ಶ್ವಾನಗಳಿಗೂ ಆರಂಭವಾಯ್ತು “ಡಾಭಾ” – ಇಲ್ಲಿ ನಾಯಿಗಳಿಗೂ ಸಿಗುತ್ತೆ ಭರ್ಜರಿ ಊಟ
ಇತ್ತೀಚಿನ ದಿನಗಳಲ್ಲಿ ಪ್ರಾಣಿ, ಪಕ್ಷಿ ಪ್ರಿಯರು ಎಲ್ಲಾ ಕಡೆ ಇದ್ದಾರೆ. ತಮ್ಮ ಪೆಟ್ ಜೊತೆಗೆ ಜಾಲಿ ರೈಡ್, ಹುಟ್ಟು ಹಬ್ಬ ಆಚರಣೆ, ಮದುವೆ, ಸೀಮಂತ ಮಾಡುವುದನ್ನು ಕೇಳಿದ್ದೇವೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಹಿಂದೂ ಸಂಪ್ರದಾಯದಂತೆ ಗಿಳಿಗಳಿಗೆ ಮದುವೆ ಮಾಡಿದ್ದು, ಇನ್ನೊಬ್ಬ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶ್ವಾನವನ್ನು ಉಳಿಸಿಕೊಳ್ಳಲು ತನ್ನ ಮನೆಯನ್ನೇ ಮಾರಾಟ ಮಾಡಲು ಹೊರಟಿದ್ದ ಸುದ್ದಿಯನ್ನು ನಾವು ಕೇಳಿದ್ದೆವು. ಇಂತಹ ಸಾಕಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂಧೋರ್ ನಲ್ಲಿ ದಂಪತಿ ನಾಯಿಗಳಿಗಾಗಿ ಡಾಭಾವನ್ನೇ ಶುರು ಮಾಡಿದ್ದಾರೆ.
ಹೌದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಾಯಿ ಪ್ರೇಮಿ ಬಲರಾಜ್ ಝಾಲಾ ದಂಪತಿ ನಾಯಿಗಳಿಗಾಗಿ ಡಾಭಾವೊಂದನ್ನು ಆರಂಭಿಸಿದ್ದಾರೆ. ಅದರ ಹೆಸರು ‘ದಿ ಡಾಗ್ಗಿ ಡಾಭಾ’. ಈ ವಿಶಿಷ್ಟ ರೆಸ್ಟೋರೆಂಟ್ ಅನ್ನು ವಿಶೇಷವಾಗಿ ನಾಯಿಗಳಿಗಾಗಿ ಹಾಗೂ ನಾಯಿಗಳ ಆರೈಕೆಗೆ ಪ್ರಾಧಾನ್ಯತೆ ನೀಡುವ ಮಾಲೀಕರನ್ನು ಆಕರ್ಷಿಸಲು ಆರಂಭಿಸಲಾಗಿದೆಯಂತೆ. ಈ ಡಾಭಾದಲ್ಲಿ ನಾಯಿಗಳಿಗೆ ಆಹಾರ, ವಾಸ್ತವ್ಯ ಹೂಡಲು ಸ್ಥಳಾವಕಾಶ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡಲಾಗುತ್ತಿದೆಯಂತೆ. ಇಷ್ಟೇ ಅಲ್ಲದೆ ಶ್ವಾನಗಳಿಗೆ ಈ ಡಾಭಾದಿಂದ ಆಹಾರ ಪಾರ್ಸೆಲ್ ಕೂಡ ನೀಡಲಾಗುತ್ತದೆಯಂತೆ.
