಘಡದಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ರಾಮನವಮಿ ನಿಮಿತ್ತ ಇಂದೋರ್ನ ಬೇಲೇಶ್ವರ ದೇವಸ್ಥಾನದಲ್ಲಿ ಗುರುವಾರ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಧ್ಯಾಹ್ನ ಪುರಾತನ ಬಾವಡಿ (ದೊಡ್ಡ ಬಾವಿ) ಯ ಮೇಲ್ಛಾವಣೆ ಮೇಲೆ ಅನೇಕರು ನಿಂತಿದ್ದರು. ಈ ವೇಳೆ ಭಾರ ತಡೆಯಲಾಗದೆ ಮೇಲ್ಛಾವಣಿ ಕುಸಿದಿದ್ದು, ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದರು.
ಇದನ್ನೂ ಓದಿ: ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ – ಸಾವಿನ ಸಂಖ್ಯೆ 13 ಕ್ಕೆ ಏರಿಕೆ
ಸುದ್ದಿ ತಿಳಿಯುತ್ತಿದ್ದಂತೆಯ ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಈ ವರೆಗೂ 19 ಮಂದಿಯನ್ನು ರಕ್ಷಣೆ ಮಾಡಿದ್ದು, 26 ಮೃತದೇಹಗಳನ್ನು ಹೊರತೆಗೆದಿದ್ದಾರೆ. 14 ಮಂದಿಯ ಗಾಯಾಳುಗಳ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಅಂತಾ ಪೊಲೀಸರು ಹೇಳಿದ್ದಾರೆ.
ಬಾವಿಯಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಪತ್ತೆಯಾಗಿರುವ ಭಕ್ತರಿಗಾಗಿ ಶೋಧ ಮುಂದುವರೆದಿದೆ ಎಂದು ಮಾಹಿತಿ ಪೊಲೀಸರು ನೀಡಿದ್ದಾರೆ.
ದೇವಸ್ಥಾನದ ಆವರಣದಲ್ಲಿದ್ದ ಜನದಟ್ಟಣೆಯೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಬಾವಿಯ ನೀರಿನಲ್ಲಿ ಮತ್ತಷ್ಟು ದೇಹಗಳು ಸಿಲುಕಿರುವ ಸಾಧ್ಯತೆ ಇದೆ. ಇದೀಗ ಬಾವಿಯಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ವಿಶೇಷ ಉಪಕರಣಗಳ ಬಳಸಿಕೊಂಡು ಜನರನ್ನು ಹಗ್ಗಗಳಿಂದ ಮೇಲಕ್ಕೆತ್ತವ ಕೆಲಸ ಮಾಡಲಾಗುತ್ತಿದೆ. ಸಂಜೆಯವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು, ರಕ್ಷಣಾ ಕಾರ್ಯಾಚರಣೆ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಅವರ ಶಾಸಕ ಪುತ್ರ ಆಕಾಶ್ ವಿಜಯವರ್ಗಿಯಾ, ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.