ಇದನ್ನೂ ಓದಿ: ಒಂದು ನಿಮಿಷದಲ್ಲೇ ಒಂದು ಸಾವಿರ ಚಪ್ಪಾಳೆ – ಯುವಕನಿಂದ ಸೃಷ್ಟಿಯಾಯ್ತು ಹೊಸ ದಾಖಲೆ
ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಲಾಕ್ ಡೌನ್ ಸಮಯದಲ್ಲಿ ನಾಯಿಗಳು ಸಹ ಆಹಾರವನ್ನು ಹುಡುಕಲು ತುಂಬಾ ಹೆಣಗಾಡುತ್ತಿದ್ದವು. ಝಾಲಾ ಅವರು ಆ ಸಮಯದಲ್ಲಿ ಮನೆಗೆ ರಾತ್ರಿ ಹಿಂದಿರುಗುವಾಗ ರಸ್ತೆಯ ಮಧ್ಯದಲ್ಲಿ ನೋಡಿದ ನಾಯಿಗಳಿಗೆ ತಮ್ಮ ಕೈಲಾದಷ್ಟು ಆಹಾರವನ್ನು ನೀಡುತ್ತಿದ್ದರು. ಬೀದಿ ಬದಿಯಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದ ನಾಯಿಗಳನ್ನು ಕಂಡ ಝಾಲಾ ನಾಯಿಗಳಿಗಾಗಿಯೇ ಡಾಭಾ ಆರಂಭಿಸಬೇಕು ಅಂತಾ ಆಲೋಚಿಸಿದ್ದರಂತೆ. 2020ರಲ್ಲಿ ಕೊನೆಗೂ ತಮ್ಮ ಆಸೆಯಂತೆ ನಾಯಿಗಳಿಗೆ ಡಾಭಾ ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾಭಾ ಮಾಲೀಕರಾದ ಝಾಲಾ, “ನಾನು ಮೊದಲಿನಿಂದಲೂ ನಾಯಿ ಪ್ರೇಮಿ. ನಾನು 2019 ರವರೆಗೆ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ರಾತ್ರಿ ಮನೆಗೆ ಹಿಂದಿರುಗುವಾಗ ನಾಯಿಗಳಿಗೆ ಆಹಾರವನ್ನು ತೆಗೆದುಕೊಂಡು ಬರುತ್ತಿದ್ದೆ. ಆಗ ನನಗೆ ನಾಯಿಗಳಿಗಾಗಿ ಡಾಭಾ ತೆರೆಯುವ ಆಲೋಚನೆ ಬಂತು ಮತ್ತು ನಾನು ನನ್ನ ಹೆಂಡತಿಯೊಂದಿಗೆ ಸೇರಿಕೊಂಡು 2020 ರಲ್ಲಿ ಈ ಡಾಭಾವನ್ನು ಆರಂಭಿಸಿದ್ದೇವೆ” ಎಂದು ಅವರು ಹೇಳಿದರು.
ಈ ಡಾಭಾದಲ್ಲಿ ಸಸ್ಯಾಹಾರಿ ಮತ್ತು ಮಾಂಸಹಾರಿ ಆಹಾರಗಳು ಲಭ್ಯವಿರುತ್ತದೆ. ಅಲ್ಲದೇ ದಿನಕ್ಕೆ 7 ರಿಂದ 500 ರೂಪಾಯಿ ಬೆಲೆಗಳೊಂದಿಗೆ ನಾಯಿ ಆಹಾರ ಮಾರಾಟ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಡಾಗ್ಗಿ ಡಾಭಾ ನಾಯಿಗಳ ಹುಟ್ಟುಹಬ್ಬಕ್ಕಾಗಿ ಕಸ್ಟಮೈಸ್ ಮಾಡಿದ ಕೇಕ್ ಗಳನ್ನು ಸಹ ತಯಾರಿಸುತ್ತದೆ. ಇದು ಅವರ ವಿಶೇಷ ದಿನವನ್ನು ವಿಶೇಷ ಶೈಲಿಯಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ ಎಂದು ಝಾಲಾ ಹೇಳಿದ್ದಾರೆ.
“ನನ್ನ ವ್ಯವಹಾರವು ಆನ್ಲೈನ್ ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ನಾಯಿ ಆಹಾರ ವಿತರಣೆ ಮಾಡಲು ಹುಡುಗರನ್ನು ಸಹ ಇರಿಸಲಾಗಿದೆ. ಅವರು ದಿನದ ಎರಡು ಅವಧಿ ಆಹಾರವನ್ನು ಗ್ರಾಹಕರಿಗೆ ನೀಡುತ್ತಾರೆ. ಅಲ್ಲದೇ ಡಾಭಾವು ನಾಯಿಗಳಿಗೆ ಬೋರ್ಡಿಂಗ್ ಸೇವೆಗಳನ್ನು ಸಹ ನೀಡುತ್ತದೆ ಎಂದು ಹೇಳಿದ್ದಾರೆ.
View this post on Instagram